ದಿಶಾ ಸಭೆ: ಇಂದ್ರಾಳಿ ರೈಲ್ವೆ ಮೇಲ್ಸೆತುವೆ ಕಾಮಗಾರಿಗೆ ಕಾಲಾವಕಾಶ ಕೋರಿದ ಅಧಿಕಾರಿಗೆ ಜಿಲ್ಲಾಧಿಕಾರಿ ತರಾಟೆ

ಉಡುಪಿ: ಉಡುಪಿ ದಿಶಾ ಸಮಿತಿಯ ಅಧ್ಯಕ್ಷರೂ, ಶಿವಮೊಗ್ಗ ಲೋಕಸಭಾ ಕ್ಷೇಔತ್ರದ ಸದಸ್ಯರೂ ಆಗಿರುವ ಬಿ.ವೈ. ರಾಘವೇಂದ್ರ ಅಧ್ಯಕ್ಷತೆಯಲ್ಲಿ ಮಣಿಪಾಲದಲ್ಲಿರುವ ಜಿಲ್ಲಾ ಪಂಚಾಯತ್‌ನ ಡಾ.ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಇಂದು ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿಯ ಸಭೆಯಲ್ಲಿ ವಿವಿಧ ರಾಷ್ಟ್ರೀಯ ಹೆದ್ದಾರಿ, ಇಂದ್ರಾಳಿ ರೈಲ್ವೆ ಮೇಲ್ಸೆತುವೆ ಸೇರಿದಂತೆ ವಿವಿಧ ಕೇಂದ್ರ ಪುರಸ್ಕೃತ ಯೋಜನೆಗಳಲ್ಲಾದ ಪ್ರಗತಿಯ ಕುರಿತು ವ್ಯಾಪಕ ಚರ್ಚೆ ನಡೆಯಿತು.
ಚರ್ಚೆಯ ವೇಳೆ ಜಿಲ್ಲೆಯಲ್ಲಿ ನಡೆದಿರುವ ವಿವಿದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಹಾಗೂ ಇಂದ್ರಾಳಿಯ ರೈಲ್ವೆ ಮೇಲ್ಸೆ ತುವೆ ಕಾಮಗಾರಿ ಯಲ್ಲಾಗಿರುವ ವಿಳಂಬದ ಕುರಿತಂತೆ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಲ್ಲದೇ ಇದಕ್ಕಾಗಿ ಎನ್‌ಎಚ್ 169ಎ ರಾಷ್ಟ್ರೀಯ ಹೆದ್ದಾರಿ ಇಂಜಿನಿಯರ್ ಮಂಜುನಾಥ್ ಅವರನ್ನು ಚೆನ್ನಾಗಿ ತರಾಟೆಗೆ ತೆಗೆದುಕೊಂಡರು.
ಉಡುಪಿ-ಮಣಿಪಾಲ ರಾ.ಹೆದ್ದಾರಿಯ ಇಂದ್ರಾಳಿ ರೈಲ್ವೆ ಓವರ್‌ಬ್ರಿಜ್ ಕಾಮಗಾರಿಯಲ್ಲಾಗಿರುವ ವಿಳಂಬದ ಕುರಿತ ಚರ್ಚೆಯ ವೇಳೆ ವಿವಿಧ ಕಾರಣಗಳಿಂದ ಕಾಮಗಾರಿಯಲ್ಲಿ ವಿಳಂಬವಾಗಿದ್ದು ಮಾರ್ಚ್ ಕೊನೆಯವರೆಗೆ ಕಾಲಾವಕಾಶವನ್ನು ವಿಸ್ತರಿಸಬೇಕು ಎಂದು ಮಂಜುನಾಥ್ ಮನವಿ ಮಾಡಿದರು. ಈ ವೇಳೆ ಕೆಂಡಾಮಂಡಲರಾದ ಜಿಲ್ಲಾಧಿಕಾರಿ, ಅಧಿಕಾರಿ ಯನ್ನು ಚೆನ್ನಾಗಿ ತರಾಟೆಗೆ ತೆಗೆದುಕೊಂಡರು.
