ಇಂದ್ರಾಳಿ ಜಾರ್ಜ್ ಫೆರ್ನಾಂಡಿಸ್ ರಸ್ತೆ ದುರಸ್ತಿಗೆ ಆಗ್ರಹ

ಉಡುಪಿ, ಫೆ.7: ಇಂದ್ರಾಳಿ ರಾಷ್ಟ್ರೀಯ ಹೆದ್ದಾರಿಯಿಂದ ರೈಲು ನಿಲ್ದಾಣ ವನ್ನು ಸಂಪರ್ಕಿಸುವ ಜಾರ್ಜ್ ಫೆರ್ನಾಂಡಿಸ್ ಮುಖ್ಯರಸ್ತೆಯನ್ನು ಕೂಡಲೇ ದುರಸ್ತಿ ಮಾಡುವಂತೆ ಸಾಮಾಜಿಕ ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ಈ ರಸ್ತೆ ಸಂಪೂರ್ಣ ಹದಗೆಟ್ಟು ಹೊಂಡಗುಂಡಿಗಳು ನಿರ್ಮಾಣವಾಗಿವೆ. ಕೆಲವು ಕಡೆ ಬಿರುಕು ಕೂಡ ಬಿಟ್ಟಿದೆ. ಜೆಲ್ಲಿಕಲ್ಲುಗಳು ಕಿತ್ತು ಹೋಗಿ ಧೂಳೇಳುತ್ತಿದೆ. ಸದಾ ವಾಹನ ದಟ್ಟಣೆ ಇರುವ ಈ ರಸ್ತೆಯಲ್ಲಿ ಚಾಲಕರು ವಾಹನ ಚಲಾಯಿಸಲು ಹರಸಾಹಸ ಪಡಬೇಕಾದ ಪರಿಸ್ಥಿತಿ ಎದುರಾಗಿದೆ. ನಗರಾಡಳಿತವು ತಕ್ಷಣ ರಸ್ತೆಯನ್ನು ದುರಸ್ತಿ ಪಡಿಸಿ, ಸಂಚಾರಕ್ಕೆ ಯೋಗ್ಯ ವಾಗಿಸಬೇಕೆಂದು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಆಗ್ರಹಪಡಿಸಿದ್ದಾರೆ
ವರ್ಷದ ಹಿಂದೆ ಈ ರಸ್ತೆ ನವೀಕೃತಗೊಳಿಸಲಾಗಿತೆಂದು ಹೇಳಲಾಗುತ್ತಿದೆ. ಕಾಮಗಾರಿಯ ಗುಣಮಟ್ಟ ಕಳಪೆಯಾಗಿರುವು ದರಿಂದ ರಸ್ತೆ ಹಾಳಾಗಿರುವುದು ಎಂದು ಸಾರ್ವಜನಿಕರು ದೂರಿಕೊಂಡಿದ್ದಾರೆ. ರಸ್ತೆಯಲ್ಲಿ ವಾಹನಗಳ ವೇಗ ನಿಯಂತ್ರಿಸುವ ರಸ್ತೆ ಉಬ್ಬುಗಳಿದ್ದು, ಅವುಗಳಿಂದ ವಾಹನ ಅಪಘಾತಳಿಗೆ ಕಾರಣವಾಗುತ್ತಿದ್ದು, ಈಗಾಗಲೇ ವಾಹನಗಳು ನಿಯಂತ್ರಣ ತಪ್ಪಿಬಿದ್ದಿರುವ ಘಟನೆಗಳು ನಡೆದಿವೆ ಎಂದು ದೂರುಗಳು ಕೇಳಿಬಂದಿವೆ.





