ದೇವರು ದಯೆ, ಮಮತೆ ತೋರುವ ವರ್ಷ: ಬಿಷಪ್ ಡಾ.ಜೆರಾಲ್ಡ್

ಕುಂದಾಪುರ, ಫೆ.16: ಹೊಸಂಗಡಿ ಕೆರೆಕಟ್ಟೆ ಸಂತ ಅಂತೋನಿಯವರ ಪ್ರಸಿದ್ದ ಪುಣ್ಯ ಕ್ಷೇತ್ರದಲ್ಲಿ ಸಂತ ಅಂತೋನಿಯವರ ನಾಲಿಗೆಯ ಅವಶೇಷದ ಹಬ್ಬವನ್ನು ಯೇಸು ಕ್ರಿಸ್ತರ 2025ರ ಜುಬಿಲಿ ವರ್ಷದಲ್ಲಿ ಫೆ.15ರಂದು ಆಚರಿಸ ಲಾಯಿತು.
ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಡಾ.ಜೆರಾಲ್ಡ್ ಐಸಾಕ್ ಲೋಬೊ ಹಬ್ಬದ ಪ್ರಯುಕ್ತ ದಿವ್ಯ ಬಲಿದಾನವನ್ನು ಅರ್ಪಿಸಿ ’ನಾವು ಯೇಸುಕ್ರಿಸ್ತರ 2025 ರ ಜುಬಿಲಿ ವರ್ಷದಲ್ಲಿ ಇದ್ದೇವೆ. ಜುಬಿಲಿ ವರ್ಷಗಳು ದೇವರು ನಮ್ಮ ಮೇಲೆ ದಯೆ ಮಮತೆ ತೋರುವ ವರ್ಷ. ಇದು ಪವಿತ್ರ ವರ್ಷ. ದೇವರು ಕ್ರಪಾಟಕ್ಷಗಳನ್ನು ಕೊಡುವ ವರ್ಷ. ಈ ಜುಬಿಲಿ ವರ್ಷವು ದೇವರ ಅಪರಿಮಿತ ಕ್ರಪಾಟಕ್ಷಗಳಿಗಾಗಿ ಕೃತಜ್ಞತೆ ಸಲ್ಲಿಸುವ ವರ್ಷವಾಗಿದೆ ಎಂದರು.
ನಾವು ಪಾಪರಹಿತ ಜೀವನವನ್ನು ನಡೆಸಿದಲ್ಲಿ ನಾವೆಲ್ಲ ದೇವರ ವಾಗ್ದಾನಕ್ಕೆ ಭಾಜನರಾಗುತ್ತೇವೆ. ವಾಗ್ದಾನದ ಪ್ರಕಾರ, ನಿಮಗೆ ಸುರಕ್ಷೆ ನೀಡುತ್ತೇನೆ. ನಿಮ್ಮ ಮತ್ತು ನಿಮ್ಮ ಕುಟುಂಬಗಳಲ್ಲಿ ಶಾಂತಿ ಸಮಾಧಾನ ಲಭಿಸುತ್ತೇನೆ ಎಂದು ದೇವರು ಹೇಳಿದ್ದಾರೆ. ದೇವರ ಈ ಕ್ರಪಾಟಾಕ್ಷೆ ಪ್ರಾಪ್ತಿಯಾಗಲು ಜುಬಿಲಿ ವರ್ಷದಲ್ಲಿ ನಾವು ಹೊಸ ಮನುಜರಾಗೋಣ ಹೊಸ ಸೃಷ್ಠಿಯಾಗೋಣ ಎಂದು ಸಂದೇಶ ನೀಡಿ ಜುಬಿಲಿ ವರ್ಷದ ಶುಭಾಶಯಗಳನ್ನು ನೀಡಿದರು.
ಕುಂದಾಪುರ ವಲಯದ ಪ್ರಧಾನ ಧರ್ಮಗುರು ಅ.ವಂ.ಪೌಲ್ ರೇಗೊ ಹಬ್ಬಕ್ಕೆ ಶುಭ ಕೋರಿದರು. ಪುಣ್ಯ ಕ್ಷೇತ್ರಕ್ಕೆ ದಾನ ನೀಡಿದವರಿಗೆ ಮತ್ತು ಪೋಷಕತ್ವ ವಹಿಸಿಕೊಂಡವರಿಗೆ, ಸಹಕರಿಸಿದವರಿಗೆ ಮೇಣದ ಬತ್ತಿಗಳನ್ನು ನೀಡಿ ಗೌರವಿಸ ಲಾಯಿತು. ಹಬ್ಬದ ಬಲಿಪೂಜೆಯಲ್ಲಿ ಕುಂದಾಪುರ ವಲಯದ ಹೆಚ್ಚಿನ ಧರ್ಮ ಗುರುಗಳು, ಇತರ ವಲಯದ ಧರ್ಮಗುರುಗಳು, ಅತಿಥಿ ಧರ್ಮಗುರುಗಳು, ಸಹಬಲಿದಾನವನ್ನು ಅರ್ಪಿಸಿದರು.
ಧರ್ಮಭಗಿನಿಯವರು ಭಕ್ತಾಧಿಗಳು ಅಪಾರ ಸಂಖ್ಯೆಯಲ್ಲಿದ್ದು ಪುಣ್ಯ ಕ್ಷೇತ್ರದ ರೆಕ್ಟರ್ ವಂ.ಸುನೀಲ್ ವೇಗಸ್ ಧನ್ಯವಾದ ಸಮರ್ಪಿಸಿದರು. ಉಡುಪಿ ಧರ್ಮಪ್ರಾಂತ್ಯದ ನಿಲಯದ ಧರ್ಮಗುರು ವಂ|.ಸಿರಿಲ್ ಲೋಬೊ ಹಬ್ಬದ ಕಾರ್ಯಕ್ರಮಕ್ಕೆ ಸಹಕರಿಸಿದರು. ತಲ್ಲೂರು ಚರ್ಚಿನ ಗಾಯನ ಮಂಡಳಿಯ ಮಕ್ಕಳು ಹಬ್ಬದ ಗಾಯನಗಳನ್ನು ಹಾಡಿದರು.







