ಅತ್ತೂರು ಬಸಿಲಿಕಾದ ವಾರ್ಷಿಕ ಮಹೋತ್ಸವಕ್ಕೆ ವೈಭವದ ತೆರೆ
ಭಕ್ತ ಸಾಗರದೊಂದಿಗೆ ಐದು ದಿನಗಳ ಉತ್ಸವ ಯಶಸ್ವಿ ಸಮಾಪ್ತಿ

ಕಾರ್ಕಳ: ಅತ್ತೂರಿನ ಸಂತ ಲಾರೆನ್ಸ್ ಬಸಿಲಿಕಾದ ವಾರ್ಷಿಕ ಮಹೋತ್ಸವದ ಕೊನೆಯ ದಿನವಾದ ಇಂದು ಭಕ್ತ ಸಾಗರವೇ ಹರಿದು ಬಂದಿದ್ದು, ಈ ಮೂಲಕ ಐದು ದಿನಗಳ ಉತ್ಸವ ವೈಭವದ ತೆರೆ ಕಂಡಿತು.
ಮಹೋತ್ಸವದ ಶೃಂಗಾರ ದಿನವಾದ ಇಂದು ಎಂಟು ಬಲಿಪೂಜೆಗಳು ನೆರವೇರಿದವು. ಬಾರಾಯ್‌ಪುರ್ ಧರ್ಮಕ್ಷೇತ್ರದ ನಿವೃತ್ತ ಧರ್ಮಾಧ್ಯಕ್ಷ ಅತಿ ವಂ.ಡಾ.ಸಲ್ವಾದೋರ್ ಲೋಬೊ ಪ್ರಮುಖ ಬಲಿಪೂಜೆಯನ್ನು ನೆರವೇರಿಸಿ ದರು. ಗುರು ಜಿತೇಶ್ ತಮ್ಮ ಧಾರ್ಮಿಕ ಭಾಷಣದಲ್ಲಿ, ಭರವಸೆಯ ಜೀವನ, ಕ್ರಿಸ್ತನೊಂದಿಗೆ ಯಾತ್ರಾರ್ಥಿಗಳಾಗುವ ಮಹತ್ವ ಮತ್ತು ಜುಬಿಲಿ ವರ್ಷದ ಆಶಯಗಳನ್ನು ಪ್ರಬೋಧಿಸಿದರು.
ಕಾರ್ಕಳ ಶಾಸಕ ಸುನಿಲ್ ಕುಮಾರ್ ಸೇರಿದಂತೆ ಅನೇಕ ಗಣ್ಯರು ಈ ಮಹೋತ್ಸವದಲ್ಲಿ ಪಾಲ್ಗೊಂಡು, ಬಲಿಪೂಜೆ ಹಾಗೂ ಇತರ ಧಾರ್ಮಿಕ ವಿಧಿವಿಧಾನಗಳಲ್ಲಿ ಭಾಗವಹಿಸಿದರು. ಭಕ್ತಾಧಿಗಳು ಪವಿತ್ರ ಪುಷ್ಕರಣಿಯ ಜಲ ತೀರ್ಥ, ಮೊಂಬತ್ತಿ ಬೆಳಗಿಸುವಿಕೆ, ಪೂಜಾ ಬಿನ್ನಹ ಸಲ್ಲಿಕೆ, ಪಾಪ ನಿವೇದನೆ ಸಂಸ್ಕಾರ, ಪುಷ್ಪಪ್ರಸಾದ ಸೇವೆ ಮುಂತಾದ ಆಚರಣೆಗಳಲ್ಲಿ ಪಾಲ್ಗೊಂಡರು.
ಸಂಜೆಯ ಅಂತಿಮ ಪೂಜೆಯ ಬಳಿಕ, ಸಂತ ಲಾರೆನ್ಸ್ ಅವರ ಪವಾಡಮಯ ಪ್ರತಿಮೆಯನ್ನು ಗುಡಿಗೆ ಮೆರವಣಿಗೆಯ ಮೂಲಕ ಮರು ಸ್ಥಾಪಿಸಲಾಯಿತು. ಮಹೋತ್ಸವದ ಧ್ವಜವನ್ನು ಗೌರವಯುತವಾಗಿ ಕೆಳಗಿಳಿಸ ಲಾಯಿತು. ಮಹೋತ್ಸ ವವು ಧಾರ್ಮಿಕ ನಂಬಿಕೆ, ಸೌಹಾರ್ದತೆ ಮತ್ತು ಸಮುದಾಯ ಭಾವೈಕ್ಯತೆಯನ್ನು ಮತ್ತಷ್ಟು ಇಮ್ಮಡಿಗೊಳಿಸಿತು
ಸಾವಿರಾರು ಭಕ್ತರು ಹರಕೆಗಳನ್ನು ಈಡೇರಿಸಲು ಮತ್ತು ತಮ್ಮ ಬಿನ್ನಹಗಳನ್ನು ಅರ್ಪಿಸಲು ಪುಣ್ಯಕ್ಷೇತ್ರಕ್ಕೆ ಆಗಮಿಸಿದರು. ಈ ಮಹೋತ್ಸವವು ಭಕ್ತರಲ್ಲಿ ಆಧ್ಯಾತ್ಮಿಕ ಉತ್ಸಾಹವನ್ನು ಭಕ್ತಿಯಲ್ಲಿ ಮಿಂದೇಳುವಂತಾಗಿದ್ದು, ನಂಬಿಕೆ, ಭರವಸೆ ಮತ್ತು ಸಮುದಾಯ ಸೌಹಾರ್ದತೆಯ ಪ್ರತೀಕವಾಗಿ ಪರಿಣಮಿಸಿತು. ಬಸಿಲಿಕಾದ ವಠಾರ ಹಾಗೂ ಸುತ್ತಮುತ್ತಲಿನ ಪ್ರದೇಶಗಳು ಹೂವಿನ ತೋರಣ ಗಳು, ವಿದ್ಯುತ್ ದೀಪಾಲಂಕಾರಗಳಿಂದ ಎಲ್ಲರ ಮನಸ್ಸನ್ನು ಸೆಳೆಯಿತು.







