ಕರ್ನಾಟಕ ಕ್ರೀಡಾಕೂಟ: ಹ್ಯಾಮರ್ ತ್ರೋನಲ್ಲಿ ಚಿನ್ನ ಗೆದ್ದ ಮೂಡುಬಿದಿರೆಯ ಅಮ್ರೀನ್

ಅಮ್ರೀನ್
ಉಡುಪಿ: ಅಜ್ಜರಕಾಡಿನ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದಿರುವ ಕರ್ನಾಟಕ ಕ್ರೀಡಾಕೂಟ-2025ರ ಅತ್ಲೆಟಿಕ್ ಸ್ಪರ್ಧೆಗಳಲ್ಲಿ ಇಂದು ಕರಾವಳಿಯ ಮಹಿಳಾ ಅತ್ಲೀಟ್ಗಳು ಮೂರು ಚಿನ್ನದ ಪದಕಗಳನ್ನು ಗೆದ್ದುಕೊಂಡರು. ಪುರುಷರ ವಿಭಾಗದ ನಾಲ್ಕು ಹಾಗೂ ಮಹಿಳೆಯರ ವಿಭಾಗದಲ್ಲಿ ಆರು ಸೇರಿ ಒಟ್ಟು 10 ಸ್ಪರ್ಧೆಗಳ ಫೈನಲ್ ಇಂದು ನಡೆಯಿತು.
ಮಂಗಳೂರಿನಲ್ಲಿ ಆದಾಯತೆರಿಗೆ ಇಲಾಖೆಯ ಉದ್ಯೋಗಿಯಾಗಿರುವ ಮೂಡುಬಿದಿರೆಯ ಅಮ್ರೀನ್ ಅವರು ಮಹಿಳೆಯರ ಹ್ಯಾಮರ್ ತ್ರೋನಲ್ಲಿ ಚಿನ್ನದ ಪದಕ ಗೆದ್ದರೆ, ಸುಶ್ಮಾ ಬಿ. ಅವರು ಡಿಸ್ಕಸ್ ಎಸೆತದಲ್ಲಿ ಅಗ್ರಸ್ಥಾನಿಯಾದರು. ಉಡುಪಿಯ ಪವಿತ್ರ ಟ್ರಿಪಲ್ ಜಂಪ್ನಲ್ಲಿ ಅತಿ ಹೆಚ್ಚು ದೂರ ನೆಗೆದು ಮೊದಲಿಗರಾಗಿ ಚಿನ್ನದ ಪದಕವನ್ನು ಜಯಿಸಿದರು.
ಪುರುಷರ ವಿಭಾಗದಲ್ಲಿ ಆತಿಥೇಯ ತಂಡಕ್ಕೆ ದಕ್ಕಿದ್ದು ಒಂದೇ ಒಂದು ಯಶಸ್ಸು ಯಶಸ್ ಗೌಡ ಅವರ ಮೂಲಕ. ಟ್ರಿಪಲ್ ಜಂಪ್ನಲ್ಲಿ ಯಶಸ್ ಗೌಡ ಅವರು 15.28ಮೀ. ದೂರ ನೆಗೆದು ಮೊದಲಿಗರಾದರು. ಉಳಿದಂತೆ ಬೆಂಗಳೂರಿನ ಸ್ಪರ್ಧಿಗಳು ಎರಡರಲ್ಲಿ ಹಾಗೂ ಧಾರವಾಡದ ಅತ್ಲೀಟ್ 3000ಮೀ. ಸ್ಟೀಲ್ಚೇಸ್ನಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು.
ಮಹಿಳೆಯರ ವಿಭಾಗದಲ್ಲಿ ಮೂರು ಚಿನ್ನದ ಪದಕಗಳು ಹುಬ್ಬಳ್ಳಿ, ಹಾಸನ ಹಾಗೂ ಶಿವಮೊಗ್ಗ ಅತ್ಲೀಟ್ಗಳ ಪಾಲಾದರೆ ಉಳಿದ ಮೂರನ್ನು ಕರಾವಳಿಯ ಮಹಿಳೆಯರು ಪಡೆದರು. ಪವಿತ್ರ ಅವರು ಟ್ರಿಪಲ್ಜಂಪ್ನಲ್ಲಿ 12.80ಮೀ. ದೂರ ನೆಗೆದರೆ, ಅಮ್ರೀನ ಅವರು ಹ್ಯಾಮರ್ನ್ನು 44.20ಮೀ. ದೂರ ಎಸೆದರು. ಅದೇ ರೀತಿ ಸುಶ್ಮಾ ಅವರು ಡಿಸ್ಕಸ್ ಎಸೆತದಲ್ಲಿ 42.63ಮೀ. ಸಾಧನೆ ಮಾಡಿದರು.
