ಕರ್ನಾಟಕ ಕ್ರೀಡಾಕೂಟ| ಕಬಡ್ಡಿ: ದಕ್ಷಿಣ ಕನ್ನಡ ತಂಡಗಳಿಗೆ ಅವಳಿ ಚಿನ್ನದ ಪದಕ

ಉಡುಪಿ, ಜ.22: ಅಜ್ಜರಕಾಡಿನ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ಕ್ರೀಡಾಕೂಟದ ಕಬಡ್ಡಿ ಸ್ಪರ್ಧೆಗಳಲ್ಲಿ ದಕ್ಷಿಣ ಕನ್ನಡದ ಪುರುಷ ಮತ್ತು ಮಹಿಳಾ ತಂಡಗಳು ಅಗ್ರಸ್ಥಾನಗಳೊಂದಿಗೆ ಅವಳಿ ಚಿನ್ನದ ಪದಕಗಳನ್ನು ಗೆದ್ದುಕೊಂಡವು.
ಪುರುಷರ ಫೈನಲ್ ಪಂದ್ಯದಲ್ಲಿ ತನ್ನ ಪ್ರಾಬಲ್ಯವನ್ನು ಮತ್ತೊಮ್ಮೆ ತೋರಿಸಿದ ದಕ್ಷಿಣ ಕನ್ನಡ ತಂಡ, ಬಾಗಲಕೋಟೆ ಜಿಲ್ಲಾ ತಂಡವನ್ನು 41-18 ಅಂಕಗಳ ಅಂತರದಿಂದ ಪರಾಭವಗೊಳಿಸಿತು. ವಿರಾಮದ ವೇಳೆ 24-11ರ ಮುನ್ನಡೆ ಯಲ್ಲಿದ್ದ ದಕ್ಷಿಣ ಕನ್ನಡ ಪಂದ್ಯದ ಯಾವುದೇ ಹಂತದಲ್ಲೂ ತನ್ನ ಹಿಡಿತವನ್ನು ಬಿಟ್ಟುಕೊಡಲೇ ಇಲ್ಲ. ಆ ಬಳಿಕವೂ ಆಕ್ರಮಣಕಾರಿಯಾಗಿ ಆಡಿ 17 ಅಂಕಗಳನ್ನು ಸಂಗ್ರಹಿಸಿ ಎದುರಾಳಿಗೆ 7ನ್ನು ಮಾತ್ರ ಬಿಟ್ಟುಕೊಟ್ಟು 23 ಅಂಕಗಳ ಅಂತರದ ಜಯ ದಾಖಲಿಸಿತು.
ಮಹಿಳೆಯರ ವಿಭಾಗದಲ್ಲಿ ದಕ್ಷಿಣ ಕನ್ನಡ, ಮತ್ತೊಂದು ಆತಿಥೇಯ ಜಿಲ್ಲೆಯಾದ ಉಡುಪಿಯ ಮಹಿಳಾ ತಂಡವನ್ನು 33-23 ಅಂಕಗಳ ಅಂತರದಿಂದ ಸೋಲಿಸಿತು. ವಿರಾಮದ ವೇಳೆಗೆ 18-15 ಅಂಕಗಳ ಮುನ್ನಡೆಯಲ್ಲಿದ್ದ ದಕ್ಷಿಣ ಕನ್ನಡದ ಮಹಿಳೆ ಯರು ಬಳಿಕದ ಆಟದಲ್ಲಿ 15 ಅಂಕ ಸಂಪಾದಿಸಿದರಲ್ಲದೇ ಎದುರಾಳಿಗೆ ಕೇವಲ 8 ಅಂಕ ಬಿಟ್ಟುಕೊಟ್ಟು ಒಟ್ಟಾರೆಯಾಗಿ 10 ಅಂಕಗಳ ಅಂತರದ ಜಯ ದಾಖಲಿಸಿದರು.





