ಪೊಲೀಸ್ ಕಸ್ಟಡಿಯಲ್ಲಿದ್ದ ನಕ್ಸಲ್ ಲಕ್ಷ್ಮೀ ತೊಂಬಟ್ಟುಗೆ ನ್ಯಾಯಾಂಗ ಬಂಧನ

ಕುಂದಾಪುರ, ಫೆ.12: ಕಳೆದ ಆರು ದಿನಗಳಿಂದ ಪೊಲೀಸ್ ಕಸ್ಟಡಿಯಲ್ಲಿದ್ದ ನಕ್ಸಲ್ ಲಕ್ಷ್ಮೀ ತೊಂಬಟ್ಟು ಅವರನ್ನು ಪೊಲೀಸರು ಅವಧಿ ಮುಗಿದ ಹಿನ್ನೆಲೆಯಲ್ಲಿ ಬುಧವಾರ ಕುಂದಾಪುರ ನ್ಯಾಯಾಲಯಕ್ಕೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಇತ್ತೀಚೆಗೆ ಉಡುಪಿ ಜಿಲ್ಲಾಡಳಿತದ ಮುಂದೆ ಶರಣಾದ ನಕ್ಸಲ್ ಲಕ್ಷ್ಮೀ ತೊಂಬಟ್ಟು ಅವರನ್ನು ಪೊಲೀಸರು, ಅಮಾಸೆಬೈಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2007ರಲ್ಲಿ ಕೂಬಿಂಗ್ ನಿರತ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ ಪ್ರಕರಣದಲ್ಲಿ ಫೆ.7ರಂದು ಪೊಲೀಸ್ ಕಸ್ಟಡಿಗೆ ಪಡೆದು ಕೊಂಡಿದ್ದರು.
ಕುಂದಾಪುರ ಡಿವೈಎಸ್ಪಿಎಚ್.ಡಿ.ಕುಲಕರ್ಣಿ ನೇತೃತ್ವದಲ್ಲಿ ಈ ಪ್ರಕರಣದ ಮಹಜರು ಪ್ರಕ್ರಿಯೆ ಹಾಗೂ ತನಿಖೆಯನ್ನು ನಡೆಸಲಾಯಿತು. ಈ ಮಧ್ಯೆ ನ್ಯಾಯಾಲಯದ ಅನುಮತಿಯಂತೆ ಲಕ್ಷ್ಮೀ ಮೇಲಿನ ಉಳಿದ ಎರಡು ಪ್ರಕರಣ ಗಳಾದ ಮನೆಯೊಂದಕ್ಕೆ ಅಕ್ರಮ ಪ್ರವೇಶ ಮಾಡಿ ಕೊಲೆ ಬೆದರಿಕೆ ಮತ್ತು ಕರಪತ್ರ ಹಾಗೂ ಬ್ಯಾನರ್ ಅಂಟಿಸಿದ ಪ್ರಕರಣಗಳ ಮಹಜರು ಪ್ರಕ್ರಿಯೆ ಯನ್ನು ಕೂಡ ಇದೇ ಸಂದರ್ಭಲ್ಲಿ ಪೂರ್ಣಗೊಳಿಸಲಾಯಿತು.
ಇದೀಗ ಆಕೆಯ ಆರು ದಿನಗಳ ಪೊಲೀಸ್ ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಪೊಲೀಸರು ಇಂದು ಕುಂದಾಪುರದ 2ನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ನ್ಯಾಯಾಧೀಶೆ ರೋಹಿಣಿ, ಲಕ್ಷ್ಮೀ ಅವರಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದರು. ಬಳಿಕ ಅವರನ್ನು ಮಂಗಳೂರಿನ ಜೈಲಿಗೆ ಒಪ್ಪಿಸಲಾಯಿತು.