ಎರಡನೇ ದಿನದ ಫಲಿತಾಂಶ: ಪುರುಷರ ವಿಭಾಗ
400ಮೀ.: 1.ಶ್ರೀನಾಥ್ ಗಣಪತ್ ದಲ್ವಿ ಬೆಂಗಳೂರು (48.80ಸೆ.), 2.ದಯಾನಂದ ಎಚ್.ದುಂಪಣ್ಣವರ್ ಬೆಳಗಾವಿ, 3.ಭುವನ್ ಸಂಜೀವ ಪೂಜಾರಿ ಬೆಂಗಳೂರು.
1,500ಮೀ: 1.ವೈಭವ ಮಾರುತಿ ಪಾಟೀಲ್ ಬೆಂಗಳೂರು (3ನಿ55.42ಸೆ.), 2.ಕಮಲಕಣ್ಣನ್ ಎಸ್., ಬೆಂಗಳೂರು ನಗರ, 3. ಕಲ್ಯಾಣ ಜೆ.ಆರ್. ಬೆಂಗಳೂರು.
3000ಮೀ. ಸ್ಟೀಪಲ್ ಚೇಸ್:1.ನಾಗರಾಜ ವಿ.ದಿವಾಟೆ ಧಾರವಾಡ (9ನಿ.36.24ಸೆ.), 2.ಪಿ.ಚಂದ್ರಪ್ಪ ಧಾರವಾಡ, 3.ಭೀಮಶಂಕರ್, ಬೆಂಗಳೂರು ನಗರ.
ಟ್ರಿಪಲ್ ಜಂಪ್: 1.ಯಶಸ್ ಆರ್.ಗೌಡ ಮಂಗಳೂರು (15.28ಮೀ.), 2.ರಾಧಾಕೃಷ್ಣ ಆರ್. ಬೆಂಗಳೂರು ನಗರ, 3.ಅಬ್ದುಲ್ ಮುನಾಫ್ ಬೆಂಗಳೂರು.
ಮಹಿಳೆಯರ ವಿಭಾಗ:
400ಮೀ.: 1.ಮೇಘಾ ಮುನವಳ್ಳಿಮಠ ಹುಬ್ಬಳ್ಳಿ (55.49ಸೆ.), 2.ಅಭಿಗ್ನಾ ಪಿ. ಶಿವಮೊಗ್ಗ, 3.ಎನ್.ಸಿ.ಮಾನಸ ಬೆಂಗಳೂರು.
1,500ಮೀ.:1.ಸ್ಮಿತಾ ಡಿ.ಆರ್., ಹಾಸನ, 2.ರೇಖಾ ಬಸಪ್ಪ ಪಿರೋಜಿ ಬೆಳಗಾವಿ, 3.ಶಿಲ್ಪಾ ರಾಕೇಶ್ ಬೆಳಗಾವಿ.
3,000ಮೀ.ಸ್ಟೀಪಲ್ಚೇಸ್: 1.ದೀಕ್ಷಾ, ಶಿವಮೊಗ್ಗ (11ನಿ.58.25ಸೆ.), 2.ನಕೋಶಾ ಮಹಾದೇವ ಮಂಗಾನ್ಕರ್ ಬೆಳಗಾವಿ, 3.ಸ್ಪಂದನ ಪಿ.ಎಸ್. ಹೊಸಕೋಟೆ.
ಟ್ರಿಪಲ್ಜಂಪ್:1.ಪವಿತ್ರ ಉಡುಪಿ (12.80ಮೀ.), 2.ನಿತ್ಯಾಶ್ರೀ ಯು. ಬೆಂಗಳೂರು ಗ್ರಾಮಾಂತರ, 3.ಸ್ಮಿತಾ ಪ್ರಮೋದ್ ಕಾಕಟ್ಕರ್ ಬೆಳಗಾವಿ.
ಹ್ಯಾಮರ್ ತ್ರೋ:1.ಅಮ್ರೀನ ದಕ್ಷಿಣ ಕನ್ನಡ (44.20ಮೀ.), 2.ನಿಶೇಲ್ ಡಾಲ್ಫಿನಾ ಡಿಸೋಜ ಮಂಗಳೂರು, 3. ಎಸ್.ನಾಯ್ಕ್ ಬೆಳಗಾವಿ.
ಡಿಸ್ಕಸ್ ಎಸೆತ:1.ಸುಶ್ಮಾ ಬಿ. ದಕ್ಷಿಣ ಕನ್ನಡ (42.63ಮೀ.), 2. ಸುಶ್ಮಾ ಎಂ.ಎನ್. ಮೈಸೂರು, 3.ಐಶ್ವರ್ಯ ಮಾರುತಿ ಬಡಿಗೇರ ಬೆಳಗಾವಿ.
