ಮಾಸ್ಟರಿಂಗ್ ಪೈಥಾನ್: ಅಧ್ಯಾಪಕರ ಅಭಿವೃದ್ಧಿ ಕಾರ್ಯಾಗಾರ

ಶಿರ್ವ: ಬಂಟಕಲ್ಲಿನ ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವಿದ್ಯುನ್ಮಾನ ಮತ್ತು ಸಂವಹನ ವಿಭಾಗ, ಕಾಕುಂಜೆ ಸಾಫ್ಟ್‌ವೇರ್, ಮಂಗಳೂರು ಮತ್ತು ಕಾಲೇಜಿನ ಐಎಸ್‌ಟಿಇ ಘಟಕ, ಐಇಇಇ ಘಟಕಗಳ ಸಹಯೋಗದೊಂದಿಗೆ ಮಾಸ್ಟರಿಂಗ್ ಪೈಥಾನ್: ಉದಯೋನ್ಮುಖ ಪ್ರವೃತ್ತಿಗಳು ಮತ್ತು ಆವಿಷ್ಕಾರಗಳು ಎಂಬ ಶೀರ್ಷಿಕೆಯೊಂದಿಗೆ ಐದು ದಿನಗಳ ಅಧ್ಯಾಪಕರ ಅಭಿವೃದ್ದಿ ಕಾರ್ಯಾಗಾರವನ್ನು ಕಾಲೇಜಿನ ಆವರಣದಲ್ಲಿ ಆಯೋಜಿಸಲಾಗಿತ್ತು.
ಫೆ.೩ರಂದು ಕಾರ್ಯಾಗಾರವನ್ನು ಉದ್ಘಾಟಿಸಿದ ಕಾಕುಂಜೆ ಸಾಫ್ಟ್‌ವೇರ್ ನಿರ್ದೇಶಕ ಜಿ.ಕೆ.ಭಟ್ ಮಾತನಾಡಿ, ಅಧ್ಯಾಪಕರಿಗೆ ಪೈಥಾನ್ ಪ್ರೋಗಾಮ್ ಮತ್ತು ಅದರ ಯಾಂತ್ರಿಕ ಕಲಿಕೆ, ಡಾಟಾ ವಿಶ್ಲೇಷಣೆ ಮತ್ತು ಕೃತಕ ಬುದ್ದಿಮತ್ತೆ ಸೇರಿದಂತೆ ವಿವಿಧ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಅದರ ಅನ್ವಯಗಳ ಬಗ್ಗೆ ಆಳವಾದ ಜ್ಞಾನ ಮತ್ತು ಕೌಶಲ್ಯವನ್ನು ಬೆಳೆಸಲು ಸಹಾಯವಾಗುತ್ತದೆ ಎಂದರು.
ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನದ ಕಾರ್ಯದರ್ಶಿ ರತ್ನಕುಮಾರ್ ಮಾತನಾಡಿದರು. ಅಧ್ಯಕ್ಷತೆಯನ್ನು ಸಂಸ್ಥೆಯ ಪ್ರಾಂಶುಪಾಲ ಡಾ.ತಿರುಮಲೇಶ್ವರ ಭಟ್ ವಹಿಸಿದ್ದರು. ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ಮುಖ್ಯಸ್ಥ ಅರುಣ್ ಉಪಾಧ್ಯಾಯ ಉಪಸ್ಥಿತರಿದ್ದರು. ಡಾ.ಶಿಲ್ಪಾ ಕಾಮತ್ ವಂದಿಸಿದರು. ಅಕ್ಷತಾ ರಾವ್ ಕಾರ್ಯಕ್ರಮ ನಿರೂಪಿಸಿದರು.