ಸಮಾನತೆಗಾಗಿ ಮತ್ತೊಂದು ಸ್ವಾತಂತ್ರ್ಯ ಹೋರಾಟದ ಅನಿವಾರ್ಯತೆ: ಖ್ಯಾತ ಚಿಂತಕ ಶಿವಸುಂದರ್

ಮಂಗಳೂರು: ತನ್ನ ಇತಿಹಾಸದುದ್ದಕ್ಕೂ ಸುಳ್ಳು ಹೇಳುತ್ತಾ ಬಂದಿರುವ ಆರೆಸ್ಸೆಸ್ ಇದೀಗ ರಾಮರಾಜ್ಯ ಸ್ಥಾಪನೆಯ ನೆಪದಲ್ಲಿ ಸುಳ್ಳುಗಳ ಅಭಿಯಾನ ಆರಂಭಿಸಿದೆ. ಸಂವಿಧಾನದ ವಿರುದ್ಧ ಸಮರ ಘೋಷಣೆ ಮಾಡಿದೆ. ಇದಕ್ಕೆ ಪ್ರತಿಯಾಗಿ ದೇಶದ ಒಳಗಿರುವ ಬ್ರಾಹ್ಮಣಶಾಹಿ ವಿರುದ್ಧ ಸಮಾನತೆಗಾಗಿ ಸ್ವಾತಂತ್ರ್ಯ ಹೋರಾಟ ಮಾಡುವ ಅನಿವಾರ್ಯತೆ ನಮ್ಮ ದಾಗಿದೆ ಎಂದು ಖ್ಯಾತ ಚಿಂತಕ ಹಾಗೂ ಅಂಕಣಕಾರ ಶಿವಸುಂದರ್ ಅಭಿಪ್ರಾಯಿಸಿದ್ದಾರೆ.
ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ. ಕೃಷ್ಣಪ್ಪ ಬಣ) ವತಿಯಿಂದ ಭಾರತ ಸಂವಿಧಾನ ಜಾರಿಯಾಗಿ 75ನೆ ವರ್ಷ ಹಾಗೂ ದಲಿತ ಸಂಘರ್ಷ ಸಮಿತಿ ಚಳುವಳಿಗೆ 50 ಸಂಭ್ರಮಾಚರಣೆಯ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಸೋಮವಾರ ಆಯೋಜಿಸಲಾದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಸಂವಿಧಾನದ ಆಶಯಗಳು ಎಂಬ ವಿಷಯದಲ್ಲಿ ಮಾತನಾಡಿದ ಅವರು, ಹಿಂದೆ ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರು ಮತ್ತು ಭಾರತೀಯರ ನಡುವೆ ಮಾತ್ರ ಯುದ್ದವಲ್ಲ. ನಮ್ಮ ದೇಶದೊಳಗಿದ್ದ ಆಂತರಿಕ ಗುಲಾಮಗಿರಿಯ ವಿರುದ್ಧವೂ ಆಗಿತ್ತು. ಬ್ರಿಟಿಷರು ಬರುವ ಮೊದಲೇ ನಮ್ಮಲ್ಲಿ ಮೂರೂವರೆ ಸಾವಿರ ವರ್ಷಗಳಿಂದ ಬ್ರಾಹ್ಮಣ ಶಾಹಿಯ ವಸಾಹತುಶಾಹಿ ಇತ್ತು. ಬ್ರಾಹ್ಮಣಶಾಹಿಯನ್ನು ಕೂಡ ಸೋಲಿಸಬೇಕಿತ್ತು. ಈ ದೇಶ ಎಲ್ಲರಿಗೂ ಸೇರಿದ್ದು ಎಂಬ ಆಧುನಿಕ ಪ್ರಜಾತಂತ್ರದ ಆಶಯವೂ ಸ್ವಾತಂತ್ರ್ಯ ಹೋರಾಟದಲ್ಲಿತ್ತು ಎಂದರು.