ಗುರುವಾರ 100ಮೀ. ಸ್ಪರ್ಧೆ
ಕ್ರೀಡಾಕೂಟದ ಕೊನೆಯ ದಿನವಾದ ಗುರುವಾರ ಅತ್ಲೆಟಿಕ್ ಸ್ಪರ್ಧೆಯಲ್ಲಿ ಒಟ್ಟು 11 ಚಿನ್ನದ ಪದಕಗಳ ವಿಜೇತರು ನಿರ್ಧಾರವಾಗಬೇಕಿದೆ. ಇವುಗಳಲ್ಲಿ ಪುರುಷರ ವಿಭಾಗದಲ್ಲಿ 7 ಹಾಗೂ ಮಹಿಳೆಯರ ವಿಭಾಗದಲ್ಲಿ ನಾಲ್ಕು ಸ್ಪರ್ಧೆಗಳಿವೆ.
ಪುರುಷರ ವಿಭಾಗದಲ್ಲಿ 100ಮೀ., 400ಮೀ. ಹರ್ಡಲ್ಸ್, 5,000ಮೀ., ಹ್ಯಾಮರ್ ತ್ರೋ, ಹೈಜಂಪ್, ಶಾಟ್ಪುಟ್, ಜಾವೆಲಿನ್ ತ್ರೋ ಸ್ಪರ್ಧೆಗಳು ನಡೆಯಲಿದ್ದು, ಮಹಿಳೆಯರ ವಿಭಾಗದಲ್ಲಿ 100ಮೀ., 5,000ಮೀ, 400ಮೀ. ಹರ್ಡಲ್ಸ್ ಹಾಗೂ ಹೈಜಂಪ್ ಸ್ಪರ್ಧೆಗಳು ನಡೆಯಲಿವೆ.
ಹ್ಯಾಮರ್ ತ್ರೋ ಚಿನ್ನ ಗೆದ್ದ ಬೀದಿ ವ್ಯಾಪಾರಿ ಮಗಳು
ಮೂಡಬಿದರೆಯ ಅಮ್ರೀನ್, ಯುವತಿಯರು ಹೆಚ್ಚಾಗಿ ಸ್ಪರ್ಧಿಸಲು ಬಯಸದ ಹ್ಯಾಮರ್ ತ್ರೋದಲ್ಲಿ ಆಸಕ್ತಿ ಬೆಳೆಸಿಕೊಂಡು ಅದರಲ್ಲಿ ಇದೀಗ ಚಿನ್ನದ ಪದಕವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಪಿಯುಸಿ ಕಲಿಕೆಗಾಗಿ ಮೂಡಬಿದರೆಯ ಜೈನ್ ಪ.ಪೂ.ಕಾಲೇಜಿಗೆ ಸೇರಿದಾಗ ಅಲ್ಲಿನ ದೈಹಿಕ ಶಿಕ್ಷಕ ನವೀನ್ ಎಂ.ಹೆಗ್ಡೆ ಅವರ ಪ್ರೋತ್ಸಾಹ ಹಾಗೂ ಮಾರ್ಗದರ್ಶನದಲ್ಲಿ ಹ್ಯಾಮರ್ ತ್ರೋದಲ್ಲಿ ಅಭ್ಯಾಸ ನಡೆಸಿದ ಅಮ್ರೀನ್ ಅದರಲ್ಲೇ ಮುಂದುವರಿದು ಸಾಧನೆ ಮಾಡುತಿದ್ದಾರೆ.
ಪಿಯುಸಿ ಬಳಿಕ ಪದವಿಯನ್ನು ಸಹ ಜೈನ್ ಕಾಲೇಜಿನಲ್ಲೇ ಮುಂದುವರಿಸಿದ ಅಮ್ರೀನ್ಗೆ ಮೂಡಬಿದರೆಯ ಮುಹಮ್ಮದ್ ಹ್ಯಾರಿಸ್ ಅವರೇ ಕೋಚ್ ಆಗಿದ್ದು, ಅವರ ಮಾರ್ಗದರ್ಶನದಲ್ಲೇ ಈಗಲೂ ಅವರು ತರಬೇತಿ ಮುಂದುವರಿಸಿದ್ದಾರೆ.
2023ರಲ್ಲಿ ನಡೆದ ಮುಕ್ತ ರಾಷ್ಟ್ರೀಯ ಕ್ರೀಡಾಕೂಟದ ಹ್ಯಾಮರ್ ಎಸೆತದಲ್ಲಿ ಅಮ್ರೀನ್ ಅವರು ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಅಮ್ರೀನ್ ಅವರ ತಂದೆ ಗೌಸ್ ಅವರು ಮೂಡಬಿದರೆಯಲ್ಲಿ ಬೀದಿ ವ್ಯಾಪಾರಿ. ಮಂಗಳೂರಿನ ಆದಾಯ ತೆರಿಗೆ ಇಲಾಖೆಯಲ್ಲಿ ಉದ್ಯೋಗಿಯಾ ಗಿರುವ ಅಮ್ರೀನ್ ಹ್ಯಾಮರ್ ತ್ರೋನಲ್ಲೇ ಸಾಧನೆ ಮುಂದುವರಿಸುವ ಸಂಕಲ್ಪ ಮಾಡಿದ್ದಾರೆ.







