ಯಕ್ಷಗಾನ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪೂರಕ: ತಲ್ಲೂರು

ಕುಂದಾಪುರ, ಫೆ.10: ಯಕ್ಷಗಾನವನ್ನು ಮಕ್ಕಳು ಕಲಿತರೆ ಅವರ ಶೈಕ್ಷಣಿಕ ಪ್ರಗತಿಗೆ ತೊಡಕಾಗುತ್ತದೆ ಎಂಬ ಆತಂಕ ವನ್ನು ಹೆತ್ತವರು ಬಿಡಬೇಕು. ಯಕ್ಷಗಾನವನ್ನು ಕಲಿತ ಮಕ್ಕಳು ಕಲಿಕೆಯಲ್ಲೂ ಅತೀ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಯಾಗುತ್ತಿದ್ದಾರೆ ಎಂಬುದನ್ನು ಮನಗಾಣಬೇಕು. ಯಕ್ಷಗಾನ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದ್ದಾರೆ.
ಯಕ್ಷ ನುಡಿಸಿರಿ ಬಳಗ ಸಿದ್ಧಾಪುರ ಆಶ್ರಯದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಸಹಯೋಗದೊಂದಿಗೆ ಸಿದ್ಧಾಪುರದ ಸರಕಾರಿ ಪ್ರೌಢಶಾಲಾ ಮೈದಾನದಲ್ಲಿ ಶನಿವಾರ ಆಯೋಜಿಸಲಾದ ಎಂಟನೇ ವರ್ಷದ ಮಕ್ಕಳ ಯಕ್ಷಗಾನ ಪ್ರದರ್ಶನ ಮತ್ತು ಗುರುವಂದನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಯಕ್ಷಗಾನ ದೈವದತ್ತವಾದ ಕಲೆ. ಈ ಕಲೆಯನ್ನು ಅಭ್ಯಾಸಿಸಿದರೆ ಕೇವಲ ಪೌರಾಣಿಕ ಪ್ರಸಂಗಳ ಬಗ್ಗೆ ಮಕ್ಕಳಿಗೆ ಜ್ಞಾನ ಉಂಟಾಗುವುದು ಮಾತ್ರವಲ್ಲದೆ ಜೀವನದಲ್ಲಿ ನೈತಿಕತೆಯ ಪಾಠವೂ ಸಿಗುತ್ತದೆ. ಇದರಿಂದ ಮಕ್ಕಳು ಹೆತ್ತವರನ್ನು, ಗುರುಹಿರಿಯರನ್ನು ಗೌರವಾದಾರಗಳಿಂದ ಕಾಣುತ್ತಾರೆ ಎಂಬುದು ಸತ್ಯ. ಹೀಗಾಗಿ ಭವಿಷ್ಯದಲ್ಲಿ ಹೆತ್ತವರು ವೃದ್ಧಾಪ್ಯದಲ್ಲಿ ಅನಾಥಾಶ್ರಮಗಳನ್ನು ಸೇರುವ ಪ್ರಮೇಯ ತಪ್ಪುತ್ತದೆ ಎಂದರು.
