ಒತ್ತಡಕ್ಕೊಳಗಾಗದೆ ವಾಹನ ಚಲಾಯಿಸಿದ್ದಲ್ಲಿ ಅಪಘಾತ ನಿಯಂತ್ರಣ: ಡಿವೈಎಸ್ಪಿ ಪ್ರಭು ಡಿ.ಟಿ.

ಉಡುಪಿ, ಜ.29: ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ವಾಹನ ಚಲಾಯಿಸಲು ಬಿಡಬಾರದು. ಯಾವುದೇ ಕೆಲಸಕ್ಕೆ ವಾಹನದಲ್ಲಿ ಹೊರಡುವಾಗ ಬೇಗ ಹೊರಟು, ಒತ್ತಡಕ್ಕೊಳಗಾಗದೆ ವಾಹನ ಚಲಾಯಿಸಿದ್ದಲ್ಲಿ ಹೆಚ್ಚಿನ ಅಪಘಾತ ಗಳನ್ನು ತಪ್ಪಿಸಬಹುದು ಎಂದು ಉಡುಪಿ ಡಿವೈಎಸ್ಪಿ ಪ್ರಭು ಡಿ.ಟಿ. ಹೇಳಿದ್ದಾರೆ.
ಮಣಿಪಾಲದ ಪ್ರಾದೇಶಿಕ ಸಾರಿಗೆ ಕಛೇರಿಯ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಲಾದ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಮಣಿಪಾಲ ಎಂ.ಐ.ಟಿಯ ಅಸೋಸಿಯೇಟ್ ಪ್ರೊಫೆಸರ್ ಡಾ. ಬಾಲಕೃಷ್ಣ ಎಸ್.ಮದ್ದೋಡಿ ಮಾತನಾಡಿ, ರಸ್ತೆಯಲ್ಲೇ ವಾಹನಗಳನ್ನು ಪಾಕಿರ್ಂಗ್ ಮಾಡಬಾರದು. ಮೊದಲು ನಾವು ಸಂಚಾರ ನಿಯಮಗಳನ್ನು ಪಾಲಿಸಬೇಕು. ವಾಹನ ಚಲಾಯಿಸುವಾಗ ನಮ್ಮ ಅವಲಂಬಿತರನ್ನು ಸದಾ ನೆನಪಿನಲ್ಲಿಟ್ಟು ಕೊಳ್ಳಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾದೇಶಿಕ ಸಾರಿಗೆ ಅಧಿಕಾರಿ ಲಕ್ಷ್ಮಿನಾರಾಯಣ ಪಿ. ನಾಯಕ್ ಮಾತನಾಡಿ, ಸಾರ್ವಜನಿಕರು ರಸ್ತೆ ಸುರಕ್ಷತೆಯ ನಿಯಮಗಳನ್ನು ಅನುಸರಿಸಿ ಸುರಕ್ಷಿತ ಚಾಲನೆ ಮಾಡಬೇಕೆಂದರು. ಇದೇ ಸಂದರ್ಭದಲ್ಲಿ ರಸ್ತೆ ಸುರಕ್ಷತೆಯ ಕರಪತ್ರವನ್ನು ಬಿಡುಗಡೆ ಮಾಡಲಾಯಿತು.
ದ್ವಿಚಕ್ರ ವಾಹನಗಳಲ್ಲಿ ಶಿಶು ರಕ್ಷಾ ಕವಚ ಧರಿಸುವ ಬಗ್ಗೆ, ವಾಹನ ಖರೀದಿಸುವಾಗ ದ್ವಿಚಕ್ರ ವಾಹನ ಮಾಲೀಕರಿಗೆ ಅರಿವು ಮೂಡಿಸುವಂತೆ ದ್ವಿಚಕ್ರ ವಾಹನ ಮಾರಾಟಗಾರರಿಗೆ ತಿಳುವಳಿಕೆ ನೀಡಲಾಯಿತು. ಕಚೇರಿ ಅಧೀಕ್ಷಕಿ ಪಮಿತ ಸ್ವಾಗತಿಸಿ, ಹಿರಿಯ ಮೋಟಾರು ವಾಹನ ನಿರೀಕ್ಷಕ ಸಂತೋಷ್ ಶೆಟ್ಟಿ ನಿರೂಪಿಸಿದರು. ಗೀತಾ ವಂದಿಸಿದರು.







