ದೇಶದಲ್ಲಿ ನುರಿತ ಪ್ಯಾರಾ ಮೆಡಿಕಲ್ ವೃತ್ತಿಪರರ ಕೊರತೆ: ಗೋವಾ ಸಿಎಂ ಸಾವಂತ್
ನೇತ್ರಜ್ಯೋತಿ ಸಂಸ್ಥೆಯ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

ಉಡುಪಿ, ಫೆ.13: ದೇಶದಲ್ಲಿ ಅಶಕ್ತರಿಗೆ ಸೇವೆ ಸಲ್ಲಿಸಲು ನುರಿತ ಪ್ಯಾರಾ ಮೆಡಿಕಲ್(ಅರೆವೈದ್ಯರು) ವೃತ್ತಿಪರರ ಕೊರತೆ ಇದೆ. ಕರ್ನಾಟಕ ರಾಜ್ಯ ಒಂದರಲ್ಲಿಯೇ ಆರೋಗ್ಯ ಕ್ಷೇತ್ರದಲ್ಲಿ 30,000ಕ್ಕೂ ಹೆಚ್ಚು ಅರೆವೈದ್ಯರ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳು ಈ ವಿಫುಲ ಅವಕಾಶವನ್ನು ಬಳಸಿಕೊಳ್ಳಬೇಕು ಎಂದು ಗೋವಾ ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ ಹೇಳಿದ್ದಾರೆ.
ಉಡುಪಿ ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್ ಹಾಗೂ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿಯ ಸಹಸಂಸ್ಥೆ ಯಾಗಿರುವ ಉಡುಪಿಯ ಕಿನ್ನಿಮುಲ್ಕಿ ವೇಗಾಸ್ ಟೌನ್‌ಶಿಪ್‌ನಲ್ಲಿರುವ ನೇತ್ರಜ್ಯೋತಿ ಇನ್ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ಹಾಗೂ ನೇತ್ರಜ್ಯೋತಿ ಕಾಲೇಜ್ ಆಫ್ ಪಾರಾ ಮೆಡಿಕಲ್ ಸೈನ್ಸಸ್ ಇದರ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಗುರುವಾರ ಪದವಿ ಪ್ರದಾನ ಮಾಡಿ ಅವರು ಮಾತನಾಡುತಿದ್ದರು.
ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಸಮರ್ಪಣಾ ಭಾವವೇ ಪ್ರಮುಖ ಮಾನದಂಡವಾಗಿದೆ. ಅದೇ ರೀತಿ ಹೊಸ ಅವಿಷ್ಕಾರ ಕೂಡ ಅಗತ್ಯವಾಗಿದೆ. ಆರೋಗ್ಯ ಸೇವಾ ಕ್ಷೇತ್ರಗಳಲ್ಲಿ ಯುವಕರಲ್ಲಿ ಕೌಶಲ್ಯ ವರ್ಧನೆಗೆ ಕೇಂದ್ರ ಸರಾಕರ ಯೋಜನೆಗಳನ್ನು ರೂಪಿಸಿದೆ. ಈ ಅವಕಾಶಗಳನ್ನು ವಿದ್ಯಾರ್ಥಿಗಳು ಬಳಸಿಕೊಳ್ಳ ಬೇಕು ಎಂದು ಅವರು ತಿಳಿಸಿದರು.
ನೇತ್ರಜ್ಯೋತಿ ಟ್ರಸ್ಟ್ ಸಹಯೋಗದೊಂದಿಗೆ ಗೋವಾದಲ್ಲಿ ಹಮ್ಮಿಕೊಳ್ಳಲಾದ ಆರೋಗ್ಯ ಶಿಬಿರಗಳಲ್ಲಿ ಸುಮಾರು ಎರಡು ಲಕ್ಷ ಜನರನ್ನು ಪರೀಕ್ಷಿಸಲಾಯಿತು ಮತ್ತು 60,000 ಉಚಿತ ಕನ್ನಡಕಗಳನ್ನು ನೀಡಲಾಯಿತು ಹಾಗೂ 2,850 ಶಸ್ತ್ರ ಚಿಕಿತ್ಸೆಗಳನ್ನು ನಡೆಸಲಾಯಿತು. ನಾಲ್ಕನೇ ತರಗತಿಯಿಂದ 12ನೇ ತರಗತಿಯ ವರೆಗೆ ಓದುತ್ತಿರುವ ಎರಡು ಲಕ್ಷ ವಿದ್ಯಾರ್ಥಿಗಳನ್ನು ಪರೀಕ್ಷಿಸಲಾಯಿತು ಮತ್ತು ಅವರಿಗೆ ಕನ್ನಡಕಗಳನ್ನು ನೀಡಲಾಗಿದೆ ಎಂದರು.
