ಮದ್ಯ ವ್ಯಸನಿ ಪಾಲಕರ ಮಕ್ಕಳಲ್ಲಿ ಶಾಶ್ವತ ಖಿನ್ನತೆ, ಆತಂಕ: ಪ್ರೊ.ಜಯದೇವ್ ಜಿ.ಎಸ್.

ಉಡುಪಿ, ಫೆ.13: ಕುಡಿತದ ಕಾರಣದಿಂದ ಕುಟುಂಬದಲ್ಲಿ ಹಿಂಸೆ ಹೆಚ್ಚಾಗುತ್ತಿದೆ. ಹಿಂಸೆಯಿಂದ ಮಕ್ಕಳ ಮನಸ್ಸಿನಲ್ಲಿ ಆತಂಕ ಮೂಡಿ ಮಕ್ಕಳ ಜೀವನ ಅತಂತ್ರವಾಗುತ್ತದೆ. ಆ ಮೂಲಕ ಮಕ್ಕಳ ಮನಸ್ಸಿನಲ್ಲಿ ಶಾಶ್ವತವಾಗಿ ಖಿನ್ನತೆ ಮತ್ತು ಆತಂಕ ಮನೆ ಮಾಡುತ್ತದೆ. ಇದು ಮಕ್ಕಳ ಮೆದುಳನ್ನು ಕುಗ್ಗಿಸುತ್ತದೆ ಎಂದು ಚಾಮರಾಜನಗರದ ದೀನಬಂಧು ಮಕ್ಕಳ ಮನೆಯ ಸಂಸ್ಥಾಪಕ ಹಾಗೂ ಶಿಕ್ಷಣ ತಜ್ಞ ಪ್ರೊ.ಜಯದೇವ್ ಜಿ.ಎಸ್. ಹೇಳಿದ್ದಾರೆ.
ಉಡುಪಿ ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆ, ಮುಂಬಯಿ ಕಮಲ್ ಎ. ಬಾಳಿಗಾ ಚಾರಿಟೇಬಲ್ ಟ್ರಸ್ಟ್, ಬೆಂಗಳೂರು ಒನ್ ಗುಡ್ ಸ್ಟೆಪ್, ಮಣಿಪಾಲ ರೋಟರಿ ಕ್ಲಬ್ ಹಾಗೂ ಉಡುಪಿ ಯಕ್ಷಗಾನ ಕಲಾರಂಗದ ಸಂಯುಕ್ತ ಆಶ್ರಯದಲ್ಲಿ ಮದ್ಯ ವ್ಯಸನಿ ಪಾಲಕರ ಮಕ್ಕಳ ಜಾಗೃತಿ ಸಪ್ತಾಹದ ಅಂಗವಾಗಿ ಗುರುವಾರ ಉಡುಪಿ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಆಯೋಜಿಸಲಾದ ಮಕ್ಕಳು ಬೆಳೆಯುತ್ತಿದ್ದಾರೆ..ಜಾಗೃತೆ! ವಿಚಾರ ಸಂಕಿರಣದಲ್ಲಿ ಅವರು ಮಾತನಾಡುತಿದ್ದರು.
ಇಂದು ಕುಡಿತ ಎಂಬುದು ಪ್ರತಿಷ್ಠೆಯ ವಿಚಾರವಾಗಿದೆ. ಸಂಘಸಂಸ್ಥೆಗಳು ಪಾರ್ಟಿಯ ನೆಪದಲ್ಲಿ ಕುಡಿತವನ್ನು ಪ್ರೇರೆಪಿಸು ತ್ತಿವೆ. ಇದರ ಪರಿಣಾಮ ಸಮಾಜದ ಕಟ್ಟಕಡೆಯ ವ್ಯಕ್ತಿಯ ವರೆಗೂ ಮದ್ಯ ವ್ಯಸನ ಹಬ್ಬಿದೆ ಎಂದ ಅವರು, ತಂತ್ರಜ್ಞಾನ ಗಳು ಹಸಿವು, ಮನುಷ್ಯನ ನೋವನ್ನು ಕಡಿಮೆ ಮಾಡುವುದಿಲ್ಲ. ಅದು ನಮ್ಮ ಯಾವ ರೀತಿಯಲ್ಲೂ ಕಾಪಾಡುವುದಿಲ್ಲ. ಮನುಷ್ಯನ ನೋವಿಗೆ ಸ್ಪಂದಿಸುವ ಮನುಷ್ಯತ್ವದ ಗುಣ ಹೊಂದಿರುವ ವ್ಯಕ್ತಿಗಳಿಂದ ನಮ್ಮನ್ನು ಕಾಪಾಡಲು ಸಾಧ್ಯ ಎಂದರು.