ಸಂಘ ಪರಿವಾರದ ಸಾರ್ವರ್ಕರ್, ಗೋಳ್ವಾಳ್ಕರ್, ಆರ್‌ಎಸ್‌ಎಸ್, ಹಿಂದೂ ಮಹಾಸಭಾ ಬ್ರಿಟಿಷರ ವಿರುದ್ಧ ಹೋರಾಟ ಮಾಡಿರಲಿಲ್ಲ. ಸ್ವಾಭಿಮಾನಿ ದಲಿತರು ಮತ್ತು ಮುಸ್ಲಿಮರ ವಿರುದ್ಧ ಹಿಂದೂಗಳು ಬ್ರಿಟಿಷರ ಜತೆ ಸೇರಿ ಸೈನ್ಯದಲ್ಲಿ ತರ ಬೇತಿ ಪಡೆಯುವ ಉದ್ದೇಶ ಅವರದಾಗಿತ್ತು. ಮನುಸ್ಮತಿಯನ್ನು ಉಳಿಸಿಕೊಳ್ಳಬೇಕಿತ್ತು. 1950ರಲ್ಲಿ ಸಂವಿಧಾನ ರಚನೆಯಾದ ಮೇಲೆ ಆ ಬ್ರಾಹ್ಮಣಶಾಹಿಯನ್ನು ಪ್ರತಿಪಾದಿಸುವ ಶತ್ರುಗಳನ್ನು ಸೋಲಿಸಿದೆವು ಎಂದು ಭಾವಿಸಿದ್ದೆವು. ಆದರೆ ತಾತ್ಕಾಲಿಕವಾಗಿ ಹಿಮ್ಮೆಟ್ಟಿದ್ದವು. ಸಂಪೂರ್ಣ ಸೋತಿರಲಿಲ್ಲ. ಆದರೆ, ಸಮಾನತೆ ಬಯಸುವ ಶಕ್ತಿಗಳು ಬಲಹೀನವಾಗಿರುವ ಈ ಸಂದರ್ಭದಲ್ಲಿ ಬಲಯುತವಾಗಿ ಸಾರ್ವರ್ಕರ್‌ವಾದಿ, ಮನುಸ್ಮತಿ ರಾಜಕಾರಣ ನಡೆಯುತ್ತಿದೆ. ಕುಂಭ ಮೇಳದಲ್ಲಿ ಮನುವಾದಿಗಳು ಪರ್ಯಾಯ ಸಂವಿಧಾನ ರಚಿಸುವ ಘೋಷಣೆ ಮಾಡಿದ್ದಾರೆ. 2022ರ ಜನವರಿ 22ರಂದು ರಾಮಮಂದಿರ ಲೋಕಾರ್ಪಣೆಗೊಂಡಾಗ ನಿವಾದ ಸ್ವಾತಂತ್ರ್ಯ ಸಿಕ್ಕಿರುವುದಾಗಿ ಇತ್ತೀಚೆಗೆ ಮೋಹನ್ ಭಾಗವತ್ ಭಾಷಣದಲ್ಲಿ ಹೇಳಿದ್ದಾರೆ. ಪ್ರಸಕ್ತ ದೇಶದ ಆಡಳಿತ ಮತ್ತು ರಾಜ್ಯದಲ್ಲಿ ಹಿಂದಿನ ಬಿಜೆಪಿ ಸರಕಾರ ಇರುವಾಗಲೂ ಕೇಶವ ಕೃಪಾದಿಂದ ನಿಯಂತ್ರಿಸಲ್ಪಡುತ್ತಿತ್ತು. ಇದೀಗ 2025ಕ್ಕೆ ಸಂಘ ಪರಿವಾರಕ್ಕೆ 100 ವರ್ಷಗಳು ತುಂಬುವ ಹಿನ್ನೆಲೆಯಲ್ಲಿ ಜ. 29ರಿಂದ ಫೆ.6ರವರೆಗೆ ಸೇಡಂನಲ್ಲಿ ಅಂತಾರಾಷ್ಟ್ರೀಯ ಹಿಂದುತ್ವದ ಸಮ್ಮೇಳನ ನಡೆಯುತ್ತಿದೆ. ಅಲ್ಲಿಯೂ ರಾಮರಾಜ್ಯದ ಘೋಷಣೆಯಾಗಲಿದೆ. ಆರೆಸ್ಸೆಸ್‌ನ ಹಿಂದೂ ರಾಷ್ಟ್ರ ಎಂದರೆ, ಯಾರ್ಯಾರು ತಮ್ಮನ್ನು ಹಿಂದೂಗಳೆಂದು ಕರೆಸಿಕೊಳ್ಳುತ್ತಾರೆ ಅವರನ್ನು ಒಳಗೊಂಡ ರಾಷ್ಟ್ರವಲ್ಲ. ಅವರ ರಾಮ ರಾಜ್ಯದಲ್ಲಿ ಕೊರಗಜ್ಜ, ಬಲಗೇರಮ್ಮ, ಮಾರಮ್ಮ ಇವರಿಗೆಲ್ಲಾ ಯಾವ ಸ್ಥಾನವೇ ಇರದು. ಅವರ ಕಟ್ಟುವ ರಾಮ ರಾಜ್ಯದಲ್ಲಿ ಮಹಿಳೆಯರಿಗೆ, ದಲಿತರಿಗೆ, ಶಂಭೂಕರಿಗೆ ಅಧೀನವಾದ ಸ್ಥಾನ ಇರುತ್ತದೆಯೇ ಹೊರತು ಸಮಾನವಾದ ಸ್ಥಾನ ಇರದು.