ವಿಶ್ವ ಗೀತಾ ರಸಪ್ರಶ್ನೆ ಸ್ಪರ್ಧೆ: ವಿನಯ ಕುಮಾರ್- ಪಯೋಜ ಪ್ರಥಮ

ವಿನಯ ಕುಮಾರ್- ಪಯೋಜ
ಉಡುಪಿ, ಫೆ.13: ಉಡುಪಿ ಶ್ರೀಕೃಷ್ಣ ಮಠ ಪರ್ಯಾಯ ಪುತ್ತಿಗೆ ಮಠದ ವತಿಯಿಂದ ಗೀತೋತ್ಸವದ ಅಂಗವಾಗಿ ಏರ್ಪಡಿಸಲಾದ ವಿಶ್ವ ಗೀತಾ ರಸಪ್ರಶ್ನೆ ಸ್ಪರ್ಧೆಯ ಸೀನಿಯರ್ ವಿಭಾಗದಲ್ಲಿ ವಿನಯ ಕುಮಾರ್ ಸುರತ್ಕಲ್ ಹಾಗೂ ಜೂನಿಯರ್ ವಿಭಾಗದಲ್ಲಿ ಪಯೋಜ ಕಂಬಲೂರು ಪ್ರಥಮ ಬಹುಮಾನ ಗೆದ್ದುಕೊಂಡಿದ್ದಾರೆ.
ಸೀನಿಯರ್ ವಿಭಾಗದಲ್ಲಿ ಸುಮಿತ್ ಪ್ರಹ್ಲಾದ್ ಚನ್ನಪಟ್ಟಣ ದ್ವಿತೀಯ, ಅನಿಲ್ ಕುಮಾರ್ ಚಿಂತಾಮಣಿ ತೃತೀಯ, ಸೌಮ್ಯ ಸಿ.ಎಸ್. ಮಂಗಳೂರು ಹಾಗೂ ಲಕ್ಷ್ಮೀ ಸತೀಶ್ ಬೆಂಗಳೂರು ನಾಲ್ಕನೇ ಸ್ಥಾನ ಗೆದ್ದುಕೊಂಡರು. ಜೂನಿಯರ್ ವಿಭಾಗದಲ್ಲಿ ಮಾಯಾಂಕ್ ಭಟ್ ಬೆಂಗಳೂರು ದ್ವೀತಿಯ, ಕುಮಾರಿ ಅವ ತಮಂಗ್ ಪಶ್ಚಿಮ ಬಂಗಾಳ ತೃತೀಯ ಮತ್ತು ಶ್ರೀಪಾಲ್ ಹೊಸಬೆಟ್ಟು ಮಂಗಳೂರು ನಾಲ್ಕನೇ ಸ್ಥಾನ ಪಡೆದುಕೊಂಡರು.
ಸ್ಪರ್ಧೆಯಲ್ಲಿ ವಿಶ್ವಾದ್ಯಂತ ಸುಮಾರು ಎರಡು ಸಾವಿರಕ್ಕೂ ಮಿಕ್ಕಿ ಅಭ್ಯರ್ಥಿಗಳು ಭಾಗವಹಿಸಿದ್ದಾರೆ. ಮೂರು ಹಂತದ ಪರೀಕ್ಷೆಯನ್ನು ಆಯೋಜಿಸಲಾಗಿತ್ತು. ಅಂತಿಮ ಹಂತಕ್ಕೆ 30 ಮಂದಿ ಆಯ್ಕೆಯಾಗಿದ್ದು, ಸ್ಪರ್ಧಾಳುಗಳನ್ನು ವೀಡಿಯೊ ಕಾನ್ಫರೆನ್ಸ್ ಮೂಲಕ ಪರೀಕ್ಷೆ ಮಾಡಲಾಯಿತು.
ವಿಶೇಷ ಪರೀಕ್ಷೆಯನ್ನು ಅಮೆರಿಕಾದ ವಿದ್ವಾಂಸ ಕೇಶವ ತಾಡಿಪತ್ರಿ ಮತ್ತು ಗೋಪಾಲಾಚಾರ್ಯ, ಪ್ರಸನ್ನಾಚಾರ್ಯ, ಡಾ.ಷಣ್ಮುಖ ಹೆಬ್ಬಾರ್ ನಡೆಸಿ ಕೊಟ್ಟು ಆಯ್ಕೆ ಮಾಡಿದರು. ತಾಂತ್ರಿಕ ತಂಡದಲ್ಲಿ ಪ್ರಮೋದ್ ಸಾಗರ್, ಚೊಕ್ಕಾಡಿ ವಾದಿರಾಜ ಭಟ್, ರಾಮಪ್ರಿಯ, ಡಾ.ಸುದರ್ಶನ್ ಸಹಕರಿಸಿದ್ದರು.
ಫೆ.21ರಂದು ರಾಜಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಆಯ್ದ ವಿಜೇತರಿಗೆ ಪಾರಿತೋಷಕ ಮತ್ತು ನಗದು ಬಹುಮಾನ ನೀಡಲಾಗುವುದು. ಪ್ರಥಮ ದ್ವಿತೀಯ ತೃತೀಯ ಬಹುಮಾನ ವಿಜೇತರು ಕ್ರಮವಾಗಿ 1ಲಕ್ಷ ರೂ., 75ಸಾವಿರ ರೂ., 50ಸಾವಿರ ರೂ. ನೀಡಲಾಗುವುದು. ಆಯ್ಕೆಗೊಂಡ ಎಲ್ಲರಿಗೂ ಸಮಾಧಾನಕರ ಬಹುಮಾನಗಳನ್ನು ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.







