ಖಾಸಗಿ ಬಸ್ ದರ ಏರಿಕೆಗೆ ಚಿಂತನೆ: ಸದಾನಂದ ಛಾತ್ರ

ಉಡುಪಿ: ರಾಜ್ಯ ಸರಕಾರ ಈಗಾಗಲೇ ಕೆಎಸ್ಸಾರ್ಟಿಸಿ ಬಸ್‌ಗಳ ಟಿಕೇಟ್ ದರವನ್ನು ಹೆಚ್ಚಿಸಿದ್ದು, ಖಾಸಗಿ ಬಸ್‌ಗಳಿಗೂ ಪ್ರಯಾಣಿಕರ ಟಿಕೇಟ್ ದರ ಏರಿಸುವುದು ಅನಿವಾರ್ಯವಾಗಿದೆ. ಅದಕ್ಕಾಗಿ ಈಗಾಗಲೇ ಮನವಿ ಯನ್ನು ಇಲಾಖೆಗೆ ಸಲ್ಲಿಸಿದ್ದೇವೆ. ಶೀಘ್ರವೇ ಸಣ್ಣ ಪ್ರಮಾಣದ ದರ ಏರಿಕೆ ಮಾಡಲಿದ್ದೇವೆ ಎಂದು ಕೆನರಾ ಬಸ್ ಮಾಲಕರ ಸಂಘದ ಉಪಾಧ್ಯಕ್ಷ ಸದಾನಂದ ಛಾತ್ರ ಹೇಳಿದ್ದಾರೆ.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಕಾರಿ ಬಸ್ ಸಂಚರಿಸದ ಜಿಲ್ಲೆಯ ಗ್ರಾಮೀಣ ಭಾಗ ಗಳಲ್ಲೂ ಖಾಸಗಿ ಬಸ್‌ಗಳು ಉತ್ತಮ ಸೇವೆ ನೀಡುತ್ತಿವೆ. ಸರಕಾರದ ಶಕ್ತಿ ಯೋಜನೆ ಜಾರಿಗೊಂಡ ಬಳಿಕ ನಮ್ಮ ಆದಾಯ ಕ್ಕೂ ದೊಡ್ಡ ಹೊಡೆತ ಬಿದ್ದಿದೆ. ಹೀಗಾಗಿ ಟಿಕೇಟ್ ದರ ಹೆಚ್ಚಿಸುವುದು ನಮಗೂ ಅನಿವಾರ್ಯವೆನಿಸಿದೆ. ಈಗಾಗಲೇ ಅನುಮತಿ ಸಿಕ್ಕಿದ್ದು, ಶೀಘ್ರವೇ ಅಲ್ಪಪ್ರಮಾಣದ ಏರಿಕೆ ಮಾಡುತ್ತೇವೆ ಎಂದು ಅವರು ಖಾಸಗಿ ಬಸ್ ದರ ಏರಿಕೆಯ ಸೂಚನೆ ನೀಡಿದರು.
ಶಕ್ತಿ ಯೋಜನೆಯನ್ನು ಖಾಸಗಿ ಬಸ್‌ಗಳಿಗೂ ವಿಸ್ತರಿಸಿ
ರಾಜ್ಯದ ಹೆಣ್ಣುಮಕ್ಕಳಿಗೆ ಉಚಿತ ಬಸ್ ಸಂಚಾರದ ಅವಕಾಶ ಕಲ್ಪಿಸಿರುವ ಶಕ್ತಿ ಯೋಜನೆ ರಾಜ್ಯ ಸರಕಾರದ ಒಂದು ಜನಪರವಾದ ಉತ್ತಮ ಯೋಜನೆ. ಇದು ಕೆಎಸ್ಸಾರ್ಟಿಸಿಯ ಯೋಜನೆಯಲ್ಲ. ಹೀಗಾಗಿ ಶಕ್ತಿ ಯೋಜನೆಯನ್ನು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸಂಚರಿಸುವ ಖಾಸಗಿ ಬಸ್‌ಗಳಿಗೂ ವಿಸ್ತರಿಸಬೇಕು ಎಂದು ಸದಾನಂದ ಛಾತ್ರ ರಾಜ್ಯ ಸರಕಾರವನ್ನು ಆಗ್ರಹಿಸಿದರು.
ಸರಕಾರ ಈ ಯೋಜನೆಯನ್ನು ಖಾಸಗಿ ಬಸ್‌ಗಳಿಗೂ ವಿಸ್ತರಿಸಿದರೆ ನಾವು ನಮ್ಮ ಬಸ್‌ಗಳಲ್ಲಿ ಸಂಚರಿಸುವ ಮಹಿಳೆ ಯರಿಗೆ ಉಚಿತ ಪ್ರಯಾಣ ಕಲ್ಪಿಸುತ್ತೇವೆ. ಕರಾವಳಿಯ ಎರಡು ಜಿಲ್ಲೆಗಳಲ್ಲಿ ಕಳೆದ 110 ವರ್ಷಗಳಿಂದ ಖಾಸಗಿ ಬಸ್‌ಗಳೇ ಜನರಿಗೆ ಅತ್ಯುತ್ತಮ ಸೇವೆ ನೀಡುತ್ತಿವೆ. ಕೆಎಸ್ಸಾರ್ಟಿಸಿ ಬಸ್ ಸಂಚರಿಸದೇ ಜಿಲ್ಲೆಯ ಮೂಲೆಮೂಲೆಯ ಹಳ್ಳಿಗಳಿಗೂ ಖಾಸಗಿ ಬಸ್ ವ್ಯವಸ್ಥೆ ಇದೆ. ಹೀಗಾಗಿ ಸರಕಾರದ ಯೋಜನೆ ವಂಚಿತ ಗ್ರಾಮೀಣ ಭಾಗದ ಜನರಿಗೆ ಶಕ್ತಿಯೋಜನೆಯನ್ನು ಪ್ರಯೋಜನ ತಲುಪಿಸಲು ಇದನ್ನು ಖಾಸಗಿಗೂ ವಿಸ್ತರಿಸಬೇಕು ಎಂದು ಛಾತ್ರ ನುಡಿದರು.
ಸರಕಾರ ಟಿಕೆಟ್ ದರವನ್ನು ತುಂಬಲಿ, ನಾವು ಮಹಿಳೆಯರಿಗೆ ಸಂಪೂರ್ಣ ಉಚಿತ ಪ್ರಯಾಣ ಒದಗಿಸುತ್ತೇವೆ. ಈ ಕುರಿತಂತೆ ನಾವು ಎರಡು ಬಾರಿ ಸರಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಕೆಎಸ್ಸಾರ್ಟಿಗೆ ಹೇಗೆ ಹಣ ನೀಡುತಿದ್ದಿರೋ, ಹಾಗೆ ನಮಗೂ ನೀಡಿ ಎಂದು ಕೇಳಿದ್ದೇವೆ. ಆದರೆ ಈವರೆಗೆ ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ ಎಂದರು.