ಮುಂದಿನ ಒಂದು ವರ್ಷ ಆರೆಸ್ಸೆಸ್‌ನವರು ಹಳ್ಳಿಹಳ್ಳಿಗಳಿಗೆ ಭೇಟಿ ನೀಡಿ ದಲಿತರಿಗೆ ಅಂಬೇಡ್ಕರ್ ಬಗ್ಗೆ ತಿಳಿಸಲಿದ್ದಾರೆ. ಅಂಬೇಡ್ಕರ್‌ಗೆ ಸಂತನ ಪಟ್ಟ ಕಟ್ಟಲು ಹೊರಟಿದ್ದಾರೆ. ಆದರೆ ನಮ್ಮದು ಮನುಸ್ಮುತಿಯನ್ನು ಸುಟ್ಟ ಅಂಬೇಡ್ಕರ್. ನಮ್ಮನ್ನಾಳುವ ಸರಕಾರ ಬೇಧ ಬಾವ ತೋರಬಾರದು, ಸಮಾನತೆಯ ಆಶಯ ಅಂಬೇಡ್ಕರ್‌ರವರ ಸಂವಿಧಾನದ್ದಾಗಿತ್ತು. ಆದರೆ ಬೇಧಭಾವ, ತಾರತಮ್ಯವೇ ಕಾನೂನು ಆಗಬೇಕು ಎಂಬುದು ಮನುಸ್ಮುತಿ ಹಾಗೂ ರಾಮರಾಜ್ಯದ ಪರಿಕಲ್ಪನೆ. ಅಂಬೇಡ್ಕರ್ ತಮ್ಮವರನ್ನೆಲ್ಲಾ ಒಗ್ಗೂಡಿಸಿ ನಿರಂತರವಾಗಿ ಹೋರಾಟ ಮಾಡಿದ್ದು ಸಮಾನತೆಯ ಆಶಯಗಳನ್ನು ಈಡೇರಿಸಿಕೊಳ್ಳುವುದಕ್ಕಾಗಿ. ಆದರೆ ಅದನ್ನು ಒಳಗಿನಿಂದಲೇ ನಾಶ ಮಾಡುವ ಕಾರ್ಯ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಸಂವಿಧಾನವನ್ನು ಉಳಿಸುವ ಕಾರ್ಯ ನಾವು ಒಗ್ಗಟ್ಟಾಗಿ ಮಾಡಬೇಕು ಎಂದು ಎಂದು ಶಿವಸುಂದರ್ ನುಡಿದರು.
ರಾಜಕಾರಣಕ್ಕೆ ತಾಯಿಯ ಅಂತಃಕರಣ ಬೇಕಾಗಿದೆ. ಆದರೆ ಇಂದು ದ್ವೇಷ ರಾಜಕಾರಣ ಇದೆ. ಸತ್ಯ, ಕರುಣೆ, ಮೈತ್ರಿ ಪೋಷಣೆ ಮಾಡುವ ರಾಜಕಾರಣ ಬೇಕು. ಪ್ರಜ್ಞೆ, ಶೀಲ, ಎಲ್ಲರಲ್ಲಿಯೂ ತನ್ನನ್ನು ಕಾಣುವ ಕರುಣೆ ಬೇಕು. ನಾವೆಲ್ಲರೂ ಒಂದೇ ಎಂಬ ಮೈತ್ರಿ ಬೇಕು ಎಂದು ಶಿವಸುಂದರ್ ಹೇಳಿದರು.
ದಲಿತ ಸಂಘರ್ಷ ಸಮಿತಿಯ ಹುಟ್ಟು, ಹೋರಾಟ ಹಾಗೂ ನಮ್ಮ ಮುಂದಿರುವ ಸವಾಲುಗಳು ಕುರಿತು ಮಾತನಾಡಿದ ಕಲಬುರಗಿ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅಪ್ಪೆಗೆರೆ ಸೋಮಶೇಖರ್, ಯಾವ ಸಮುದಾಯ ತನ್ನ ಪರಂಪರೆ, ಚರಿತ್ರೆಯನ್ನು ಮರೆಯುತ್ತದೆಯೋ ಅದು ತನ್ನ ಹಕ್ಕನ್ನು ಕಳೆದುಕೊಳ್ಳುತ್ತದೆ. ಮಾನಸಿಕ ಗುಲಾಮಗಿರಿಯಿಂದ ಬಿಡುಗಡೆಗೊಂಡಾಗ ಮಾತ್ರ ಸಮಾಜ ಪ್ರಗತಿ ಸಾಧಿಸುತ್ತದೆ ಎಂಬ ಡಾ. ಅಂಬೇಡ್ಕರ್ ಮಾತು ಸದಾ ನೆನಪಿನಲ್ಲಿರಬೇಕು ಎಂದರು.
