ಗುರುರಾಜ್ ಭಟ್ ತುಳುನಾಡಿನ ಇತಿಹಾಸ ಸಂಶೋಧನೆಯ ಮಾರ್ಗ ಪ್ರವರ್ತಕ: ಡಾ.ಪುಂಡಿಕಾ

ಉಡುಪಿ, ಫೆ.11: ತುಳುನಾಡಿನ ಇತಿಹಾಸ ಸಂಶೋಧನೆಯಲ್ಲಿ ಎರಡು ಹೊಸ ಮಾರ್ಗಗಳನ್ನು ಪರಿಚಯಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಒಂದು ಕ್ಷೇತ್ರ ಕಾರ್ಯ ಆಧಾರಿತ ಇತಿಹಾಸ ಅಧ್ಯಯನ. ಮತ್ತೊಂದು ತುಳುನಾಡಿನ ಸ್ಮಾರಕ ಗಳ ವಾಸ್ತು ಶಿಲ್ಪ ಅಧ್ಯಯನ. ಅವರು ತುಳುನಾಡಿನ ಇತಿಹಾಸ ಸಂಶೋಧನೆಯ ಮಾರ್ಗ ಪ್ರವರ್ತಕರಾಗಿದ್ದರು ಎಂದು ಇತಿಹಾಸ ಸಂಶೋಧಕ ಡಾ.ಪುಂಡಿಕಾ ಗಣಪಯ್ಯ ಭಟ್ ಹೇಳಿದ್ದಾರೆ.
ಕುಂಜಿಬೆಟ್ಟು ಶ್ರೀಸ್ಥಾನಿಕ ಬ್ರಾಹ್ಮಣ ಸಂಘ ಹಾಗೂ ಶ್ರೀಶಾರದಾ ಮಂಟಪದ ವತಿಯಿಂದ ಕುಂಜಿಬೆಟ್ಟು ಶಾರದಾ ಮಂಟಪ ದಲ್ಲಿ ಮಂಗಳವಾರ ಆಯೋಜಿಸಲಾದ ಪಾದೂರು ಗುರುರಾಜ ಭಟ್ ಶತಮಾನದ ಸಂಸ್ಮರಣೆ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
ಸಮಾಜಕ್ಕೆ ಸತ್ಯ ತಿಳಿಸುವುದು ಇತಿಹಾಸಕಾರನ ಕರ್ತವ್ಯ. ಅದನ್ನು ಎಲ್ಲ ರೀತಿಯ ವಿರೋಧದ ಮಧ್ಯೆಯೂ ಗುರುರಾಜ ಭಟ್ ಮಾಡಿ ತೋರಿಸಿದ್ದಾರೆ. ತುಳುನಾಡಿನ ಇತಿಹಾಸವನ್ನು ಬೆಳಕಿಗೆ ತರುವ ನಿಟ್ಟಿನಲ್ಲಿ ಅವರು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು. ಗುರುರಾಜ್ ಭಟ್ ಅವರದ್ದು ದುರಂತ ಹಾಗೂ ಹೋರಾಟದ ಬದುಕು ಆಗಿತ್ತು ಎಂದು ಅವರು ತಿಳಿಸಿದರು.
ಅಧ್ಯಕ್ಷತೆಯನ್ನು ಶ್ರೀಸ್ಥಾನಿಕ ಬ್ರಾಹ್ಮಣ ಸಂಘದ ಅಧ್ಯಕ್ಷ ಗಣೇಶ್ ಹೆಬ್ಬಾರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ.ಜಗದೀಶ್ ಶೆಟ್ಟಿ, ಸರ್ಜನ್ ಡಾ.ವೈ.ಸುದರ್ಶನ ರಾವ್, ಶ್ರೀಸ್ಥಾನಿಕ ಬ್ರಾಹ್ಮಣ ಮಂಡಲದ ಅಧ್ಯಕ್ಷ ಕೆ.ಮಂಜುನಾಥ್ ಹೆಬ್ಬಾರ್, ಪಾದೂರು ಗುರುರಾಜ ಭಟ್ ಟ್ರಸ್ಟ್‌ನ ಸದಸ್ಯ ಪಿ.ವೆಂಕಟೇಶ್ ಭಟ್ ಉಪಸ್ಥಿತರಿದ್ದರು.