ಪೊಲೀಸ್ ಠಾಣೆಯಲ್ಲಿ ಮುಚ್ಚಳಿಕೆ ಬರೆದು ಕೊಟ್ಟ ಹೊರತಾಗಿಯೂ ಕಾಮಗಾರಿಯನ್ನು ನಿಗದಿಪಡಿಸಿದಂತೆ ಫೆ.15ಕ್ಕೆ ಮುಗಿಸಲಾದ ಗುತ್ತಿಗೆದಾರರು ಹಾಗೂ ಗರ್ಡರ್ ಕಾಮಗಾರಿ ನಡೆಸುವ ಕಂಪೆನಿಯನ್ನು ಕಪ್ಪುಪಟ್ಟಿಗೆ ಸೇರಿಸಲು ಶಿಫಾರಸ್ಸು ಮಾಡಿರುವುದಾಗಿ ಜಿಲ್ಲಾದಿಕಾರಿ ತಿಳಿಸಿದರು. ಇದರಿಂದಾಗಿಯೇ ಅವರು ಕಾಮಗಾರಿಯನ್ನು ನಿಧಾನ ಮಾಡುತಿದ್ದಾರೆ ಎಂದು ಮಂಜುನಾಥ ಹೇಳಿದರು.
ಗರ್ಡರ್‌ಗಳ ವೆಲ್ಡಿಂಗ್‌ಗೆ ಇನ್ನೂ 20ರಿಂದ 25 ದಿನ ಬೇಕು ಎಂದ ಮಂಜುನಾಥ್, ಉಳಿದ ಕಾಮಗಾರಿಯ ಗುತಿಗೆಯನ್ನು ಬೇರೆಯವರಿಗೆ ಕೊಟ್ಟು ಶೀಘ್ರ ಕೆಲಸ ಮುಗಿಸುವುದಾಗಿ ಸಭೆಗೆ ತಿಳಿಸಿದರು. ದಿನವೆಂಬಂತೆ ಸ್ಥಳಕ್ಕೆ ಭೇಟಿ ನೀಡಿ ಸೂಚನೆ ಕೊಟ್ಟರೂ ಗುತ್ತಿಗೆದಾರರು ವೇಗವಾಗಿ ಕೆಲಸ ಮಾಡುತ್ತಿಲ್ಲ ಎಂದು ಕಿಡಿಕಾರಿದ ಜಿಲ್ಲಾಧಿಕಾರಿ, ಗರ್ಡರ್ ಕೂರಿಸಿದ ಬಳಿಕ ಮುಂದಿನ ಕಾಮಗಾರಿ ಮಾಡಲು ಬೇಕಾದ ತಜ್ಞತೆ ಅವರಲ್ಲಿ ಇಲ್ಲ. ಹೀಗಾಗಿ ಇಲ್ಲದ ನೆಪಗಳನ್ನು ಅವರು ನೀಡುತಿದ್ದಾರೆ ಎಂದು ಡಿಸಿ ಗುಡುಗಿದರು.
