ನಕಲಿ ಕಟ್ಟಡ ಕಾರ್ಮಿಕರ ಬಗ್ಗೆ ಮಾಹಿತಿ ನೀಡಿ: ವಿಜೇಂದ್ರ ಕುಮಾರ್

ಕುಂದಾಪುರ, ಫೆ.4: ಭೋಗಸ್ ಕಾರ್ಡುದಾರರು ಪಿಂಚಣಿ ಪಡೆದರೆ ನೈಜ ಕಟ್ಟಡ ಕಾರ್ಮಿಕರಿಗೆ ಸಿಗುವ ಸೌಲಭ್ಯಗಳ ಹಣಕ್ಕೆ ತೊಂದರೆ ಆಗುತ್ತದೆ. ಆದುದರಿಂದ ನೈಜ ಕಟ್ಟಡ ಕಾರ್ಮಿಕರು ನಕಲಿ ಕಟ್ಟಡ ಕಾರ್ಮಿಕರ ಬಗ್ಗೆ ಇಲಾಖೆಗೆ ಮಾಹಿತಿ ನೀಡಿ ಮಂಡಳಿ ಹಣ ದುರುಪಯೋಗ ತಡೆಗಟ್ಟಬೇಕು ಎಂದು ಕುಂದಾಪುರ ವೃತ್ತ ಕಾರ್ಮಿಕ ನಿರೀಕ್ಷಕ ವಿಜೇಂದ್ರ ಕುಮಾರ್ ಹೇಳಿದ್ದಾರೆ.
ಕುಂದಾಪುರ ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ (ಸಿಐಟಿಯು)ದ ವತಿಯಿಂದ ರವಿವಾರ ಆಯೋಜಿಸಲಾದ ಪಿಂಚಣಿದಾರರ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡುತಿದ್ದರು.
ಸಂಘದ ಅಧ್ಯಕ್ಷ ಸುರೇಶ್ ಕಲ್ಲಾಗರ ಮಾತನಾಡಿ, ಪಿಂಚಣಿದಾರರು ಎದುರಿಸುವ ಸಮಸ್ಯೆಗಳನ್ನು ಪರಿಹರಿಸಲು ಸಂಘಟಿ ತರಾಗಬೇಕಾಗಿದೆ. ಅರವತ್ತು ವಯಸ್ಸಿನ ನಂತರ ಕಾರ್ಮಿಕರು ವಯೋಸಹಜ ಕಾಯಿಲೆಗಳಿಂದ ಕೆಲಸ ಮಾಡುವ ಶಕ್ತಿ ಕಳೆದುಕೊಳ್ಳುತ್ತಾರೆ ಅಂತಹ ಸಂದರ್ಭದಲ್ಲಿ ವೈದ್ಯಕೀಯ ಸೌಲಭ್ಯ ಅವಶ್ಯಕ. ಮಂಡಳಿ ಪಿಂಚಣಿದಾರರಿಗೂ ಆಸ್ಪತ್ರೆಗಳ ವೈದ್ಯಕೀಯ ವೆಚ್ಚ ನೀಡಬೇಕು ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ಕಟ್ಟಡ ಕಾರ್ಮಿಕರ ಸಂಘದ ಗೌರವಾಧ್ಯಕ್ಷ ಚಿಕ್ಕ ಮೊಗವೀರ ಗಂಗೊಳ್ಳಿ ವಹಿಸಿದ್ದರು. ಸಂಘದ ಕೋಶಾಧಿಕಾರಿ ಚಂದ್ರಶೇಖರ ವಿ. ಸ್ವಾಗತಿಸಿದರು. ಕೃಷ್ಣ ಪೂಜಾರಿ ವಂದಿಸಿದರು.
ಈ ಸಂದರ್ಭದಲ್ಲಿ ನೂತನ ಪಿಂಚಣಿದಾರರ ಸಂಘ ರಚಿಸಲಾಯಿತು. ಅಧ್ಯಕ್ಷರಾಗಿ ಚಿಕ್ಕ ಮೊಗವೀರ ಗಂಗೊಳ್ಳಿ, ಕಾರ್ಯದರ್ಶಿಯಾಗಿ ಕೃಷ್ಣ ಪೂಜಾರಿ, ಕೋಶಾಧಿಕಾರಿಯಾಗಿ ಮಹಾಲಿಂಗ ಆಯ್ಕೆಯಾದರು.