ಅಜೆಕಾರು ಕೊಲೆ ಪ್ರಕರಣ: ಆರೋಪಿಯಿಂದ ಜಾಮೀನಿಗೆ ಅರ್ಜಿ

ಕಾರ್ಕಳ, ಜ.29: ಅಜೆಕಾರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪತ್ನಿ ಪ್ರಿಯಕರನ ಜೊತೆ ಸೇರಿ ತನ್ನ ಪತಿಯನ್ನೇ ಕೊಲೆಗೈದ ಪ್ರಕರಣದ ಆರೋಪಿ ದಿಲೀಪ್ ಹೆಗ್ಡೆ(28) ಜಾಮೀನು ಕೋರಿ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಉಡುಪಿ ಸಂಚಾರಿ ಪೀಠ ಕಾರ್ಕಳದಲ್ಲಿ ಅರ್ಜಿ ಸಲ್ಲಿಸಿರುವ ಬಗ್ಗೆ ವರದಿಯಾಗಿದೆ.
ನ್ಯಾಯಾಂಗ ಬಂಧನದಲ್ಲಿರುವ ದಿಲೀಪ್ ಹೆಗ್ಡೆ ಎರಡು ದಿನಗಳ ಹಿಂದೆ ಜಾಮೀನು ಅರ್ಜಿ ಸಲ್ಲಿಸಿದ್ದು, ಇದಕ್ಕೆ ಸರಕಾರಿ ಅಭಿಯೋಜಕರು ಆಕ್ಷೇಪಣೆ ಸಲ್ಲಿಸಲು ಫೆ.4ರಂದು ದಿನಾಂಕ ನಿಗದಿ ಪಡಿಸಿ ನ್ಯಾಯಾಲಯ ಆದೇಶ ನೀಡಿದೆ. ಅಂದು ಸರಕಾರಿ ಅಭಿಯೋಜಕ ಪ್ರಕಾಶ್‌ಚಂದ್ರ ಶೆಟ್ಟಿ ಆಕ್ಷೇಪಣೆ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
2024ರ ಅ.20ರಂದು ಮರ್ಣೆ ಗ್ರಾಮದ ಅಜೆಕಾರಿನ ದೆಪ್ಪುತ್ತೆ ಎಂಬಲ್ಲಿ ಬಾಲಕೃಷ್ಣ ಪೂಜಾರಿ(44) ಎಂಬವರನ್ನು ಅವರ ಪತ್ನಿ ಪ್ರತಿಮಾ(36) ಮತ್ತು ಆಕೆಯ ಪ್ರಿಯಕರ ದಿಲೀಪ್ ಹೆಗ್ಡೆ ಸೇರಿ ಕೊಲೈಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳನ್ನು ಅ.25ರಂದು ಅಜೆಕಾರು ಪೊಲೀಸರು ಬಂಧಿಸಿದ್ದರು.
Next Story