ಏನೇ ಆದರೂ ಫೆ.15ರ ಅಂತಿಮ ಗಡುವನ್ನು ಮುಂದೂಡಲು ಜಿಲ್ಲಾಧಿಕಾರಿ ಒಪ್ಪಲಿಲ್ಲ. ವೆಲ್ಟಿಂಗ್ ಮುಗಿದ ಬಳಿಕ ಲಾಂಚಿಂಗ್ ಮಾಡಲು ಬೇಕಾದ ತಜ್ಞತೆ ಹಾಗೂ ಪರಿಕರ ಅವರ ಬಳಿ ಇಲ್ಲ. ಅವುಗಳನ್ನು ಗುತ್ತಿಗೆದಾರರೇ ಹೊಂದಿಸಿ ಕೊಳ್ಳುವಂತೆ ರೈಲ್ವೆ ತಿಳಿಸಿದೆ. ಹೀಗಾಗಿ ಗುತ್ತಿಗೆದಾರರು ಬ್ಲಾಕ್‌ಲೀಸ್ಟ್ ನೆಪವನ್ನು ಹೇಳುತಿದ್ದಾರೆ ಎಂದ ಡಾ.ವಿದ್ಯಾ ಕುಮಾರಿ, ಇಂಜಿನಿಯರ್ ಗುತ್ತಿಗೆದಾರರ ಪರ ಮಾತನಾಡಿದ್ದನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಕೊರಗರಿಗೆ ವಿಶೇಷ ಆದ್ಯತೆ: ಪಿಎಂ ಜನಮನ್ ಯೋಜನೆಯ ಕುರಿತ ಚರ್ಚೆಯ ವೇಳೆ ಜಿಲ್ಲೆಯಲ್ಲಿ ಕೊರಗರಿಗೆ ವಿಶೇಷ ಆದ್ಯತೆ ದೊರಕಬೇಕಾದ ಅಗತ್ಯತೆ ಕುರಿತು ಚರ್ಚೆ ನಡೆಯಿತು. ಜಿಲ್ಲೆಯ ಮೂಲನಿವಾಸಿಗಳಾದ ಕೊರಗ ಜನಾಂಗ ನಶಿಸುತ್ತಿದೆ. 30-40 ವರ್ಷಗಳಿಂದ ವಾಸವಾಗಿದ್ದರೂ ಕೊರಗರಿಗೆ ಹಕ್ಕುಪತ್ರ ಸಿಗುತ್ತಿಲ್ಲ. ಓದು ಬರಹವಿಲ್ಲದ ಅವರ ಬಳಿ ಕೊಡಲು ಯಾವುದೇ ದಾಖಲೆಗಳಿಲ್ಲ. ವಿಶೇಷ ಪ್ರಕರಣವಾಗಿ ಪರಿಗಣಿಸಿ ಅವರಿಗೆ ಮೊದಲು ಹಕ್ಕುಪತ್ರ ನೀಡಬೇಕು ಎಂದು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಹಾಗೂ ಗುರುರಾಜ್ ಗಂಟಿಹೊಳೆ ಆಗ್ರಹಿಸಿದರು.
ಕೊರಗ ಜನಾಂಗದ ಕುರಿತು ವಿಶೇಷ ಆದ್ಯತೆ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದ ಜಿಲ್ಲಾಧಿಕಾರಿ, ಅವರನ್ನು ಹುಡುಕಿಕೊಂಡು ಹಾಡಿಗಳಿಗೆ ಹೋಗಿ ಆಧಾರ್ ಕಾರ್ಡ್, ಆಯುಷ್ಮಾನ್ ಕಾರ್ಡ್ ಹಾಗೂ ಪಡಿತರ ಚೀಟಿಯನ್ನು ನೀಡು ವಂತೆ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಲಾಗಿದೆ. ಈಗ ಪ್ರತಿ ತಿಂಗಳು 2 ಬಾರಿ ಅಧಿಕಾರಿಗಳು ಅವರಿರುವಲ್ಲಿಗೆ ಹೋಗಿ ಬೇಕಾದ ಎಲ್ಲಾ ಸೌಲಭ್ಯಗಳನನು ನೀಡುತಿದ್ದಾರೆ ಎಂದರು.
