ಡಾ.ಕೃಷ್ಣಪ್ರಸಾದ್‌ಗೆ ತಿಂಗಳೆ ಸಾಹಿತ್ಯ ಪ್ರಶಸ್ತಿ

ಉಡುಪಿ, ಫೆ.3: ಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾಮದ ತಿಂಗಳೆಯಲ್ಲಿ ತಿಂಗಳೆ ಪ್ರತಿಷ್ಠಾನದ ವತಿಯಿಂದ ಪ್ರತಿ ವರ್ಷ ನಡೆಯುವ 64ನೇ ವರ್ಷದ ತಿಂಗಳೆ ಸಾಹಿತ್ಯೋತ್ಸವದಲ್ಲಿ ಈ ಬಾರಿ ಮಹಾರಾಷ್ಟ್ರದ ಸಾವಂತವಾಡಿ ಸಿಂಧೂದುರ್ಗಾ ಸಂಸ್ಥಾನದ ರಾಜಬಹಾದ್ದೂರು ಕೇಮ್ ಸಾವಂತ್ ಬೋಸ್ಲೆ ಭಾಗವಹಿಸಲಿದ್ದಾರೆ ಎಂದು ತಿಂಗಳೆ ಪ್ರತಿಷ್ಠಾನದ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಬಾರಿಯ ತಿಂಗಳೆ ಸಾಹಿತ್ಯೋತ್ಸವ ಮಾರ್ಚ್ 8ರಂದು ಸಂಜೆ 6 ಗಂಟೆಗೆ ಪ್ರಾರಂಭಗೊಳ್ಳಲಿದೆ. ಉಡುಪಿಯ ಖ್ಯಾತ ನೇತ್ರತಜ್ಞ ಡಾ.ಕೃಷ್ಣ ಪ್ರಸಾದ್ ಕೂಡ್ಲು ಇವರಿಗೆ ಪ್ರತಿಷ್ಠಾನದ ವತಿಯಿಂದ ನೀಡಲಾಗುವ ‘ತಿಂಗಳೆ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು ಎಂದರು.
ಪ್ರತಿಷ್ಠಾನದ ಮುರಲಿ ಕಡೆಕಾರು ಅವರು ಮಾತನಾಡಿ, 64ನೇ ವರ್ಷದಲ್ಲಿ ನಡೆಯುತ್ತಿರುವ ತಿಂಗಳೆ ಧರ್ಮ-ಕಲೆ- ಸಾಹಿತ್ಯ ಈ ಬಾರಿ ಮಾ.6ರಿಂದ 8ರವರೆಗೆ ನಡೆಯಲಿದೆ. ಮೂರೂ ದಿನಗಳಂದು ತಿಂಗಳೆ ಧರ್ಮದೈವಗಳ ನೇಮೋತ್ಸವವು ನಡೆಯಲಿದೆ ಎಂದರು.
ಮಾ.8ರಂದು ಸಂಜೆ ಸಾಹಿತ್ಯೋತ್ಸವ ನಡೆಯಲಿದ್ದು, ಚಿಂತಕಿ ಡಾ.ವೀಣಾ ಬನ್ನಂಜೆ ಅವರು ಅನುಭವ ಮಂಟಪದ ಕುರಿತು ಉಪನ್ಯಾಸ ನೀಡಲಿದ್ದಾರೆ. ಅದೇ ರೀತಿ ಯುವ ವಾಗ್ಮಿ ಶ್ರೀಕಾಂತ ಶೆಟ್ಟಿ ಕಾರ್ಕಳ ಇತಿಹಾಸದ ಪುಟಗಳಲ್ಲಿ ಸಾವಂತವಾಡಿ ಕುರಿತು ಮಾತನಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಖ್ಯಾತ ಉದ್ಯಮಿ ಡಾ.ಎಚ್.ಎಸ್.ಶೆಟ್ಟಿ ಕುದ್ರುಮನೆ ಹಾಗೂ ಮುಂಬೈನ ಲೇಖಕ ವಿಜಯ ಪಾತ್ರೇಪೆಕರ್ ಉಪಸ್ಥಿತರಿರುವರು ಎಂದರು.
ಕೊನೆಯಲ್ಲಿ ಗುರು ಬನ್ನಂಜೆ ಸಂಜೀವ ಸುವರ್ಣರ ನಿರ್ದೇಶನಲ್ಲಿ ‘ಚಕ್ರವ್ಯೆಹ’ ಯಕ್ಷಗಾನವನ್ನು ಅವರ ಶಿಷ್ಯರು ಪ್ರಸ್ತುತ ಪಡಿಸಲಿದ್ದಾರೆ. ಬಳಿಕ ನೇಮೋತ್ಸವ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬನ್ನಂಜೆ ಸಂಜೀವ ಸುವರ್ಣ, ಕಿರಣ್‌ಕುಮಾರ್ ಹಾಗೂ ಡಾ.ಪ್ರಶಾಂತ್ ಶೆಟ್ಟಿ ಉಪಸ್ಥಿತರಿದ್ದರು.







