ಕರ್ನಾಟಕ ಕ್ರೀಡಾಕೂಟದ ಪುರುಷರ ಹಾಕಿ: ಹಾವೇರಿ ಜಿಲ್ಲಾ ತಂಡಕ್ಕೆ ಚಿನ್ನದ ಪದಕ

ಉಡುಪಿ, ಜ.23: ಮಧ್ಯಂತರಕ್ಕೆ ಮುನ್ನ ಮಣಿಕಂಠ ಭಾರಿಸಿದ ಏಕೈಕ ಗೋಲಿನ ನೆರವಿನಿಂದ ಹಾವೇರಿ ಜಿಲ್ಲಾ ತಂಡ ಹಾಸನ ತಂಡವನ್ನು ಮಣಿಸುವ ಮೂಲಕ ಕರ್ನಾಟಕ ಕ್ರೀಡಾಕೂಟದ ಪುರುಷರ ಹಾಕಿಯಲ್ಲಿ ಚಿನ್ನದ ಪದಕವನ್ನು ಕೊರಳಿಗೇರಿಸಿಕೊಂಡಿತು.
ಮಣಿಪಾಲ ಎಂಡ್‌ಪಾಯಿಂಟ್‌ನ ಹಾಕಿ ಸ್ಟೇಡಿಯಂನಲ್ಲಿ ಇಂದು ಬೆಳಗ್ಗೆ ನಡೆದ ಫೈನಲ್ ಪಂದ್ಯ 20ನೇ ನಿಮಿಷದಲ್ಲಿ ಮಣಿಕಂಠ ಅವರು ವಿಜಯಿ ಗೋಲು ಬಾರಿಸುವ ಮೂಲಕ ತಂಡಕ್ಕೆ ಚಿನ್ನದ ಪದಕ ಗೆಲ್ಲಿಸಿಕೊಟ್ಟರು. ಪರಾಜಿತ ಹಾಸನ ತಂಡ ಬೆಳ್ಳಿ ಪದಕ ಪಡೆಯಿತು.
ಬುಧವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಹಾಸನ ತಂಡ, ಬೆಂಗಳೂರು ನಗರ ತಂಡವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ 6-5ರಿಂದ ರೋಚಕವಾಗಿ ಹಿಮ್ಮೆಟ್ಟಿಸಿದರೆ, ಮತ್ತೊಂದು ಸೆಮಿಫೈನಲ್‌ನಲ್ಲಿ ಹಾವೇರಿ ತಂಡವು ಬಳ್ಳಾರಿ ಜಿಲ್ಲಾ ತಂಡದ ವಿರುದ್ಧ 2-0 ಅಂತರದ ಜಯ ದಾಖಲಿಸಿ ಫೈನಲ್‌ಗೆ ತೇರ್ಗಡೆಗೊಂಡಿತ್ತು.
ಜಾಫರ್ ಖಾನ್, ನಿಯೋಲೆ ಕೂಟದ ‘ಶ್ರೇಷ್ಠ ಅತ್ಲೀಟ್’
ಜಾಫರ್ ಖಾನ್ ಅವರು ನಿನ್ನೆ ನಡೆದ ಪುರುಷರ ಲಾಂಗ್‌ಜಂಪ್ ಸ್ಪರ್ಧೆಯಲ್ಲಿ 7.44ಮೀ. ದೂರ ನಗೆಯುವ ಮೂಲಕ 1016 ಪಾಯಿಂಟ್‌ಗಳನ್ನು ಗಳಿಸಿದ್ದರೆ, ನಿಯೋಲೆ ಅವರು ಇಂದು ನಡೆದ ಮಹಿಳೆಯರ 100ಮೀ. ಸ್ಪ್ರಿಂಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಚಿನ್ನದ ಪದಕ ಜಯಿಸಿದ್ದರು. ಅವರು ದೂರವನ್ನು 11.93ಸೆ.ಗಳಲ್ಲಿ ಕ್ರಮಿಸುವ ಮೂಲಕ 1005 ಪಾಯಿಂಟ್‌ಗಳನ್ನು ಸಂಗ್ರಹಿಸಿದ್ದರು.