ಈಗ ಹೆಚ್ಚಿನವರಿಗೆ ಆಧಾರ್ ಕಾರ್ಡ್, ಆಯುಷ್ಮಾನ್ ಕಾರ್ಡ್, ಪಡಿತರ ಚೀಟಿಗಳನ್ನು ನೀಡಲಾಗಿದೆ. ಶುದ್ಧ ಕುಡಿಯುವ ನೀರು ಪೂರೈಸಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದರು. ಕೊರಗರಿಗಾಗಿಯೇ 18 ಎಂಪಿಸಿ (ಮಲ್ಟಿ ಪರ್ಪಸ್ ಸೆಂಟರ್)ಗಳನ್ನು ತಲಾ 60 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಲಾ ಗುವುದು. ಮೊದಲ ಹಂತದಲ್ಲಿ ಏಳನ್ನು ಕೈಗೆತ್ತಿಕೊಳ್ಳಲಾ ಗುತ್ತಿದೆ. ಈಗಾಗಲೇ ಹಾಲಾಡಿ ಮತ್ತು ಕೆರಾಡಿಗಳಲ್ಲಿ ಎಂಪಿಸಿ ಕಟ್ಟಡಕ್ಕೆ ಮಂಜೂರಾತಿ ಸಿಕ್ಕಿದೆ ಎಂದರು
ಅನುಷ್ಠಾನಕ್ಕೆ ಗಮನ ಕೊಡಲು ಸೂಚನೆ: ಕೇಂದ್ರ ಪುರಸ್ಕೃತ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಪ್ರತಿಶತಃ ನೂರರಷ್ಟು ನಿಗದಿತ ಕಾಲಾವಧಿ ಯೊಳಗೆ ಅನುಷ್ಠಾನಗೊಳಿಸುವಂತೆ ಅಧಿಕಾರಿಗಳಿಗೆ ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಸದ ಬಿ.ವೈ ರಾಘವೇಂದ್ರ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೇಂದ್ರ ಸರಕಾರ ಜನಸಾಮಾನ್ಯರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಇವುಗಳನ್ನು ಅನುಷ್ಠಾನ ಗೊಳಿಸುವ ಜವಾಬ್ದಾರಿ ಅಧಿಕಾರಿಗಳದ್ದಾಗಿದ್ದು, ಯೋಜನೆಗಳಿಗೆ ಬಿಡುಗಡೆ ಯಾಗಿರುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು, ಕಾಲಮಿತಿ ಯೊಳಗೆ ಅವುಗಳ ಅನುಷ್ಠಾನಕ್ಕೆ ಮುಂದಾಗಬೇಕು ಎಂದರು.
ನರೇಗಾದಡಿ ಕಾಲುಸಂಕ: ಮಹತ್ಮಾಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಸ್ಥಳೀಯ ಜನರಿಗೆ ಉದ್ಯೋಗ ಅವಕಾಶ ಕಲ್ಪಿಸಿ ಶಾಶ್ವತ ಕಾಮಗಾರಿಗಳನ್ನು ಸೃಜನಿಸಲು ಅವಕಾಶವಿದ್ದು, ಜಿಲ್ಲೆಯಲ್ಲಿ ಇದರ ಪ್ರಗತಿ ನಿಗದಿತ ಗುರಿಗಿಂತ ಹೆಚ್ಚಬೇಕು. ಈ ಯೋಜನೆಯಡಿ ಕಾಲಸಂಕ ನಿರ್ಮಿಸಲು ಸಹ ಅವಕಾಶದ್ದು, ಇದರ ಸದುಪಯೋಗ ಪಡಿಸಿಕೊಂಡು ಮಲೆನಾಡು ಭಾಗಗಳಲ್ಲಿ ಕಾಲಸಂಕ ನಿರ್ಮಿಸಲು ಮುಂದಾಗಬೇಕು ಎಂದು ಸೂಚನೆ ನೀಡಿದರು.
ಗ್ರಾಮೀಣ ಭಾಗದ ಜನರಿಗೆ ಕುಡಿಯುವ ನೀರು ಒದಗಿಸುವ ಬಹು ಗ್ರಾಮ ಕುಡಿಯುವ ನೀರು ಯೋಜನೆಗೆ ಅಗತ್ಯವಿರುವ ಭೂಮಿಯನ್ನು ಅರಣ್ಯ ಇಲಾಖೆ ಆದಷ್ಟು ಶೀಘ್ರದಲ್ಲಿ ಒದಗಿಸಬೇಕು. ಈಗಾಗಲೇ ಬೈಂದೂರು ವಿಧಾನಸಭಾ ಕ್ಷೇತ್ರದ 784 ಕೋಟಿ ರೂ. ವೆಚ್ಚದಲ್ಲಿ ಹಾಗೂ ಜಿಲ್ಲೆಯ ಉಳಿದ ತಾಲೂಕಿಗಳಿಗೆ ಮಂಜೂರಾಗಿರುವ 1600 ಕೋಟಿ ರೂ. ವೆಚ್ಚದ ಕಾಮಗಾರಿಗಳನ್ನು ಅತೀ ಜರೂರಾಗಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಬಂದರು ಹಾಗೂ ಮೀನುಗಾರಿಕಾ ಕೋಸ್ಟಲ್ ಬರ್ತ್ ಹಾಗೂ ಮೀನುಗಾರಿಕಾ ಬಂದರುಗಳ ಅಭಿವೃದ್ಧಿ ಕಾಮಗಾರಿಗೆ ಸಾಕಷ್ಟು ಅನುದಾನ ಈಗಾಗಲೇ ಮಂಜೂರಾಗಿದೆ. ಸಿಆರ್‌ಝಡ್‌ನ ಅನುಮತಿಯನ್ನು ಪಡೆದು ಕಾಮಗಾರಿಗಳನ್ನು ಶೀಘ್ರವೇ ಮುಗಿಸಲು ಸೂಚನೆ ನೀಡಿದರು.
