‘ತುಳುನಾಡಿನ ಕೋಮು ಸಾಮರಸ್ಯ ಪರಂಪರೆ’ ಪುಸ್ತಕ ಬಿಡುಗಡೆ

ಉಡುಪಿ: ಮೂಡಬಿದ್ರೆ ಆಳ್ವಾಸ್ ಬಿಎಡ್ ಕಾಲೇಜಿನ ವಿದ್ಯಾರ್ಥಿ ಮುಹಮ್ಮದ್ ರಿಯಾಝ್ ಕಾರ್ಕಳ ಬರೆದ ತುಳುನಾಡಿನ ಕೋಮು ಸಾಮರಸ್ಯ ಪರಂಪರೆ ಎಂಬ ಪುಸ್ತಕದ ಬಿಡುಗಡೆ ಕಾರ್ಯಕ್ರಮ ಜ.24ರಂದು ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಜರಗಿತು.
ಪುಸ್ತಕವನ್ನು ಬಿಡುಗಡೆಗೊಳಿಸಿದ ಹಿರಿಯ ಜಾನಪದ ವಿದ್ವಾಂಸ ಡಾ.ಗಣನಾಥ ಎಕ್ಕಾರ್ ಮಾತನಾಡಿ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯು ಈ ಹಿಂದೆ ಸಂಸ್ಕಾರವಂತ ಬುದ್ಧಿವಂತರ ಜಿಲ್ಲೆ ಎಂದೇ ಪ್ರಸಿದ್ಧವಾಗಿತ್ತು. ಆದರೆ ಇಂದು ನಮ್ಮ ಈ ಕರಾವಳಿಯು ಧರ್ಮ ಸಂಘರ್ಷದ ನೆಲವಾಗಿ ಮಾರ್ಪಟ್ಟು ಕುಖ್ಯಾತಿಗೆ ಒಳಗಾಗಿದೆ. ತುಳುನಾಡಿನ ಸಾಮರಸ್ಯ ಪ್ರಣೀತ ವಾದ ಗತ ವೈಭವವನ್ನು ಪುನರ್ ಸ್ಥಾಪಿಸುವುದು ಕರಾವಳಿಯ ಪಾಲಿಗೆ ಅತಿ ಅಗತ್ಯದ ಕಾರ್ಯವಾಗಿದೆ ಎಂದರು.
ಆಶಯ ನುಡಿಗಳನ್ನಾಡಿದ ಸಾಹಿತಿ ಮುಷ್ತಾಕ್ ಹೆನ್ನಬೈಲು, ಸಂಘರ್ಷ ಎಂಬುವುದು ಸಕಲ ಜೀವಚರಾಚರಗಳಲೂ ್ಲಕಂಡುಬರುವ ಸಾಮಾನ್ಯ ಗುಣ ವಾಗಿದ್ದು, ಅದನ್ನು ಮೀರಿ ಸಾಮರಸ್ಯವನ್ನು ಪುನರ್ ಸ್ಥಾಪಿಸಲು ಪ್ರಯತ್ನಿಸು ವುದು ನಾಗರಿಕ ಸಮಾಜದ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಈ ಕೃತಿಯು ಮಹತ್ವವನ್ನು ಪಡೆದಿದೆ ಎಂದು ಹೇಳಿದರು.
ಲೇಖಕ ಮುಹಮ್ಮದ್ ರಿಯಾಝ್ ಮಾತನಾಡಿ, ಮೈಸೂರಿನ ಜ್ಯೋತಿ ಪ್ರಕಾಶನದ ಈ ಕೃತಿಯು ವರ್ತಮಾನದ ತುಳುವರಿಗೆ ಗತ ತುಳುವರ ಸೌಹಾರ್ದ ಪ್ರಣೀತ ಜೀವನ ವಿಧಾನವನ್ನು ನೆನಪಿಸುವ ಮೂಲಕ ಸಾಮರಸ್ಯ ಪ್ರಣೀತ ತುಳುನಾಡನ್ನು ಕಟ್ಟುವ ಸಲುವಾಗಿ ಸಲ್ಲಿಸಿದ ಅಳಿಲು ಸೇವೆಯಾಗಿದೆ ಎಂದು ಅಭಿಪ್ರಾಯಪಟ್ಟರು.
ಇತಿಹಾಸಕಾರ ಡಾ.ಸುರೇಶ್ ರೈ ಪುಸ್ತಕ ಪರಿಚಯ ಮಾಡಿದರು. ಆಳ್ವಾಸ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಶಂಕರಮೂರ್ತಿ ಎಚ್.ಕೆ. ಸ್ವಾಗತಿಸಿದರು. ವಿದ್ಯಾರ್ಥಿನಿ ಅಪೂರ್ವ ಕಾರ್ಯಕ್ರಮ ನಿರೂಪಿಸಿದರು.







