ಉಡುಪಿ| ಪುಷ್ಪಗಳಲ್ಲಿ ಅರಳಿದ ಸರಕಾರದ ‘ಪಂಚ ಗ್ಯಾರಂಟಿ ಯೋಜನೆಗಳು’
ದೊಡ್ಡಣಗುಡ್ಡೆಯ ಪುಷ್ಪ ಹರಾಜು ಕೇಂದ್ರದಲ್ಲಿ ಫ್ಲವರ್ ಶೋ

ಉಡುಪಿ, ಜ.25: ಇಂದಿನಿಂದ ಜ.27ರವರೆಗೆ ಉಡುಪಿ ಜಿಲ್ಲಾಡಳಿತ, ಜಿ.ಪಂ. ಹಾಗೂ ತೋಟಗಾರಿಕಾ ಇಲಾಖೆಗಳ ವತಿಯಿಂದ ದೊಡ್ಡಣಗುಡ್ಡೆ ತೋಟಗಾರಿಕೆ ಇಲಾಖೆಯ ಪುಷ್ಪ ಹರಾಜು ಕೇಂದ್ರದ ಆವರಣದಲ್ಲಿ ನಡೆಯುವ ಫಲ ಪುಷ್ಪ ಪ್ರದರ್ಶನವನ್ನು ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಕೆ. ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ, ರಾಜ್ಯ ಸರಕಾರದ ಪಂಚ ಗ್ಯಾರಂಟಿ ಪರಿಕಲ್ಪನೆಯನ್ನು ಉಡುಪಿಯ ಫಲಪುಷ್ಪ ಪ್ರದರ್ಶನದಲ್ಲಿ ಹೂವುಗಳಿಂದ ಕಲಾಕೃತಿಯ ರೂಪದಲ್ಲಿ ಕಲಾವಿದರು ಸಾಕಾರಗೊಳಿಸಿದ್ದು, ಇವುಗಳು ಈ ಪ್ರದರ್ಶನದ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಸಾರ್ವಜನಿಕರಿಗೆ ಇಲ್ಲಿ ಮುಕ್ತ ವೀಕ್ಷಣೆಗೆ ಅವಕಾಶವಿದೆ ಎಂದರು.
ಈ ಪ್ರದರ್ಶನದಲ್ಲಿ ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳು ಹೂವುಗಳಿಂದ ಕಲಾಕೃತಿಯ ರೂಪದಲ್ಲಿ ಅರಳಿ ನೋಡುಗರ ಗಮನ ಸೆಳೆಯುತ್ತಿವೆ. ಹೂವುಗಳಿಂದ ತಯಾರಿಸಿದ ಸೆಲ್ಫಿ ರೆನ್ ಮಾದರಿ ಪ್ರದರ್ಶನದ ಇನ್ನೊಂದು ಆಕರ್ಷಣೆಯಾಗಿದೆ. ಅದೇ ರೀತಿ ಹಳದಿ, ಕೆಂಪು ಗುಲಾಬಿಯಲ್ಲಿ ಮೂಡಿದ ಕರ್ನಾಟಕ ನಕಾಶೆ, ಹೂವಿನಿಂದ ಮಾಡಿದ ಮಾವಿನ ಹಣ್ಣಿನ ಕಲಾಕೃತಿಯ ಸೆಲ್ಫಿ ವಲಯ, ಸ್ಥಳೀಯವಾಗಿ ಬೆಳೆದ ತರಕಾರಿ, ಹಣ್ಣುಹಂಪಲು, 1.27ಲಕ್ಷದಷ್ಟು ಬಣ್ಣಬಣ್ಣದ ಹೂವಿನ ಗಿಡಗಳು ಇಲ್ಲಿ ನೋಡುಗರ ಗಮನ ಸೆಳೆಯುತ್ತಿವೆ.
ಅನ್ನಭಾಗ್ಯದ ಅಕ್ಷಯ ಪಾತ್ರೆಗೆ ಹೂವಿನ ಅಲಂಕಾರ ಮಾಡಲಾಗಿದ್ದರೆ, ಯುವ ನಿಧಿ ಯೋಜನೆ ಮುಂದೆ ಪದವೀಧರನ ಮೂರ್ತಿ ಇದೆ. ವಿದ್ಯುತ್ ಬಲ್ಬ್ ಮಾದರಿಗೆ ಹೂವಿನ ಅಲಂಕಾರ ಗೃಹಜ್ಯೋತಿಯ ಸೂಚಕವಾದರೆ, ಶಕ್ತಿ ಯೋಜನೆ ಸಂಕೇತವಾಗಿ ಕೆಂಪು ಸರಕಾರಿ ಬಸ್, ಗೃಹಲಕ್ಷ್ಮೀ ಯೋಜನೆಯಲ್ಲಿ ಮಹಿಳೆ ಎದುರು ನೋಟಿನ ಕಂತೆ ... ರಾಜ್ಯ ಸರಕಾರದ ಪಂಚ ಗ್ಯಾರಂಟಿಗಳನ್ನು ಪ್ರತಿಬಿಂಬಿಸುತ್ತಿವೆ.
ಫಲಪುಷ್ಪ ಪ್ರದರ್ಶನದಲ್ಲಿ ಸುಮಾರು 23 ಜಾತಿಯ 7000 ಹೂವಿನ ಗಿಡಗಳಾದ ಪಟೂನಿಯ, ಸೆಲೋಷಿಯಾ, ಸಾಲ್ವಿಯಾ, ಸೇವಂತಿಗೆ, ಚೆಂಡು ಹೂ, ಜೀನಿಯಾ, ಚೈನಾ ಅಸ್ಟರ್, ಬಾಲ್ಸಮ್, ತೊರೇನಿಯ, ಯುಜೀನಿಯಾ, ಗುಲಾಜಿ, ಟೆಕೋಮಾ, ದಾಸವಾಳ, ಪ್ಯಾನ್ಸಿ, ಇಂಪೇಷಿಯನ್ಸ್ ಮುಂತಾದ ಗಿಡಗಳನ್ನು ಜೋಡಿಸಿಡಲಾಗಿದೆ.
ಎಸ್ಪಿ ಡಾ. ಅರುಣ್ ಕೆ., ಜಿಪಂ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಪ್ರತೀಕ್ ಬಾಯಲ್, ತೋಟಗಾರಿಕಾ ಇಲಾಖೆ ಉಪನಿರ್ದೇಶಕಿ ಭುವನೇಶ್ವರಿ, ಸಹಾಯಕ ತೋಟಗಾರಿಕಾ ನಿರ್ದೇಶಕ ಗುರುಪ್ರಸಾದ್, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು ಉಪಸ್ಥಿತರಿದ್ದರು.
ಪ್ರದರ್ಶನದ ಜೊತೆಗೆ ಕೈತೋಟ ಮತ್ತು ತಾರಸಿ ತೋಟ ನಿರ್ಮಾಣ ಹಾಗೂ ನಿರ್ವಹಣೆ ಕುರಿತು ಮತ್ತು ನಾಳೆ ಕರಾವಳಿಗೆ ಸೂಕ್ತವಾದ ಹೊಸ ತೋಟಗಾರಿಕೆ ಬೆಳಗಳ ಕುರಿತು ವಿಚಾರ ಸಂಕೀರ್ಣವನ್ನು ಏರ್ಪಡಿಸಲಾಗಿದೆ.







