ಉದ್ಯೋಗ ಖಾತರಿ ಯೋಜನೆಯ ಸಮಸ್ಯೆ ವಿರೋಧಿಸಿ ಪ್ರತಿಭಟನೆ

ಉಡುಪಿ, ಫೆ.4: ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸಮಸ್ಯೆಗಳನ್ನು ವಿರೋ ಧಿಸಿ ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘ ಉಡುಪಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಇಂದು ಉಡುಪಿ ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಈ ಕುರಿತ ಜಿಲ್ಲಾ ಮುಖ್ಯಕಾರ್ಯನಿರ್ವಣಾಧಿಕಾರಿ ಅವರಿಗೆ ಮನವಿ ನೀಡಲಾಯಿತು. ಉದ್ಯೋಗ ಖಾತರಿ ಯೋಜನೆಯಲ್ಲಿ ವರ್ಷಕ್ಕೆ 100 ದಿನಗಳ ಕೆಲಸ ಎಂದರೂ ಸಹ ಎಲ್ಲೂ 100 ದಿನ ಸಿಗುವುದಿಲ್ಲ. 85 ಹಾಜರಾತಿ ಆದ ನಂತರ ಎನ್‌ಎಂಆರ್ ನಲ್ಲಿ ಹೆಸರು ತಡೆಯಲಾಗುತ್ತಿದೆ. ಈಗಾಗಲೇ ಕೆಲಸ ಮಾಡಿದ ಬಾಕಿ ಇರುವ ಅಕುಶಲ ಕಾರ್ಮಿಕರ ಕೂಲಿ ಹಣ ಕೂಡಲೇ ಪಾವತಿಸಲು ತಕ್ಷಣ ಕ್ರಮಕೈಗೊಳ್ಳಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಕಾಯಕ ಭಂದುಗಳಿಗೆ ಪ್ರೋತ್ಸಾಹ ಹಣ ಬಾಕಿ ಇರುವುದು ಕೂಡಲೇ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು. ಆನ್‌ಲೈನ್ ಹಾಜರಾತಿ ತೆಗೆಯಲು ಗುಡ್ಡ ಗಾಡು ಪ್ರದೇಶಗಳಲ್ಲಿ ನೆಟ್‌ವರ್ಕ್ ಇರುವುದಿಲ್ಲ. ಇದರಿಂದ ಕೆಲವರ ಹಾಜರಾತಿ ತೆಗೆದು ಕೊಳ್ಳುವುದಿಲ್ಲ. ಆದುದರಿಂದ ಇದನ್ನು ಸರಿಪಡಿಸಬೇಕು.
ಕಡ್ಡಾಯವಾಗಿ ವರ್ಷಕ್ಕೆ 200 ದಿನ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಕೆಲಸ ಒದಗಿಸಬೇಕು. ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಪ್ರಯಾಣ ಭತ್ಯೆಯ ದೂರ 5ಕಿ.ಮೀ ಬದಲಿಗೆ 4 ಕಿ.ಮೀ. ಮಿತಿಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಪ್ರತಿಭಟನೆಯಲ್ಲಿ ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘದ ರಾಜ್ಯ ಸಮಿತಿ ಸದಸ್ಯರಾದ ಕವಿರಾಜ್ ಎಸ್.ಕಾಂಚನ್, ಉಡುಪಿ ಜಿಲ್ಲಾ ಮುಖಂಡರಾದ ನಾಗರತ್ನ ನಾಡ, ರಾಜೀವ ಪಡುಕೋಣೆ, ಶೀಲಾವತಿ, ಉಡುಪಿ ವಲಯ ಮುಖಂಡರಾದ ಉಮೇಶ್ ಕುಂದರ್,ನಳಿನಿ ರೈತ ಸಂಘದ ಉಡುಪಿ ಜಿಲ್ಲಾ ಸಂಚಾಲಕರಾದ ಚಂದ್ರಶೇಖರ್ ಉಪಸ್ಥಿತರಿದ್ದರು.