ಮೈಕ್ರೋಫೈನಾನ್ಸ್‌ಗಳ ಹುಟ್ಟಿಗೆ ಸರಕಾರದ ಬೆಲೆಏರಿಕೆ ನೀತಿ ಕಾರಣ: ಸುರೇಶ್ ಕಲ್ಲಾಗರ್

ಉಡುಪಿ, ಫೆ.18: ಮೈಕ್ರೋ ಫೈನಾನ್ಸ್ ಕಿರುಕುಳ ಹಾಗೂ ಸಾಲಗಾರರ ಆತ್ಮಹತ್ಯೆ ತಡೆಗಟ್ಟಲು ಮತ್ತು ಸೂಕ್ತ ಕಾನೂನು ರೂಪಿಸಲು ಆಗ್ರಹಿಸಿ ಸಿಪಿಎಂ ಉಡುಪಿ ಜಿಲ್ಲಾ ಸಮಿತಿ ಹಾಗೂ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಮತ್ತು ಉಡುಪಿ ಜಿಲ್ಲಾ ಅಂಬೇಡ್ಕರ್ ಯುವಸೇನೆ ನೇತೃತ್ವದಲ್ಲಿ ಮಂಗಳವಾರ ಅಜ್ಜರಕಾಡು ಹುತಾತ್ಮ ಸ್ಮಾರಕದ ಎದುರು ಧರಣಿ ನಡೆಸಲಾಯಿತು.
ಸಿಪಿಐಎಂ ಉಡುಪಿ ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾಗರ್ ಮಾತನಾಡಿ, ಸರಕಾರಗಳ ಬೆಲೆ ಏರಿಕೆ ನೀತಿಯ ಪರಿಣಾಮವಾಗಿ ಜನ ಸಾಮಾನ್ಯರು ಸಾಲಗಾರರಾಗುತ್ತಿದ್ದಾರೆ. ಇದನ್ನು ಬಂಡವಾಳ ಮಾಡಿಕೊಂಡು ಮೈಕ್ರೋ ಫೈನಾನ್ಸ್‌ಗಳು ಇಂದು ನಾಯಿ ಕೊಡೆಗಳಂತೆ ಹುಟ್ಚಿ ಕೊಳ್ಳುತ್ತಿವೆ. ಇಲ್ಲಿ ಪಡೆದ ಸಾಲವನ್ನು ಬಡ್ಡಿಯಿಂದ ತೀರಿಸಲಾಗದೆ ಹಾಗೂ ಫೈನಾನ್ಸ್ ಅವರ ಕಿರುಕುಳ, ಅವಮಾನದಿಂದ ಸಾಕಷ್ಟು ಮಂದಿ ಜೀವ ಕಳೆದು ಕೊಳ್ಳುತ್ತಿದ್ದಾರೆ ಎಂದು ದೂರಿದರು.
ಮೈಕ್ರೋ ಫೈನಾನ್ಸ್‌ಗಳು ಅಮಾನವೀಯ ಹಾಗೂ ಭಯೋತ್ಪಾದಕರ ರೀತಿಯಲ್ಲಿ ವರ್ತಿಸುತ್ತಿವೆ. ಉಡುಪಿ ಜಿಲ್ಲೆಯಲ್ಲೂ ನೋಂದಾಣಿಯಾಗದ ಸಾಕಷ್ಟು ಮೈಕ್ರೋ ಫೈನಾನ್ಸ್‌ಗಳು ಕಾರ್ಯಾಚರಿಸುತ್ತಿವೆ. ಇವುಗಳ ಕಿರುಕುಳಗಳನ್ನು ತಡೆಗಟ್ಟಲು ಹಾಗೂ ಸಾಲಗಾರರನ್ನು ಇವರಿಂದ ರಕ್ಷಿಸಲು ನಮ್ಮ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಬೇಕಾದ ಅಗತ್ಯ ಇದೆ ಎಂದು ಅವರು ತಿಳಿಸಿದರು.