ವಯಸ್ಕರ ನಡುವಳಿಕೆ ಮಕ್ಕಳ ಮೆದುಳಿನ ರಚನೆಯನ್ನೇ ಬದಲು ಮಾಡುತ್ತಿದೆ. ಇದು ಮಕ್ಕಳ ಮೆದುಳು ಶಾಶ್ವತವಾಗಿ ವಿಕಲವನ್ನಾಗಿಸಲು ಕಾರಣ ವಾಗುತ್ತದೆ. ಆದುದರಿಂದ ಇದಕ್ಕೆ ಪರಿಹಾರ ಕಂಡು ಕೊಳ್ಳಬೇಕು. ಸರಳ ಜೀವನ ಹಾಗೂ ಜೀವನವನ್ನು ಪ್ರೀತಿಸುವುದರಿಂದ ನಮ್ಮ ಬದುಕಿನಲ್ಲಿ ವ್ಯಸನಗಳಿಗೆ ಜಾಗ ಇಲ್ಲದಂತೆ ಮಾಡಬಹುದಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು.
ವಿಧಾನ ಪರಿಷತ್ ಸದಸ್ಯ, ಶಿವಮೊಗ್ಗ ಸರ್ಜಿ ಸಮೂಹ ಸಂಸ್ಥೆಯ ಅಧ್ಯಕ್ಷ ಡಾ.ಧನಂಜಯ ಸರ್ಜಿ ಮಾತನಾಡಿ, ಕಾಲೇಜು ವಿದ್ಯಾರ್ಥಿಗಳು ಮಾದಕ ದ್ರವ್ಯಕ್ಕೆ ಹೆಚ್ಚು ಬಲಿಯಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಶಾಲಾ ಕಾಲೇಜುಗಳ ಹಾಸ್ಟೆಲ್‌ಗಳಲ್ಲಿ ಮಾನಸಿಕ ಸಮಾಲೋಚಕರನ್ನು ನೇಮಕ ಮಾಡುವಂತೆ ಸರಕಾರದ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಭಾರತೀಯ ಮಕ್ಕಳ ವೈದ್ಯರ ಸಂಘದ ಉಪಾಧ್ಯಕ್ಷ ಡಾ.ಪ್ರೀತಿ ಗಲಗಲಿ ಮಾತನಾಡಿದರು. ಅಧ್ಯಕ್ಷತೆಯನ್ನು ಉಡುಪಿ ಡಾ.ಎ.ವಿ.ಬಾಳಿಗಾ ಸಮೂಹ ಸಂಸ್ಥೆಗಳ ನಿರ್ದೇಶಕ ಡಾ.ಪಿ.ವಿ.ಭಂಡಾರಿ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ರೋಟರಿ ಜಿಲ್ಲಾ ಗವರ್ನರ್ ಸಿ.ಎ.ದೇವಾನಂದ್, ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್, ಒನ್‌ಗುಡ್ ಸ್ಟೆಪ್ ಸಂಸ್ಥಾಪಕ ಅಮಿತಾ ಪೈ, ಸ್ತ್ರೀ ರೋಗ ಮತ್ತು ಪ್ರಸೂತಿ ತಜ್ಞ ಡಾ.ಗಿರಿಜಾ ರಾವ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮನೋವೈದ್ಯ ಹಾಗೂ ಲೇಖಕ ಡಾ.ವಿರೂಪಾಕ್ಷ ದೇವರಮನೆ ಅವರ ‘ನೀನು ಒಂಟಿಯಲ್ಲ’ ಪುಸ್ತಕದ ನಾಲ್ಕನೇ ಮುದ್ರಣವನ್ನು ಬಿಡುಗಡೆಗೊಳಿಸಲಾಯಿತು. ಡಾ.ವಿರೂಪಾಕ್ಷ ದೇವರಮನೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮನಶಾಸ್ತ್ರಜ್ಞ ನಾಗರಾಜ್ ಮೂರ್ತಿ ವಂದಿಸಿದರು. ಮಂಜುನಾಥ್ ಹಿಲಿಯಾಣ ಕಾರ್ಯಕ್ರಮ ನಿರೂಪಿಸಿದರು.
‘ಮದ್ಯ ನೀತಿಯಿಂದ ದೇಶ ಅತಂತ್ರ’
ಸರಕಾರ ಬಹಳ ಕೆಟ್ಟ ನೀತಿಯನ್ನು ಪಾಲಿಸುತ್ತಿದೆ. ಒಂದೆ ಕಡೆ ಉಚಿತ ನೀಡಿ ಇನ್ನೊಂದು ಮದ್ಯ ಸೇವನೆಗೆ ಪ್ರೇರೆಪಿಸು ತ್ತದೆ. ಉಚಿತ ಯೋಜನೆಗಳಿಗೆ ಮದ್ಯ ಮಾರಾಟದ ಹಣ ಬಳಸುವುದರಿಂದ ಯಾವುದೇ ಅಭಿವೃದ್ದಿ ಸಾಧ್ಯವಿಲ್ಲ. ಇದು ಜನರ ಜೀವನವನ್ನು ಸ್ಥಿತಿ ಕುಗ್ಗಿ ಹೋಗುತ್ತದೆ. ಈ ಮಧ್ಯದ ನೀತಿ ಇಡೀ ದೇಶವನ್ನು ಅತಂತ್ರ ಮಾಡುತ್ತಿದೆ ಎಂದು ಪ್ರೊ.ಜಯದೇವ್ ಜಿ.ಎಸ್. ತಿಳಿಸಿದ್ದಾರೆ.