ನೇತ್ರ ಜ್ಯೋತಿ ಟ್ರಸ್ಟ್ ಮತ್ತು ಗೋವಾ ಕಾಲೇಜ್ ಆಫ್ ಫಿಸಿಯೋಥೆರಪಿ ನಡುವೆ ಹೊಸ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಇದು ಕರ್ನಾಟಕ ಮತ್ತು ಗೋವಾ ನಡುವೆ ಮತ್ತೊಂದು ಆರೋಗ್ಯ ಸಂಬಂಧ ಸುಧಾರಣೆಗೆ ಹೊಸ ದಾರಿ ಮಾಡಿಕೊಡು ತ್ತದೆ ಎಂದು ಅವರು ತಿಳಿಸಿದರು.
ಮಣಿಪಾಲ ಮಾಹೆಯ ಪ್ರೊಛಾನ್ಸೆಲರ್ ಡಾ.ಎಚ್.ಎಸ್.ಬಲ್ಲಾಳ್ ಮಾತನಾಡಿ, ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವುದರಿಂದ ನಮ್ಮ ದೇಶ ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ. ಕಠಿಣ ಪರಿಶ್ರಮದಿಂದ ಮಾತ್ರ ಜೀವನದಲ್ಲಿ ಯಶಸ್ಸು ಗಳಿಸಬಹುದು. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಶ್ರಮ ವಹಿಸಬೇಕು. ಕಲಿಕೆ ಎಂಬುದು ನಿರಂತರ ಪ್ರಕ್ರಿಯೆಯಾಗಿದ್ದು, ವಿದ್ಯಾರ್ಥಿಗಳು ತಮ್ಮ ಜ್ಞಾನ ವೃದ್ಧಿಸಲು ನಿರಂತರ ಕಲಿಕೆ ಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆಯನ್ನು ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿದರು. ಇದೇ ಸಂದರ್ಭದಲ್ಲಿ ನೂತನ ಸ್ನಾತಕೋತ್ತರ ಪದವಿ ಸೆಂಟರ್‌ನ್ನು ಮುಖ್ಯಮಂತ್ರಿ ಉದ್ಘಾಟಿಸಿದರು.
106 ಪದವಿ ಹಾಗೂ 106 ಡಿಪ್ಲೋಮಾ ಸೇರಿದಂತೆ ಒಟ್ಟು 212 ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಪದವಿ ಪ್ರದಾನ ಮಾಡಲಾಯಿತು. ಉತ್ತಮ ಹೊರಹೋಗುವ ವಿದ್ಯಾರ್ಥಿ ಕಾರ್ತಿಕ್ ಪೂಜಾರಿಗೆ ‘ವೀಣಾ ರಘುರಾಮ ರಾವ್ ಅವಾರ್ಡ್’ ಪ್ರದಾನ ಮಾಡಲಾಯಿತು.
ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್‌ನ ಟ್ರಸ್ಟಿ ಕೆ.ರಘುರಾಮ್ ರಾವ್ ಉಪಸ್ಥಿತರಿದ್ದರು. ಟ್ರಸ್ಟ್‌ನ ಸ್ಥಾಪಕ ಚೇಯರ್‌ಮೆನ್ ಡಾ.ಕೃಷ್ಣಪ್ರಸಾದ್ ಕೂಡ್ಲೂ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಚೇಯರ್‌ಮೆನ್ ರಶ್ಮಿ ಕೃಷ್ಣ ಪ್ರಸಾದ್ ವರದಿ ವಾಚಿಸಿದರು. ನೇತ್ರಜ್ಯೋತಿ ಇನ್ಸಿಟಿಟ್ಯೂಟ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಗೌರಿ ಪ್ರಭು ರ್ಯಾಂಕ್ ವಿಜೇತರ ಪಟ್ಟಿ ವಾಚಿಸಿದರು. ಅಶೇಲ್ ರಕ್ಷಾ ವಂದಿಸಿದರು. ಡಾ.ಬಾಲಕೃಷ್ಣ ಮುದ್ದೋಡಿ, ಆಯೇಷಾ ಕಾರ್ಯಕ್ರಮ ನಿರೂಪಿಸಿದರು.







