ವಿಶ್ವಕರ್ಮ ಶಿಕ್ಷಣ ಟ್ರಸ್ಟ್‌ನಿಂದ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿವೇತನ

ಉಡುಪಿ, ಫೆ.4: ಉಡುಪಿ ಜಿಲ್ಲಾ ಶ್ರೀವಿಶ್ವಕರ್ಮ ಎಜ್ಯುಕೇಷನಲ್ ಟ್ರಸ್ಟ್‌ನ ವತಿಯಿಂದ 2024-25ನೇ ಸಾಲಿನ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ ಫೆ.9ರಂದು ರವಿವಾರ ಕುಂಜಿಬೆಟ್ಟಿನ ಶ್ರೀಗಾಯತ್ರಿ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ ಎಂದು ಟ್ರಸ್ಟ್‌ನ ಅಧ್ಯಕ್ಷ ಬಿ.ಎ.ಆಚಾರ್ಯ ಮಣಿಪಾಲ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2002ರಲ್ಲಿ ಸ್ಥಾಪನೆಗೊಂಡ ಈ ಟ್ರಸ್ಟ್, ಸಮಾಜದ ವಿದ್ಯಾರ್ಥಿಗಳ ಕ್ಷೇಮ ಚಿಂತನೆಗೆ ಆದ್ಯತೆ ನೀಡುತಿದ್ದು, ವೃತ್ತಿಪರ ಶಿಕ್ಷಣ ಹಾಗೂ ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿ -ವಿದ್ಯಾರ್ಥಿನಿಯರನ್ನು ಪ್ರೋತ್ಸಾಹಿಸುತ್ತಾ ಬಂದಿದೆ. ಕಳೆದ 23 ವರ್ಷಗಳಲ್ಲಿ 2500ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ 72.25 ಲಕ್ಷ ರೂ.ಮೊತ್ತದ ವಿದ್ಯಾರ್ಥಿ ವೇತನವನ್ನು ವಿತರಿಸಿದೆ ಎಂದರು.
ಈ ಸಾಲಿನಲ್ಲಿ 205 ವಿದ್ಯಾರ್ಥಿಗಳಿಗೆ 9ಲಕ್ಷ ರೂ.ಗಳಿಗೂ ಅಧಿಕ ಮೊತ್ತದ ವಿದ್ಯಾರ್ಥಿ ವೇತನವನ್ನು ವಿತರಿಸಲಾಗುತ್ತದೆ. ಕಾಪು ಶ್ರೀಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಗಣೇಶ ಆಚಾರ್ಯ ಅವರು ಸಮಾರಂಭವನ್ನು ಬೆಲಗ್ಗೆ 10:00ಕ್ಕೆ ಉದ್ಘಾಟಿಸಲಿದ್ದು, ಧಾರವಾಡ ವಿವಿಯ ನಿವೃತ್ತ ಪ್ರಾಧ್ಯಾಪಕ ಡಾ.ಈರಣ್ಣ ಪತ್ತಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿ ದ್ದಾರೆ. ಹುಬ್ಬಳ್ಳಿಯ ಭೀಮಸೇನ ಬಡಿಗೇರ್, ಕಾರ್ಕಳದ ಬಿ.ಪ್ರಕಾಶ್ ಆಚಾರ್ಯ, ವೆಂಕಟೇಶ್ ಆಚಾರ್ಯ ಉಪಸ್ಥಿತರಿರುವರು.
ಟ್ರಸ್ಟ್, ವಿಶ್ವಕರ್ಮ ಸಮಾಜಕ್ಕಿಂತಲೂ ಹಿಂದುಳಿದ ಸಮುದಾಯಗಳ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಿಕೊಂಡು ಬರುತ್ತಿದೆ. ಅದೇ ರೀತಿ ಈ ಬಾರಿಯೂ ಮೂಡಿಗೆರೆಯ ಪರಿಶಿಷ್ಟ ಪಂಗಡದ ಸದ್ಯ ತೆಂಕನಿಡಿ ಯೂರು ಸರಕಾರಿ ಕಾಲೇಜಿನಲ್ಲಿ ಕನ್ನಡ ಸ್ನಾತಕೋತ್ತರ ವಿದ್ಯಾರ್ಥಿನಿಯಾದ ಪುಷ್ಪಾ ಗೌಡರಿಗೆ ಈ ಸಾಲಿನ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದು ಬಿ.ಎ.ಆಚಾರ್ಯ ತಿಳಿಸಿದರು.
ಅದೇ ರೀತಿ ಎಂ.ಕಾಂನಲ್ಲಿ ಎರಡನೇ ರ್ಯಾಂಕ್ ಪಡೆದ ಪ್ರೀತಿ ಎಂ. ಅಂಬಲಪಾಡಿ, ಸಮಾಜದಲ್ಲಿ ಡಾಕ್ಟರೇಟ್ ಪದವಿ ಪಡೆದಿರುವ ಕೃಷಿ ವಿಜ್ಞಾನಿ ಡಾ.ಸದಾನಂದ ಆಚಾರ್ಯ ಬೈಕಾಡಿ, ಸಮಾಜಶಾಸ್ತ್ರ ಪ್ರಾಧ್ಯಾಪಕ ಡಾ.ರಾಘವೇಂದ್ರ ಆಚಾರ್ಯ, ಜೀವರಸಾಯನ ಶಾಸ್ತ್ರ ವಿಭಾಗದ ಸಂಶೋಧಕಿ ಡಾ.ರಂಜಿತಾ ಮಂಗಳೂರು ಇವರನ್ನು ಸಹ ಗೌರವಿಸಲಾ ಗುವುದು ಎಂದರು.
ಅಪರಾಹ್ನ 2:30ಕ್ಕೆ ಪೋಷಕರ ಸಮಾವೇಶ ಜರಗಲಿದೆ. ಅಲ್ಲದೇ ಕಾರ್ಯಕ್ರಮದ ಅಂಗವಾಗಿ ಚಿತ್ರಕಲಾವಿದ ಮಹೇಶ್ ಆಚಾರ್ಯ ಮರ್ಣೆ ಇವರ ಕಲಾಕೃತಿಗಳ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಖ್ಯಾತ ಹಿರಿಯ ಕಲಾವಿದ ಮಂಗಳೂರಿನ ಎನ್.ಎಸ್.ಪತ್ತಾರ್ ಪ್ರದರ್ಶನ ಉದ್ಘಾಟಿಸಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್‌ನ ಉಪಾಧ್ಯಕ್ಷ ವಸಂತ ಆಚಾರ್ಯ ಕಾರ್ಕಳ, ಕೋಶಾಧಿಕಾರಿ ಪ್ರೊ.ಭಾಸ್ಕರ ಆಚಾರ್ಯ ಕುರ್ಕಾಲು, ನಿಕಟಪೂರ್ವ ಅಧ್ಯಕ್ಷ ಡಾ.ದಾಸಾಚಾರ್ಯ, ಪಾಂಡುರಂಗ ಆಚಾರ್ಯ ಉಪಸ್ಥಿತರಿದ್ದರು.