ಮಾತೃ ವಂದನಾ ಯೋಜನೆಯನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕಾರ್ಯ ಆದ್ಯತೆಯ ಮೇಲೆ ಆಗಬೇಕು. ಕಳೆದ ಸಾಲಿನಲ್ಲಿ ಕೇಂದ್ರ ಸರಕಾರದಿಂದ ಬಂದ 65 ಕೋಟಿ ರಾಜ್ಯದಲ್ಲಿ ಅನುಷ್ಠಾನಗೊಳ್ಳದೆ ವಾಪಸು ಹೋಗಿದೆ ಎಂದ ರಾಘವೇಂದ್ರ, ಜಿಲ್ಲೆಯಲ್ಲಿ ಕೈಗೊಂಡಿರುವ ಜಲ್ ಜೀವನ್ ಮಿಶನ್ ಯೋಜನೆಯಡಿ ಗ್ರಾಮಾಂತರ ಭಾಗದ ಜನರಿಗೆ ನಳ ನೀರನ್ನು ಸಂಪರ್ಕಿಸುವ ಕಾಮಗಾರಿಯನ್ನು ವೈಜ್ಞಾನಿಕವಾಗಿ ಕೈಗೊಳ್ಳಬೇಕು. ಗ್ರಾಮೀಣ ಭಾಗದಲ್ಲಿ ಕಳಪೆ ಕಾಮಗಾರಿ ನಡೆದಿರುವ ಬಗ್ಗೆ ದೂರುಗಳು ಕೇಳಿ ಬಂದಿವೆ. ಈ ಬಗ್ಗೆ ಸಿಇಒ ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಉಡುಪಿ -ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ವಿಶ್ವಕರ್ಮ ಯೋಜನೆಯ ಅಡಿಯಲ್ಲಿ ಆಯ್ಕೆಯಾದ ಅರ್ಹ ಫಲಾನುಭವಿಗಳಿಗೆ ಬ್ರಹ್ಮಾವರದ ರುಡ್‌ಸೆಟ್ ಸಂಸ್ಥೆ ತರಬೇತಿ ನೀಡಬೇಕು ಎಂದು ಸೂಚಿಸಿದರಲ್ಲದೇ ಬ್ಯಾಂಕುಗಳಿಂದ ಕೂಡಲೇ ಆರ್ಥಿಕ ಸೌಲಭ್ಯ ಒದಗಿಸುವ ಕಾರ್ಯಗಳು ಆಗಬೇಕು ಎಂದರು.
ಸಭೆಯಲ್ಲಿ ಶಾಸಕರಾದ ಯಶ್‌ಪಾಲ್ ಎ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಕಿರಣ್‌ಕುಮಾರ್ ಕೊಡ್ಗಿ, ಗುರುರಾಜ್ ಶೆಟ್ಟಿ ಗಂಟಿಹೊಳೆ, ವಿಧಾನಪರಿಷತ್ ಸದಸ್ಯ ಡಾ.ಧನಂಜಯ್ ಸರ್ಜಿ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಹಾಗೂ ಇತರರು ಉಪಸ್ಥಿತರಿದ್ದರು.