ಅಧ್ಯಕ್ಷತೆಯನ್ನು ದಸಂಸ ಜಿಲ್ಲಾ ಸಂಚಾಲಕ ಸದಾಶಿವ ಪಡುಬಿದ್ರಿ ವಹಿಸಿದ್ರದು. ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಪ್ರೊ. ಬಿ. ಕೃಷ್ಣಪ್ಪ ಅವರ ಭಾವಚಿತ್ರಕ್ಕೆ ದಲಿತ ನೌಕರರ ಒಕ್ಕೂಟದ ದ.ಕ. ಜಿಲ್ಲಾ ಉಸ್ತುವಾರಿ ಎಚ್.ಡಿ. ಲೋಹಿತ್ ಮಾಲಾರ್ಪಣ ಮಾಡಿದರು.
ಈ ವೇಳೆ ಶಿವಸುಂದರ್ ವಿರಚಿತ ‘ಸಂವಿಧಾನ ವರ್ಸಸ್ ಸಂವಿಧಾನ ಅಭಿಯಾನ’ ಕೃತಿಯನ್ನು ಬಿಡುಗಡೆಗೊಳಿಸಲಾಯಿತು.
ದಸಂಸ ಮುಖಂಡರಾದ ಆನಂದ ಮಿತ್ತಬೈಲ್, ಡಿವೈಎಫ್‌ಐ ಮಾಜಿ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ದಸಂಸ ಜಿಲ್ಲಾ ಘಟಕದ ಮಹಿಳಾ ಸಂಚಾಲಕಿ ಸರೋಜಿನಿ ಬಂಟ್ವಾಳ, ರಾಜ್ಯ ಸಂಚಾಲಕ ಎಂ. ದೇವದಾಸ್, ಮಂಗಳೂರು ತಾಲೂಕು ಸಂಚಾಲಕರಾದ ರಾಘವೇಂದ್ರ ಎಸ್., ರಾಘವೇಂದ್ರ ಎಸ್., ಅಣ್ಣು ಸಾಧನ ಮೊದಲಾದವರು ಉಪಸ್ಥಿತರಿದ್ದರು.
ಮುಖಂಡರಾದ ಕೃಷ್ಣಾನಂದ ಡಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ರಘು ಎಕ್ಕಾರು ಕಾರ್ಯಕ್ರಮ ನಿರೂಪಿಸಿದರು.
ಸಂವಿಧಾನ ರಕ್ಷಣೆ ನಮ್ಮ ಅಜೆಂಡಾವಾಗಲಿ
ಮೂಲಭೂತವಾದಿಗಳು, ಕೋಮುವಾದಿಗಳನ್ನು ಸೋಲಿಸಿ ಸಂವಿಧಾನ ರಕ್ಷಿಸುವುದು ನಮ್ಮ ಅಜೆಂಡಾ ಆಗಬೇಕು ಎಂದು ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಸಚಿವ ರಮಾನಾಥ ರೈ ಅಭಿಪ್ರಾಯಿಸಿದರು.
ಸಮಾಜದ ಮೇಲ್ವರ್ಗ, ಪ್ರಬಲ ವರ್ಗದವರು ಸಾಮಾಜಿಕ ನ್ಯಾಯದಿಂದ ವಂಚಿತರಾದ ದಲಿತರ ಹೋರಾಟದೊಂದಿಗೆ ಕೈ ಜೋಡಿಸಿ ಅವರ ಧ್ವನಿಯಾಗಬೇಕು. ಇಂದು ನಂಬಿಕೆಗಳ ಕೊರತೆ ಇದೆ. ಹಿಂದೆ ಸಾಮಾಜಿಕ ಅಸಮಾನತ ಗ್ರಾಮೀಣ ಭಾಗದಲ್ಲಿ ಕ್ರೂರವಾಗಿತ್ತು. ಶಿಕ್ಷಣದಿದಲೂ ಕೆಲವು ವರ್ಗದವರು ವಂಚಿತರಾಗಿದ್ದರು. ಇಂದು ದೇವರು, ಧರ್ಮ, ದೇಶಪ್ರೇಮ ಮುಂದಿಟ್ಟು ಮೋಸ ಮಾಡುತ್ತಿದ್ದಾರೆ. ಸಾಮಾಜಿಕ ನ್ಯಾಯದಿಂದ ವಂಚಿತರಾದ ಜನ ಸಂಘಟನೆಗಳು ಇತಿಹಾಸದ ನೆಪುಗಳಿಂದ ವರ್ತಮಾನ ಹೇಗೆ ಬದುಕಬೇಕೆಂಬ ವಿಚಾರ ಮಂಥನ ನಡೆಸಬೇಕು ಎಂದು ಅವರು ಹೇಳಿದರು.







