ಅಂಬಾಗಿಲು ಗೋಡಾನ್‌ನಲ್ಲಿ ಭಾರೀ ಬೆಂಕಿ ದುರಂತ: ಹೊತ್ತಿ ಉರಿದ ಗುಜರಿ ಸಾಮಾನು

ಉಡುಪಿ, ಫೆ.11: ಅಂಬಾಗಿಲು ಸಮೀಪದ ಸಂತೋಷ್‌ನಗರ ಎಂಬಲ್ಲಿ ಇಂದು ಮಧ್ಯಾಹ್ನ 12ಗಂಟೆ ಸುಮಾರಿಗೆ ಗೋಡಾನ್ ನಲ್ಲಿ ಸಂಭವಿಸಿದ ಭಾರೀ ಬೆಂಕಿ ದುರಂತದಿಂದ ಅಪಾರ ಸೊತ್ತುಗಳು ಹಾನಿಯಾಗಿ ಲಕ್ಷಾಂತರ ರೂ. ನಷ್ಟ ಉಂಟಾಗಿರುವ ಬಗ್ಗೆ ವರದಿಯಾಗಿದೆ.
ಸ್ಥಳೀಯ ನಿವಾಸಿ ಹನೀಫ್ ಎಂಬವರ ತೆರೆದ ಜಾಗದಲ್ಲಿ ತಗಡು ಶೀಟಿ ನಿಂದ ಗೋಡಾನ್ ನಿರ್ಮಿಸಿ, ಅದರಲ್ಲಿ ಗುಜರಿ ಸಾಮಾನು ಹಾಗೂ ಲೇಬಲ್ ಸ್ಟಿಕ್ಕರ್‌ಗಳನ್ನು ಇರಿಸಿದ್ದರು. ಮಧ್ಯಾಹ್ನ ವೇಳೆ ಗೋಡಾನ್ ಸಮೀಪದಲ್ಲಿರುವ ಹಾಡಿಯಲ್ಲಿ ಕಾಣಿಸಿಕೊಂಡ ಬೆಂಕಿ ವಿಸ್ತರಿಸಿಕೊಂಡು ಬಂದು ಗೋಡಾನ್‌ಗೆ ತಗುಲಿತು.
ಇದರಿಂದ ಇಡೀ ಗೋಡಾನ್ ಹೊತ್ತಿ ಉರಿದಿದ್ದು, ಒಳಗಿದ್ದ ಗುಜರಿ ಸಾಮಾನುಗಳು ಹಾಗೂ ಅಪಾರ ಸಂಖ್ಯೆಯಲ್ಲಿದ್ದ ಲೇಬಲ್ ಸ್ಟಿಕ್ಕರ್‌ಗಳು ಸುಟ್ಟು ಭಸ್ಮವಾಗಿದೆ. ಬೆಂಕಿ ಅವಘಡದಿಂದ ಪರಿಸರದಲ್ಲಿ ದಟ್ಟ ಹೊಗೆ ಆವರಿಸಿದ್ದು, ಇಡೀ ಪರಿಸರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಮಲ್ಪೆ ಅಗ್ನಿಶಾಮಕದಳ ತಂಡ ಬೆಂಕಿ ನಂದಿಸಲು ಹರಸಾಹಸ ಪಟ್ಟಿತು. ಬಳಿಕ ಉಡುಪಿ ತಂಡವೂ ಆಗಮಿಸಿ ಕಾರ್ಯಾಚರಣೆಯಲ್ಲಿ ಕೈಜೋಡಿಸಿತು. ಮಲ್ಪೆ ಅಗ್ನಿಶಾಮಕ ಠಾಣಾಧಿಕಾರಿ ಶಫಿ ನೇತೃತ್ವ ದಲ್ಲಿ ಸುಮಾರು 25 ಸಿಬ್ಬಂದಿಗಳು ಈ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದರು.
ಅದೇ ರೀತಿ ಸ್ಥಳೀಯರು ಖಾಸಗಿಯಾಗಿ ಐದು ಟ್ಯಾಂಕರ್‌ಗಳಲ್ಲಿ ನೀರು ತರಿಸಿ ಬೆಂಕಿ ನಂದಿಸಲು ಕೈಜೋಡಿಸಿದರು. ಸಂಜೆ ವೇಳೆ ಬೆಂಕಿ ನಿಯಂತ್ರಣಕ್ಕೆ ಬಂದಿದ್ದೂ ಯಾವುದೇ ಪ್ರಾಣಾಪಾಯ ಉಂಟಾಗಿಲ್ಲ. ಸಮೀಪದ ಮನೆ ಗಳಿಗೂ ಯಾವುದೇ ಅಪಾಯ ಆಗಿಲ್ಲ. ಗೋಡಾನ್‌ನಲ್ಲಿ ಸಿಕ್ಕರ್‌ಗೆ ಬೆಂಕಿ ತಗಲಿರುವುದರಿಂದ ರಾತ್ರಿಯವರೆಗೂ ಬೆಂಕಿ ನಂದಿಸುವ ಕಾರ್ಯ ಮುಂದು ವರೆಸಲಾಗಿತ್ತು. ಇದಕ್ಕಾಗಿ ಜೆಸಿಬಿಯನ್ನು ಕೂಡ ಬಳಸಿಕೊಳ್ಳಲಾಗಿದೆ ಎಂದು ಅಗ್ನಿಶಾಮದಳದ ಅಧಿಕಾರಿಗಳು ತಿಳಿಸಿದ್ದಾರೆ.