ಕಮಲಶಿಲೆ ಶ್ರೀಬ್ರಾಹ್ಮಿ ದುರ್ಗಾ ಪರಮೇಶ್ವರಿ ದೇವಳದ ಧರ್ಮದರ್ಶಿ ಸಚ್ಚಿದಾನಂದ ಛಾತ್ರ, ಕಾರ್ಯಕ್ರಮದ ರೂವಾರಿ ಯಕ್ಷ ನುಡಿಸಿರಿಯ ಅಧ್ಯಕ್ಷ ಡಾ.ಜಗದೀಶ್ ಶೆಟ್ಟಿ ಮಾತನಾಡಿದರು. ಅಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷೆ ಶ್ರೀಲತಾ ಶೆಟ್ಟಿ ವಹಿಸಿದ್ದರು. ನಿವೃತ್ತ ಮುಖ್ಯ ಶಿಕ್ಷಕ ಸಂತೋಷ್ ಕುಮಾರ್ ಶೆಟ್ಟಿ, ಪ್ರೌಢಶಾಲೆಯ ಮುಖ್ಯ ಶಿಕ್ಷಕ ಚಂದ್ರ ಕುಲಾಲ್, ಶಾಲಾಭಿವೃಧ್ಧಿ ಸಮಿತಿ ಸಮಿತಿಯ ಅಧ್ಯಕ್ಷ ವಿಶ್ವನಾಥ ತುಂಬಿಕಲ್ಲಾಯ, ಉದ್ಯಮಿ ಶ್ರೀಕಾಂತ್ ನಾಯಕ್, ನುಡಿಸಿರಿ ಸದಸ್ಯ ಕೃಷ್ಣಮೂರ್ತಿ ಅಡಿಗ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಯಕ್ಷಗಾನ ಗುರು ನರಸಿಂಗ ತುಂಗ ಅವರಿಗೆ ಗುರುವಂದನೆ ಹಾಗೂ ಮಕ್ಕಳ ಯಕ್ಷ ಶಿಕ್ಷಣಕ್ಕೆ ಸಹಕರಿಸಿದ ಯಕ್ಷ ನುಡಿಸಿರಿ ಕಾರ್ಯದರ್ಶಿ ಭೋಜರಾಜ ಶೆಟ್ಟಿ ಅವರಿಗೆ ಗೌರವಾರ್ಪಣೆ ನಡೆಯಿತು. ಬಳಿಕ ಮಕ್ಕಳಿಂದ ಲಂಕಿಣಿ ಮೋಕ್ಷ ಮತ್ತು ಕನಕಾಂಗಿ ಕಲ್ಯಾಣ ಎಂಬ ಎರಡು ಪ್ರಸಂಗಗಳು ಪ್ರದರ್ಶನಗೊಂಡವು. ಇದರಲ್ಲಿ ಸುಮಾರು 45ಕ್ಕೂ ಅಧಿಕ ಮಕ್ಕಳು ಪಾಲ್ಗೊಂಡಿದ್ದರು.
ಪ್ರಸ್ತುತ ಪ್ರಾಯೋಗಿಕವಾಗಿ ಪ್ರೌಢಶಾಲೆಗಳಲ್ಲಿ ಪ್ರಾರಂಭವಾದ ಈ ಯಕ್ಷಗಾನ ಕಲಿಕೆ ಇಂದು ಜಿಲ್ಲೆಯ 90ಕ್ಕೂ ಅಧಿಕ ಶಾಲೆಗಳಿಗೆ ಹರಡಿದೆ. 4,000ಕ್ಕೂ ಆಧಿಕ ಮಕ್ಕಳು ಯಕ್ಷಗಾನವನ್ನು ಕಲಿಯುತ್ತಿದ್ದಾರೆ. ಇದು ಯಕ್ಷಗಾನದ ಶಕ್ತಿ. ತಮ್ಮ ಮಕ್ಕಳು ಯಕ್ಷಗಾನವನ್ನು ಕಲಿಯಲು ಹೆತ್ತವರು ಪ್ರೋ ನೀಡಬೇಕು. ಪ್ರಸ್ತುತ ಹಲವಾರು ದೇವಾಲಯಗಳಲ್ಲಿ 7-8 ಯಕ್ಷಗಾನ ಮೇಳಗಳು ಹುಟ್ಟಿವೆ. ನೂರಾರು ಕಲಾವಿದರಿಗೆ ಜೀವನೋಪಾಯವನ್ನು ಈ ಕಲೆ ಕಲ್ಪಿಸಿದೆ’
-ತಲ್ಲೂರು ಶಿವರಾಮ ಶೆಟ್ಟಿ, ಅಧ್ಯಕ್ಷರು, ಕರ್ನಾಟಕ ಯಕ್ಷಗಾನ ಅಕಾಡೆಮಿ







