ಮಾದರಿ ಶಾಲೆಯಾಗಿ ಹಿರಿಯಡ್ಕ ಕರ್ನಾಟಕ ಪಬ್ಲಿಕ್ ಶಾಲೆ ಅಭಿವೃದ್ಧಿ: ನಾಗಣ್ಣ ಗೌಡ

ಉಡುಪಿ, ಜ.24: ಅತಿ ಹೆಚ್ಚು ಸಂಖ್ಯೆಯ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿರುವ ಹಿರಿಯಡಕದ ಕರ್ನಾಟಕ ಪಬ್ಲಿಕ್ ಶಾಲೆಯನ್ನು ರಾಜ್ಯದಲ್ಲೇ ಮಾದರಿ ಶಾಲೆಯನ್ನಾಗಿ ಪರಿವರ್ತಿಸಲು ಚಿಂತನೆ ನಡೆಸಲಾಗಿದೆ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ. ನಾಗಣ್ಣ ಗೌಡ ಹೇಳಿದ್ದಾರೆ.
ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯತ್‌ನ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಉಡುಪಿ ಜಿಲ್ಲೆಯ ಹಿರಿಯಡಕ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ್ನು ಮಾದರಿ ಶಾಲೆಯನ್ನಾಗಿ ಪರಿವರ್ತಿಸುವ ಯೋಜನೆಯ ಕುರಿತು ಆಯೋಜಿಸಲಾದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಹಿರಿಯಡ್ಕದ ಕೆಪಿಎಸ್ ಶಾಲೆಯ ವಿದ್ಯಾರ್ಥಿಗಳು ಎಲ್ಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿ ದ್ದಾರೆ. ಈಗಾಗಿ ಇದನ್ನು ರಾಜ್ಯದಲ್ಲಿಯೇ ಮಾದರಿ ಶಾಲೆಯನ್ನಾಗಿ ಪರಿವರ್ತಿಸಲು ಚಿಂತನೆ ನಡೆಸಿದ್ದು, ಇದಕ್ಕೆ ಪೂರಕವಾಗಿ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.
ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಓದಲು, ಬರೆಯಲು ಹಾಗೂ ಲೆಕ್ಕಾಚಾರ ಮಾಡುವುದನ್ನು ಸರಿಯಾಗಿ ಕಲಿಸಿದಾಗ ಮಾತ್ರ ಅದು ಭವಿಷ್ಯದಲ್ಲಿ ಅವರಿಗೆ ಅನುಕೂಲವಾಗುತ್ತದೆ ಎಂದ ನಾಗಣ್ಣ, ಪ್ರತಿಯೊಬ್ಬ ಮಗುವೂ ಶಾಲೆಗೆ ಸೇರುವಂತೆ ನೋಡಿ ಕೊಳ್ಳುವುದು ಪೋಷಕರ ಹಾಗೂ ಅಧಿಕಾರಿಗಳ ಕೆಲಸ. ಮಕ್ಕಳು ಬಾಲಕಾರ್ಮಿಕ ವೃತ್ತಿಯಲ್ಲಿ ತೊಡಗಿಕೊಳ್ಳದಂತೆ ಎಚ್ಚರ ವಹಿಸಬೇಕು ಎಂದ ಅವರು, ಆಗಿಂದಾಗ್ಗೆ ಅವರು ಕೆಲಸ ಮಾಡುವ ಸ್ಥಳಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಬೇಕು ಎಂದು ತಿಳಿಸಿದರು.
ನರೇಗಾ ಯೋಜನೆಯಡಿ ಮಕ್ಕಳ ಆಟದ ಮೈದಾನ, ಕೈತೋಟಗಳ ಅಭಿವೃದ್ಧಿ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಆದ್ಯತೆಯ ಮೇಲೆ ಕೈಗೊಳ್ಳಬೇಕು. ಮಕ್ಕಳ ರಕ್ಷಣಾ ನೀತಿಯಲ್ಲಿ ಮಕ್ಕಳಿಗೆ ಒದಗಿಸಬೇಕಾದ ಮೂಲ ಸೌಕರ್ಯಗಳು, ಭದ್ರತೆ, ಮಕ್ಕಳ ರಕ್ಷಣೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ವಿಶೇಷ ನಿಯಮಗಳಿವೆ. ಇವುಗಳನ್ನು ಶಾಲೆಗಳಲ್ಲಿ ಪರಿಣಾಮಕಾರಿ ಯಾಗಿ ಅನುಷ್ಠಾನ ಮಾಡುವ ಮೂಲಕ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಕರೆ ತರುವ ಕಾರ್ಯವನ್ನು ಮಾಡಬೇಕು ಎಂದರು.
ಮಕ್ಕಳ ರಕ್ಷಣಾ ಸಮಿತಿ ಸಭೆಗಳನ್ನು ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಆಗಿಂದಾಗ್ಗೆ ಕೈಗೊಳ್ಳಬೇಕು. ಗ್ರಾಮಸಭೆಗಳಲ್ಲಿ ಸಹ ಮಕ್ಕಳು ಭಾಗವಹಿ ಬೇಕು. ಅಲ್ಲಿ ತಮಗೆ ಅವಶ್ಯವಿರುವ ಬೇಡಿಕೆಗಳನ್ನು ತಿಳಿಸುವುದಕ್ಕೆ ಅವಕಾಶ ಕಲ್ಪಿಸಬೇಕು. ಇಲ್ಲಿ ಬರುವ ಬೇಡಿಕೆಗಳನ್ನು ಪೂರೈಸುವ ಕೆಲಸವನ್ನು ಸಹ ಅಧಿಕಾರಿಗಳು ಮಾಡಬೇಕು ಎಂದರು.
ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಸಮಾಜದಲ್ಲಿ ಪ್ರತಿಯೊಬ್ಬರೂ ಶಿಕ್ಷಣವಂತರಾಗಬೇಕು. ಪ್ರತಿಯೊಬ್ಬ ಮಕ್ಕಳಿಗೂ ಶಿಕ್ಷಣ ಒದಗಿಸುವುದು ಜನಪ್ರತಿನಿಧಿಗಳು ಸೇರಿದಂತೆ ಎಲ್ಲರ ಆದ್ಯ ಕರ್ತವ್ಯ. ಜಿಲ್ಲೆಯಲ್ಲಿ ಇನ್ನು ಹೆಚ್ಚು ಶಾಲೆ ಗಳನ್ನು ಪಬ್ಲಿಕ್ ಶಾಲೆಗಳನ್ನಾಗಿಸಿ ಪರಿವರ್ತಿಸಲು ಪ್ರಯತ್ನಿಸಲಾಗುವುದು ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಜಿಪಂ ಯೋಜನಾ ನಿರ್ದೇಶಕ ಶ್ರೀನಿವಾಸ್ ರಾವ್, ಡಿಡಿಪಿಐ ಗಣಪತಿ, ಡಿಡಿಪಿಯೂ ಮಾರುತಿ, ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ನಾಗರತ್ನ ನಾಯಕ್, ಗ್ರಾಪಂಗಳ ಅಧ್ಯಕ್ಷರು, ಉಪಾಧ್ಯಕ್ಷರು, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.







