‘ನಮ್ಮ ನಡಿಗೆ ಭೀಮ ನಡಿಗೆ’ ಭೀಮ ಶಕ್ತಿ ಸಮಾವೇಶ ಉದ್ಘಾಟನೆ

ಹೆಬ್ರಿ, ಫೆ.7: ಸಮತಾ ಸೈನಿಕ ದಳ ತಾಲೂಕು ಸಮಿತಿ ವತಿಯಿಂದ ನಮ್ಮ ನಡಿಗೆ ಭೀಮ ನಡಿಗೆ, ಭೀಮ ಶಕ್ತಿ ಸಮಾವೇಶ ಹಾಗೂ ಪಂಚಗ್ರಾಮ ಶಾಖೆಗಳ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮವನ್ನು ಬೆಳ್ವೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಸಭಾಭವನದಲ್ಲಿ ಇತ್ತೀಚೆಗೆ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಡುಪಿ ಉಸ್ತುವಾರಿ ಜೆ.ಸಿ.ವೆಂಕಟರ ಮಣ ಬೆಂಗಳೂರು ಮಾತನಾಡಿ, ಸಮತಾ ಸೈನಿಕ ದಳ ಸಂಘಟನೆ ಸ್ವತಃ ಅಂಬೇಡ್ಕರ್ 1924ರಲ್ಲಿ ಸ್ಥಾಪಿಸಿದ್ದು ಆಗ ಕೇವಲ 5 ಜನರಿದ್ದ ಸಂಘಟನೆ ಈಗ ದೇಶಾದ್ಯಂತ ಲಕ್ಷಾಂತರ ಸಂಖ್ಯೆಯಲ್ಲಿ ಕಾರ್ಯಕರ್ತರಿರುವ ಏಕೈಕ ಸಂಘಟನೆ ಯಾಗಿದೆ. ಅಂಬೇಡ್ಕರ್ ಶೋಷಿತ ಸಮುದಾಯದ ವ್ಯಕ್ತಿ ಎಂಬ ಒಂದೇ ಒಂದು ಕಾರಣದಿಂದ ಅವರನ್ನು ಒಂದು ಜಾತಿಗೆ ಸೀಮಿತಗೊಳಿಸ ಲಾಗಿದೆ ಎಂದು ಖೇಧ ವ್ಯಕ್ತಪಡಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಸಮತಾ ಸೈನಿಕ ದಳದ ಉಡುಪಿ ಜಿಲ್ಲಾಧ್ಯಕ್ಷ ವಿಶ್ವನಾಥ್ ಪೇತ್ರಿ ಮಾತನಾಡಿ, ಇಂದು ನಮಗೆ ಆಳುವ ಸರಕಾರಗಳು ನಮಗೆ ಬಾಪೂಜಿ ಸಂವಿಧಾನ ಬೇಕೊ ಅಥವಾ ಹರಿ ಓಂ ಸಂವಿಧಾನ ಬೇಕೊ ಎಂಬ ಪ್ರಶ್ನೆ ಇಟ್ಟಿದೆ. ಆದರೆ ಆ ಎರಡು ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಅವರ ಉದ್ದೇಶ ಮನುಸ್ಮತಿ ಜಾರಿಗೊಳಿಸುವುದು. ಹಾಗಾಗಿ ನಮಗೆ ಬೇಕಾಗಿರುವುದು ಡಾ.ಬಿ.ಆರ್.ಅಂಬೇಡ್ಕರ್ ನೀಡಿರುವ ಭಾರತದ ಭೀಮಾ ಸಂವಿಧಾನ. ಹಾಗಾಗಿ ಸಂವಿಧಾನವನ್ನು ಸಂರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಮಂಗಳೂರು ವಿಶ್ವವಿದ್ಯಾನಿಲಯ ವಿಜ್ಞಾನ ಉಪಕರಣ ಕೇಂದ್ರದ ಮಾಜಿ ಮುಖ್ಯಸ್ಥ ವಿವೇಕಾನಂದ ಭೀಮಾ ಶಕ್ತಿ ಸಮಾ ವೇಶ ರ್ಯಾಲಿಗೆ ಚಾಲನೆ ನೀಡಿದರು. ಬೌಧ ಮಹಾಸಭಾದ ಧರ್ಮಾಧಿಕಾರಿ ಶಂಭು ಸುವರ್ಣ ಭಗವಾನ್ ಬುದ್ಧರಿಗೂ ಪುಷ್ಪನಮನ ಸಲ್ಲಿಸಿದರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಕೋಶಾಧಿಕಾರಿ ಸತೀಶ್ ಜನ್ನಾಡಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಿಶ್ವೇಶ್ ಬ್ರಹ್ಮಾವರ, ಮಹಿಳಾ ಘಟಕದ ಜ್ಯೋತಿ ಶಿರಿಯಾರ, ಪ್ರಮುಖರಾದ ಶಾರದ ಮುದ್ದುರು, ಸುಬ್ರಹ್ಮಣ್ಯ ಅರಸಮ್ಮಕಾನ್, ಗೋಪಾಲ, ಸೌಮ್ಯಶ್ರಿ ಉಪಸ್ಥಿತರಿದ್ದರು.
ಹೆಬ್ರಿ ತಾಲೂಕು ಸಂಘಟನಾ ಕಾರ್ಯದರ್ಶಿ ಹರೀಶ್ ಸೂರೊಳ್ಳಿ ಕ್ರಾಂತಿಗೀತೆ ಹಾಡಿದರು. ಲಕ್ಷ್ಮೀ ಅರಸಮ್ಮಕಾನ್ ಸ್ವಾಗತಿಸಿದರು. ಮಂಜುನಾಥ್ ಹಿಲಿಯಾಣ ಹಾಗೂ ಗಣೇಶ್ ಮುದ್ದೂರು ಕಾರ್ಯಕ್ರಮ ನಿರೂಪಿಸಿದರು.







