ಪ.ಬಂಗಾಳದ ತನ್ನ ಕುಟುಂಬ ಸೇರಿಕೊಂಡ ಕೌಸರ್ ಆಲಿ

ಉಡುಪಿ, ಫೆ.8: ಕೇವಲ ಬಂಗಾಳಿ ಭಾಷೆಯನ್ನು ಮಾತ್ರ ಅರಿತಿದ್ದು, ಮಾನಸಿಕ ರೋಗಿಯಾಗಿದ್ದ ಕೌಸರ್ ಅಲಿ, ದೊಡ್ಡಣಗುಡ್ಡೆಯ ಡಾ.ಎ.ವಿ. ಬಾಳಿಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಸಂಬಂಧಿಕರು ಪತ್ತೆಯಾಗದ ಕಾರಣಕ್ಕೆ 2020ರ ಜುಲೈ ತಿಂಗಳಲ್ಲಿ ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರು ಶಂಕರಪುರದ ವಿಶ್ವಾಸದ ಮನೆಗೆ ದಾಖಲಿಸಿದ್ದರು.
ವಿಶ್ವಾಸದಮನೆ ಆಶ್ರಮದ ಸಿಬ್ಬಂದಿಗಳು ಈತನಿಗೆ ಸ್ನಾನ ಮಾಡಿಸಿ, ಶುಚಿ ಗೊಳಿಸಿ, ಪ್ರಾಥಮಿಕ ಚಿಕಿತ್ಸೆ ನೀಡಿ ಉಪಚರಿ ಸಿದ್ದರು. ಆದರೆ ಆತನಿಗೆ ಬಂಗಾಲಿ ಬಿಟ್ಟು ಬೇರೆ ಭಾಷೆ ಬಾರದ ಕಾರಣ ಆತನ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ವಿಶ್ವಾಸದ ಮನೆಯಲ್ಲಿ ಸಿಬ್ಬಂದಿಗಳ ಆರೈಕೆ ಹಾಗೂ ವೈದ್ಯಕೀಯ ಚಿಕಿತ್ಸೆಯ ಕಾರಣದಿಂದ ಗುಣಮುಖರಾಗುತ್ತಾ ಬಂದು ಆಶ್ರಮದಲ್ಲಿ ಸಾಮಾನ್ಯರಂತೆ ಎಲ್ಲಾ ಕೆಲಸ ಕಾರ್ಯಗಳನ್ನು ಮಾಡತೊಡಗಿದ್ದರು.
ವಿಶ್ವಾಸದಮನೆಗೆ ಕೆಎಂಸಿಯ ಮನೋರೋಗ ತಜ್ಞ ಡಾ.ಶರ್ಮಾ ಅವರೊಂದಿಗೆ ಬಂಗಾಲಿ ತಿಳಿದ ವೈದ್ಯರು ಭೇಟಿ ಕೊಟ್ಟಾಗ ಕೌಸರ್ ಆಲಿ ಜೊತೆ ಅವರ ಭಾಷೆಯಲ್ಲಿ ಮಾತಾಡಿದಾಗ ಆತ ತನ್ನ ತಮ್ಮನ ಮೊಬೈಲ್ ಸಂಖ್ಯೆಯನ್ನು ತಿಳಿಸಿ ದರು. ಈ ನಂಬರ್‌ಗೆ ಪೋನ್ ಕರೆ ಮಾಡಿದಾಗ ಕೊನೆಗೂ ಕೌಸರ್ ಅಲಿಯ ಪೂರ್ವಾಪರಗಳು ತಿಳಿದುಬಂತು. ಅಣ್ಣನ ಬಗ್ಗೆ ತಿಳಿದ ಅಜ್ಮೀರ್ ಆಲಿ, ಸ್ನೇಹಿತನ ಜೊತೆ ತಕ್ಷಣ ಪಶ್ವಿಮ ಬಂಗಾಲದಿಂದ ವಿಶ್ವಾಸದ ಮನೆಗೆ ಧಾವಿಸಿ ಬಂದರು.
ವಿಶ್ವಾಸದ ಮನೆಗೆ ಬಂದ ಅಜ್ಮೀರ್ ಅಲಿ, ಕೌಸರ್ ಆಲಿ ಕುಟುಂಬದ ಕುರಿತಂತೆ ಎಲ್ಲಾ ಮಾಹಿತಿಯನ್ನು ನೀಡಿದರು. ಸುಮಾರು 10 ವರ್ಷಗಳ ಹಿಂದೆ ಅವರು ಮನೆ ಬಿಟ್ಟು ಹೋಗಿದ್ದರು. ಇವರಿಗೆ ಮಾನಸಿಕ ಅಸ್ವಸ್ಥತೆಯ ಕಾಯಿಲೆ ಇತ್ತು. ಇದರಿಂದಾಗಿ ಹೆಂಡತಿ ಇವರನ್ನು ಬಿಟ್ಟು ಹೋಗಿದ್ದರು. ಅನಂತರ ಕಾಯಿಲೆ ಹೆಚ್ಚಾಗಿ ಒಂದು ದಿನ ಇದ್ದಕ್ಕಿದಂತೆ ಮನೆ ಬಿಟ್ಟು ಹೋದವರು ಹಿಂದಿರುಗಿ ಬರಲೇ ಇಲ್ಲ.
ಎಲ್ಲಾ ಕಡೆ ಹುಡುಕಾಡಿದರೂ ಇವರ ಸುಳಿವೇ ಸಿಗಲಿಲ್ಲ. ಈತನ ಚಿಂತೆಯಲ್ಲಿ ತಾಯಿ ಅಸು ನೀಗಿದರು. ಇಲ್ಲಿ ಅಣ್ಣ ಕೌಸರ್ ಅಲಿಯನ್ನು ನೋಡಿ ತುಂಬಾ ಸಂತೋಷವಾಯಿತು ಎಂದು ಅಜ್ಮೀರ್ ಅಲಿ ಆನಂದ ಬಾಷ್ಪ ಸುರಿಸಿದರು. ತನ್ನ ಸಂಪೂರ್ಣ ಜವಾಬ್ದಾರಿಯೊಂದಿಗೆ ಅಣ್ಣನನ್ನು ಆತ ಬಂಗಾಳಕ್ಕೆ ಕರೆದೊಯ್ದರು.
ಈ ಕುರಿತು ಪ್ರತಿಕ್ರಿಯಿಸಿದ ವಿಶ್ವಾಸದ ಮನೆಯ ಪಾಸ್ಟರ್ ಸುನಿಲ್ ಜಾನ್ ಡಿಸೋಜ, ವಿಶ್ವಾಸದಮನೆ ಅನಾಥಾಶ್ರಮ ಅದೆಷ್ಟೋ ದಿಕ್ಕುದೆಸೆಯಿಲ್ಲದೆ ಅಲೆದಾಡುತ್ತಿದ್ದ ಜನರಿಗೆ ಆಶಾಕಿರಣವಾಗಿದೆ. ತಮ್ಮ ಮನೆಯವರಿಂದ ದೂರಾಗಿ, ಮಾನಸಿಕ ಅಸ್ವಸ್ಥತೆಯಿಂದ ನರಳಾಡಿದ ಈ ಜೀವಗಳಿಗೆ ವಿಶ್ವಾಸದಮನೆ ನೆರಳಾಗಿ, ಆಸರೆಯಾಗಿ ಕೊನೆಗೆ ಅವರ ಮನೆಯವರ ಜೊತೆಯಾಗಿಸುವ ಈ ಮಹಾಕಾರ್ಯದಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.







