ಜಾನಪದ ಜೀವನ ಮೌಲ್ಯ, ಸಂಸ್ಕೃತಿ ಕಲಿಸುವ ಪ್ರಕಾರ: ಪ್ರೊ.ಆಶಾ
ಜಾನಪದ ವಿಕಾಸ, ಸಂಗೀತ, ಗೌರವ ಸನ್ಮಾನ ಕಾರ್ಯಕ್ರಮ

ಉಡುಪಿ, ಫೆ.21: ಜಾನಪದವು ಜೀವನ ಮೌಲ್ಯ ಮತ್ತು ಸಂಸ್ಕೃತಿಯನ್ನು ಕಲಿಸುವ ದೊಡ್ದ ಪ್ರಕಾರವಾಗಿದೆ. ಈ ಜಾನಪದ ರಂಗದಲ್ಲಿ ಪದಗಳು, ಕ್ರೀಡೆಗಳು, ಸಂಗೀತ, ಹಬ್ಬ ಹರಿದಿನಗಳು ಮತ್ತು ಸಾಹಿತ್ಯ ಒಳಗೊಂಡಿದ್ದು, ಇದು ಸಮಾಜಕ್ಕೆ ಜೀವನ ಸಂದೇಶ ನೀಡುವ ಶ್ರೇಷ್ಠ ಪ್ರಕಾರವಾಗಿದೆ ಎಂದು ಉಡುಪಿ ಉಪೇಂದ್ರ ಪೈ ಸ್ಮಾರಕ ಕಾಲೇಜಿನ ಪ್ರಾಂಶುಪಾಲೆ ಪ್ರೊ.ಆಶಾ ಕುಮಾರಿ ಹೇಳಿದ್ದಾರೆ.
ಕನ್ನಡ ಜಾನಪದ ಪರಿಷತ್ ಬೆಂಗಳೂರು, ಉಡುಪಿ ಜಿಲ್ಲಾ ಮತ್ತು ತಾಲೂಕು ಘಟಕ ಹಾಗೂ ಉಪೇಂದ್ರ ಪೈ ಸ್ಮಾರಕ ಕಾಲೇಜು ಕುಂಜಿಬೆಟ್ಟು ಇವರ ಆಶ್ರಯದಲ್ಲಿ ಕುಂಜಿಬೆಟ್ಟು ಕಾಲೇಜಿನ ಸಭಾಭವನದಲ್ಲಿ ಆಯೋಜಿ ಸಲಾದ ಶುಕ್ರವಾರ ವಿಕಾಸಕ್ಕಾಗಿ ಜಾನಪದ, ಜಾನಪದ ಸಂಗೀತ ಮತ್ತು ಗೌರವ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡು ತಿದ್ದರು. ದೇವರ ಸ್ವರೂಪದ ಬಗ್ಗೆ ಜಾನಪದರು ಪದಗಳಲ್ಲಿ ವಿವರಿಸುತ್ತಿದ್ದರು. ಈ ಜಾನಪದವನ್ನು ಉಳಿಸಿ ಬೆಳೆಸಬೇಕು ಎಂದರು.
ಕನ್ನಡ ಜಾನಪದ ಪರಿಷತ್‌ನ ಜಿಲ್ಲಾಧ್ಯಕ್ಷ ಡಾ.ಗಣೇಶ ಗಂಗೊಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ, ಕನ್ನಡ ಜಾನಪದ ಪರಿಷತ್‌ನ ವಿಕಾಸಕ್ಕಾಗಿ ಜಾನಪದ ಪರಿಕಲ್ಪನೆ ಬಗ್ಗೆ ವಿವರಿಸಿ, ಜಾನಪದ ಕ್ಷೇತ್ರದಲ್ಲಿ ಇನ್ನಷ್ಟು ಅಧ್ಯಯನ ನಡೆದು ಅದನ್ನು ಮುಂದಿನ ಪೀಳಿಗೆಗೆ ನೀಡಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ವಿಯೆಟ್ನಾಂನಲ್ಲಿ ಯೋಗ ಗುರುಗಳಾಗಿ ಸಾಧನೆ ಮಾಡಿದ ದೇವರಾಜ್ ದೇವಾಡಿಗ ನೇರಳಕಟ್ಟೆ ಇವರನ್ನು ಗೌರವಿಸಲಾಯಿತು. ಉಡುಪಿ ತಾಲೂಕು ಅಧ್ಯಕ್ಷೆ ಮಾಯಾ ಕಾಮತ್, ತಾಲೂಕು ಪದಾಧಿಕಾರಿ ಪ್ರಭಾರಾವ್ ಉಪಸ್ಥಿತರಿದ್ದರು. ಜಿಲ್ಲಾ ಕಾರ್ಯದರ್ಶಿ ರಾಘವೇಂದ್ರ ಪ್ರಭು ಕರ್ವಾಲು ನಿರೂಪಿಸಿ, ಉಪನ್ಯಾಸಕ ರಾಘವೇಂದ್ರ ಜಿ.ಜಿ ವಂದಿಸಿದರು.
ಸಭಾ ಕಾರ್ಯಕ್ರಮದ ನಂತರ ಡಾ.ಗಣೇಶ್ ಗಂಗೊಳ್ಳಿ ಅವರಿಂದ ಜಾನಪದ ಸಂಗೀತ ಕಾರ್ಯಕ್ರಮ ಮೂಡಿಬಂತು.







