ಕೃತಕ ಬುದ್ಧಿಮತ್ತೆ (ಎಐ) ಕುರಿತು ಜನಸಾಮಾನ್ಯರಿಗೆ ಅರಿವು, ಜಾಗೃತಿ: ಯತಿಕಾರ್ಪ್ ಇಂಡಿಯಾದಿಂದ ಯೋಜನೆ

ಉಡುಪಿ: ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಇಂದಿನ ದಿನಗಳಲ್ಲಿ ಭಾರೀ ಕೋಲಾಹಲಕ್ಕೆ ಕಾರಣವಾಗಿರುವ ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್-ಎಐ) ಕುರಿತು ವಿದ್ಯಾರ್ಥಿಗಳಿಗೆ, ವಿವಿಧ ವೃತ್ತಿನಿರತರಿಗೆ, ಆಸಕ್ತರಿಗೆ ಹಾಗೂ ಜನಸಾಮಾನ್ಯರಿಗೆ ಅರಿವು ಮೂಡಿಸಲು ಹಾಗೂ ಈ ಕುರಿತಂತೆ ಜಾಗೃತಿ ಮೂಡಿಸಲು ತಂತ್ರಜ್ಞಾನ ಕ್ಷೇತ್ರದಲ್ಲಿ ತನ್ನದೇ ಆದ ಸ್ಥಾನ ಹೊಂದಿರುವ ಬೆಂಗಳೂರಿನ ಯತಿಕಾರ್ಪ್ ಇಂಡಿಯಾ ವಿನೂತನ ಯೋಜನೆಯನ್ನು ರೂಪಿಸಿದೆ ಎಂದು ಸಂಸ್ಥೆಯ ಸ್ಥಾಪಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯತೀಶ್ ಕೆ.ಎಸ್.ತಿಳಿಸಿದ್ದಾರೆ.
ಉಡುಪಿ ಪ್ರೆಸ್ ಕ್ಲಬ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಪ್ರತಿ ತಾಲೂಕಿನಲ್ಲಿ ನಾಲ್ವರು ಯುವ ಪದವೀಧರರನ್ನು ಆಯ್ಕೆ ಮಾಡಿ ಅವರಿಗೆ ಕೃತಕ ಬುದ್ಧಿಮತ್ತೆಯಲ್ಲಿ ಆರು ತಿಂಗಳ ವಿಶೇಷ ತರಬೇತಿ ನೀಡಲಾಗುತ್ತದೆ. ಹೀಗೆ ತರಬೇತಿ ಪಡೆದ ‘ಎಐ ಪ್ರಾದೇಶಿಕ ಪ್ರತಿನಿಧಿಗಳು’ ಮುಂದೆ ವಿದ್ಯಾರ್ಥಿಗಳು, ಶಿಕ್ಷಕರು, ಉದ್ಯಮಿಗಳು ಸೇರಿದಂತೆ 33 ವಿವಿಧ ಕ್ಷೇತ್ರಗಳಲ್ಲಿ ಕೃತಕ ಬುದ್ಧಿಮತ್ತೆಯನ್ನು ಪರಿಚಯಿಸಲಿದ್ದಾರೆ ಎಂದರು.
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌ನ್ನು ರಾಜ್ಯದ ಜನತೆಗೆ ಪರಿಚಯಿಸುವ ಈ ಅತೀ ದೊಡ್ಡ ಯೋಜನೆಯಲ್ಲಿ ಪ್ರತಿ ತಾಲೂಕಿ ನಿಂದ ತಸಾ ನಾಲ್ವರು ಯುವಕ/ಯುವತಿಯರಿಗೆ ಉದ್ಯೋಗ ನೀಡಲಾಗುತ್ತದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು 1010 ಮಂದಿಗೆ ಐಎ ಕ್ಷೇತ್ರದಲ್ಲಿ ಹೊಸತನದ ಜೊತೆಗೆ ವಿಭಿನ್ನ ಅನುಭವ ಪಡೆಯಲು ಅವಕಾಶ ಮಾಡಿಕೊಡಲಾಗುತ್ತದೆ ಎಂದರು.
ಉಡುಪಿ ಜಿಲ್ಲೆಯ ಏಳು ತಾಲೂಕುಗಳಲ್ಲಿ ಒಟ್ಟು 30ಮಂದಿಯನ್ನು ಇದಕ್ಕಾಗಿ ಆಯ್ಕೆ ಮಾಡಲಾಗುತ್ತದೆ. ಇದಕ್ಕಾಗಿ ಜಿಲ್ಲಾ ಮಟ್ಟದಲ್ಲಿ ಫೆ.13ರಂದು ಮಣಿಪಾಲದ ಮಾಹೆ ವಿವಿಯ ವಾಣಿಜ್ಯ ವಿಭಾಗದಲ್ಲಿ ಇದಕ್ಕಾಗಿ ಸಂದರ್ಶನ ನಡೆಯಲಿದೆ. ಆಯ್ಕೆಯಾದವರಿಗೆ ತರಬೇತಿಯ ಮೊದಲ ಆರು ತಿಂಗಳು 25,000ದಿಂದ 30,000ರೂ. ವೇತನ ನೀಡಲಾಗುತ್ತದೆ. ಆರು ತಿಂಗಳ ಬಳಿಕ ಅವರನ್ನು ಯತಿಕಾರ್ಪ್ ಇಂಡಿಯಾದ ಪೂರ್ಣಕಾಲಿಕ ಉದ್ಯೋಗಿಯಾಗಿ ಸೇರ್ಪಡೆ ಮಾಡಲಾಗುವುದು ಎಂದರು.
ಆಯ್ಕೆಯಾದ ಅಭ್ಯರ್ಥಿಗಳು ಮೊದಲ ಆರು ತಿಂಗಳು ಫೀಲ್ಡ್‌ನಲ್ಲಿ ಕೆಲಸ ಮಾಡಿ ಅನುಭವ ಪಡೆದುಕೊಳ್ಳಬೇಕು. ಬಳಿಕ ಅವರನ್ನು ಖಾಯಂ ಉದ್ಯೋಗಿಗಳಾಗಿ ಕಚೇರಿಗೆ ನೇಮಿಸಿಕೊಳ್ಳಲಾಗುತ್ತದೆ. ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಾಲ್ಕು ಹಂತಗಳಲ್ಲಿ ನಡೆಯಲಿದೆ ಎಂದು ಯತೀಶ್ ತಿಳಿಸಿದರು.
ಆಸಕ್ತರು ಹೆಚ್ಚಿನ ಮಾಹಿತಿಗಳಿಗಾಗಿ ದೂರವಾಣಿ ಸಂಖ್ಯೆ: 7349740777 ಸಂಪರ್ಕಿಸುವಂತೆ ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಪ್ರಾಜೆಕ್ಟ್ ಮ್ಯಾನೇಜರ್ ಕೃಪಾ ಪ್ರಭು, ಭೂಮಿಕಾ ಪೂಜಾರಿ ಹಾಗೂ ಕಿರಣ್ ಸಿಸಿ ಉಪಸ್ಥಿತರಿದ್ದರು.







