ಧ್ವಜ ಆರೋಹಣ, ಅನಾವರಣದ ಅರಿವು ಅಗತ್ಯ: ಶ್ರೀನಿಧಿ ಹೆಗ್ಡೆ

ಉಡುಪಿ, ಫೆ.19: ಆ.15ರ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭ ಧ್ವಜಾರೋಹಣ ನಡೆಸಿದರೆ, ರಚನೆಯಾದ ಸಂವಿಧಾನವನ್ನು ಅಂಗೀಕರಿಸಿ, ರಾಜತಂತ್ರದಿಂದ ಗಣತಂತ್ರ ವ್ಯವಸ್ಥೆಯ ಪ್ರತಿಕವಾಗಿ ಜ.26ರಂದು ಧ್ವಜ ಅನಾವರಣ ಗೊಳಿಸಿ ಗಣರಾಜ್ಯೋತ್ಸವ ಆಚರಿಸಲಾಗುತ್ತದೆ. ಹೀಗಾಗಿ ಮಕ್ಕಳು ಧ್ವಜ ಆರೋಹಣ ಹಾಗೂ ಅನಾವರಣದ ಮಾಹಿತಿಯನ್ನ್ನು ಅರಿತುಕೊಳ್ಳಬೇಕು ಎಂದು ವಕೀಲ ಶ್ರೀನಿಧಿ ಹೆಗ್ಡೆ ಹೇಳಿದ್ದಾರೆ.
ಉಡುಪಿಯ ಇಂದ್ರಾಳಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇತ್ತೀಚೆಗೆ ನಡೆದ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡುತಿದ್ದರು. ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವದ ವ್ಯತ್ಯಾಸ, ವಿಶೇಷತೆ ಮತ್ತು ರಾಷ್ಟ್ರಕ್ಕೆ ಸಂಬಂಧಿಸಿದ ಅನೇಕ ವಿಚಾರಗಳನ್ನು ಹಾಗು ಭಾರತೀಯರ ಪಾಲಿನ ಅತೀ ಮುಖ್ಯ ದಿನವಾದ ರಾಷ್ಟ್ರದ ಪ್ರಜೆಗಳು ರಾಷ್ಟ್ರೀಯ ಹಬ್ಬವಾಗಿ ಆಚರಿಸುವ ಪ್ರಜಾಪ್ರಭುತ್ವದ ಮಹತ್ವವನ್ನು ಮತ್ತು ಸಂವಿಧಾನ ರಚನೆ ಆದ ಕುರಿತು, ಹಾಗೂ ಮೂಲಭೂತ ಹಕ್ಕು ಕರ್ತವ್ಯದ ಕುರಿತ ಜವಾಬ್ದಾರಿಯನ್ನು ಅವರು ತಿಳಿಸಿದರು. ಮಕ್ಕಳು ತಮ್ಮ ಗುರು ಹಿರಿಯರಿಗೆ ಗೌರವ ನೀಡುವುದು ರಾಷ್ಟ್ರ ಧ್ವಜ, ರಾಷ್ಟ್ರ ಗೀತೆಗೆ ಗೌರವ ನೀಡುವುದು, ಪರಿಸರವನ್ನು ಸ್ವಚ್ಚವಾಗಿಡುವುದು, ರಾಷ್ಟ್ರೀಯ ಚಿಂತನೆ ಬೆಳಸಿಕೊಳ್ಳಬೇಕು ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ಶಾಲಾ ಸಂಚಾಲಕ ಕೆ.ಅಣ್ಣಪ್ಪ ಶೆಣೈ ವಹಿಸಿದ್ದರು, ಶಿಕ್ಷಕ- ರಕ್ಷಕ ಸಂಘದ ಅಧ್ಯಕ್ಷ ಶಶಿರಾಜ್ ಪ್ರೌಢಶಾಲಾ ವಿಭಾಗದ ಮುಖ್ಯಶಿಕ್ಷಕ ಕೆ.ವಿನಾಯಕ ಕಿಣಿ, ಪ್ರಾಥಮಿಕ ಶಾಲಾ ವಿಭಾಗ ಮುಖ್ಯಶಿಕ್ಷಕಿ ರೇಷ್ಮಾ ಪ್ರಭು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ದಿಶಾ ಸಾಲ್ವಂಕರ್ ಸ್ವಾಗತಿಸಿದರು. ಅಭಿರಾಮ್ ಪಲಿಮಾರು ಹಾಗೂ ಲಿಖಿತಾ ಕಿದಿಯೂರು ಕಾರ್ಯಕ್ರಮ ನಿರೂಪಿಸಿದರು.





