ಗಂಗೊಳ್ಳಿ ಸಮುದ್ರದಲ್ಲಿ ಸೀಬಾಸ್ ಮೀನು ಮರಿಗಳ ಬಿತ್ತನೆ

ಗಂಗೊಳ್ಳಿ, ಫೆ.18: ಗಂಗೊಳ್ಳಿ ಮೀನುಗಾರಿಕಾ ಬಂದರಿನ ಅಳಿವೆ ಪ್ರದೇಶದಲ್ಲಿ ಮೀನು ಮರಿ ಬಿತ್ತನೆ ಕಾರ್ಯಕ್ರಮದಡಿ ಸೀಬಾಸ್ ಮೀನು ಮರಿಗಳನ್ನು ಮಂಗಳವಾರ ಸಮುದ್ರಕ್ಕೆ ಬಿಡಲಾಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಮಾತನಾಡಿ, ಮತ್ಸ್ಯಕ್ಷಾಮ ತಲೆದೋರಿ ರುವ ಇಂದಿನ ದಿನಗಳಲ್ಲಿ ಮತ್ಸ್ಯ ಸಂತತಿಯನ್ನು ಬೆಳೆಸುವ ಉಳಿಸುವ ಉದ್ದೇಶದಿಂದ ಸಮುದ್ರಕ್ಕೆ ಮೀನಿನ ಮರಿಗಳನ್ನು ಬಿಡುವ ಕಾರ್ಯಕ್ರಮ ಕಳೆದ ಮೂರ್ನಾಲ್ಕು ವರ್ಷಗಳಿಂದ ನಡೆಯುತ್ತಿದೆ. ಇದರಿಂದ ಉತ್ತಮ ಫಲಿತಾಂಶ ಬರುತ್ತಿದೆ. ಈ ಬಾರಿ ಸುಮಾರು 8 ಲಕ್ಷ ರೂ. ವೆಚ್ಚದಲ್ಲಿ ಗಂಗೊಳ್ಳಿ, ಕೊಡೇರಿ, ಪಡುವರಿ ಹಾಗೂ ಶಿರೂರು ಬಾಗಗಳಲ್ಲಿ ತಲಾ 5400 ಮೀನು ಮರಿಗಳನ್ನು ಸಮುದ್ರಕ್ಕೆ ಬಿಡಲಾಗುತ್ತಿದೆ ಎಂದು ತಿಳಿಸಿದರು.
ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ವಿವೇಕ ಆರ್., ಉಪನಿರ್ದೇಶಕಿ ಅಂಜನಾದೇವಿ, ಸಹಾಯಕ ನಿರ್ದೇಶಕಿ ಸುಮಲತಾ, ಗಂಗೊಳ್ಳಿ ಗ್ರಾಪಂ ಅಧ್ಯಕ್ಷೆ ಜಯಂತಿ ಖಾರ್ವಿ, ಗ್ರಾಪಂ ಸದಸ್ಯರಾದ ರಾಜೇಂದ್ರ ಶೇರುಗಾರ್, ಚಂದ್ರ ಖಾರ್ವಿ, ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರ ಸಂಘದ ಅಧ್ಯಕ್ಷ ಸದಾಶಿವ ಖಾರ್ವಿ, ಗ್ರಾಪಂ ಕಾರ್ಯದರ್ಶಿ ಅನೂಪ್ ಶೇಟ್, ತಾಪಂ ಮಾಜಿ ಸದಸ್ಯ ಸುರೇಂದ್ರ ಖಾರ್ವಿ, ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ಗ್ರಾಪಂ ಸಿಬ್ಬಂದಿ, ಕರಾವಳಿ ಪೊಲೀಸ್ ಠಾಣೆ ಸಿಬ್ಬಂದಿಗಳು, ಮೀನುಗಾರರು ಮೊದಲಾದವರು ಉಪಸ್ಥಿತರಿದ್ದರು.