ಜನಪರ ಹೋರಾಟಗಾರ ಜಯನ್ ಮಲ್ಪೆ ಮಾತನಾಡಿ, ಮೈಕ್ರೋ ಫೈನಾನ್ಸ್‌ಗಳ ದಬ್ಬಾಳಿಕೆ ದೌರ್ಜನ್ಯದಿಂದ ಸಾಕಷ್ಟು ಮಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಮತ್ತು ಸಾವಿರಾರು ಮಂದಿ ಊರು ಬಿಡುತ್ತಿದ್ದಾರೆ. ಇಂದು ಬಡವರಿಗಾಗಿ ಜಾರಿಗೆ ತಂದ ಯೋಜನೆಗಳನ್ನು ಸರಕಾರ ಜನಸಾಮಾನ್ಯರಿಗೆ ತಲುಪಿಸುವಲ್ಲಿ ವಿಫಲವಾಗಿವೆ. ಇದರಿಂದ ಬಡವರು ಸಾಲಗಾರ ರಾಗುತ್ತಿದ್ದಾರೆ. ಈ ಮೂಲಕ ಸರಾಕರ ಮೈಕ್ರೋಫೈನಾನ್ಸ್‌ನಂತಹ ಭಯೋತ್ಪಾದಕ ಸಂಸ್ಥೆಗಳನ್ನು ಪರೋಕ್ಷವಾಗಿ ಪೋಷಿಸುತ್ತಿವೆ ಎಂದು ಆರೋಪಿಸಿದರು.
ಅಂಬೇಡ್ಕರ್ ಯುವಸೇನೆ ಜಿಲ್ಲಾಧ್ಯಕ್ಷ ಗಣೇಶ್ ನೆರ್ಗಿ, ಸ್ಥಾಪಕಾಧ್ಯಕ್ಷ ಹರೀಶ್ ಸಾಲ್ಯಾನ್, ಸಂಧ್ಯಾ ತಿಲಕರಾಜ್, ಕೃಷ್ಣ ಶ್ರಿಯಾನ್, ಮಹಾಬಲ ಕುಂದರ್, ಸಿಪಿಎಂ ಮುಖಂಡರಾದ ಬಾಲಕೃಷ್ಣ ಶೆಟ್ಟಿ, ಕೆ.ಶಂಕರ್, ವೆಂಕಟೇಶ್ ಕೋಣಿ, ಶಶಿಧರ ಗೊಲ್ಲ, ಕವಿರಾಜ್, ನರಸಿಂಹ, ಚಂದ್ರಶೇಖರ್ ವಿ. ಮೊದಲಾದವರು ಉಪಸ್ಥಿತರಿದ್ದರು.
‘ಧರ್ಮ, ದೇವರ ಹೆಸರಿನಲ್ಲಿ ಸಾಲ ನೀಡಿ, ಭಾರೀ ಮೊತ್ತದ ಬಡ್ಡಿ ವಿಧಿಸಿ ಬಡಜನರನ್ನು ಸುಲಿಗೆ ಮಾಡಲಾಗುತ್ತಿದೆ. ದೇವರ ಹೆಸರಿನಲ್ಲಿ ಭಯ ಹುಟ್ಟಿಸಿ ಸಾಲ ವಸೂಲಾತಿ ಮಾಡಲಾಗುತ್ತಿದೆ. ಸರಕಾರ ಸುಗ್ರಿವಾಜ್ಞೆಗಳ ಮೂಲಕ ಜಾರಿಗೆ ತಂದ ಕಾಯಿದೆಯಿಂದ ಇದನ್ನು ಮಟ್ಟ ಹಾಕಲು ಸಾಧ್ಯವಿಲ್ಲ. ಆದುದರಿಂದ ಮೈಕ್ರೋಪೈನಾನ್ಸ್ ಹಾಗೂ ಸ್ವಸಹಾಯ ಸಂಘಗಳಿಂದ ಮಾಡ ಲಾದ ಜನಸಾಮಾನ್ಯರ ಸಾಲವನ್ನು ಸರಕಾರ ಮನ್ನಾ ಮಾಡಿ ಋಣಮುಕ್ತರನ್ನಾಗಿ ಮಾಡಬೇಕು’
-ಜಯನ್ ಮಲ್ಪೆ, ಜನಪರ ಹೋರಾಟಗಾರ







