ಶಾಸ್ತ್ರೀಯ ಕನ್ನಡ ಕೇಂದ್ರದ ಸ್ವಾಯತತ್ತೆಗೆ ಕೇಂದ್ರ ಸರಕಾರ ಭರವಸೆ: ಡಾ.ಬಿಳಿಮಲೆ

ಮಣಿಪಾಲ, ಫೆ.22: ಶಾಸ್ತ್ರೀಯ ಕನ್ನಡ ಕೇಂದ್ರಕ್ಕೆ ಸ್ವಾಯತತ್ತೆ ನೀಡುವ ಭರವಸೆಯನ್ನು ಕೇಂದ್ರ ಸರಕಾರ ನೀಡಿದೆ. ಆದರೆ ಅದನ್ನು ರಾಜ್ಯದ ಅಧೀನಕ್ಕೆ ಕೊಡದೆ ಕೇಂದ್ರವೇ ಮುನ್ನಡೆಸಲಿದೆ. ಇದೀಗ ಶಾಸ್ತ್ರೀಯ ಕನ್ನಡದಲ್ಲಿ ಯಾವ ರೀತಿಯ ಅಧ್ಯಯನ ನಡೆಯಬೇಕು ಎಂಬುದರ ಬಗ್ಗೆ ಕೇಂದ್ರಕ್ಕೆ ಹೇಳ ಬೇಕಾಗಿರುವುದು ಕನ್ನಡಿಗರ ಮುಂದೆ ಇರುವ ದೊಡ್ಡ ಸವಾಲು ಆಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.
ಮಣಿಪಾಲ ಮಾಹೆಯ ಕನ್ನಡ ಮತ್ತು ಪ್ರಾದೇಶಿಕ ಭಾಷೆಗಳ ಕೇಂದ್ರ ಭಾಷಾ ವಿಭಾಗದ ವತಿಯಿಂದ ಅಂತಾರಾಷ್ಟ್ರೀಯ ಮಾತೃಭಾಷಾ ದಿವಸದ ಪ್ರಯುಕ್ತ ಶನಿವಾರ ಮಣಿಪಾಲದ ಸರ್ವೋದಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮ ದಲ್ಲಿ ‘ಕನ್ನಡ ಶಾಸ್ತ್ರೀಯ ಸಾಹಿತ್ಯದ ಅಧ್ಯಯನದ ಹೊಸ ನೆಲೆಗಳು’ ಎಂಬ ವಿಷಯದ ಕುರಿತು ಅವರು ಉಪನ್ಯಾಸ ನೀಡಿದರು.
ಶ್ರೀಮಂತ ಹಾಗೂ ಸಮೃದ್ಧವಾಗಿ ರುವ ಶಾಸ್ತ್ರೀಯ ಕನ್ನಡವನ್ನು ಪರಿಣಾಮಕಾರಿ ಹೇಳಿದರೆ ಅದನ್ನು ಓದುವ ತಲೆಮಾರು ಈಗಲೂ ಇದೆ. ಗದ್ಯ ಪದ್ಯ ಮಿಶ್ರಿತ ಚಂಪೊ ಛಂದಸ್ಸಿನ ಮೂಲ ಕನ್ನಡ ಜನಪದಲ್ಲಿದೆ. ಇವುಗಳ ಬಗ್ಗೆ ಅಗತ್ಯವಾಗಿ ಸಂಶೋಧನೆಗಳು ಆಗಬೇಕಾಗಿದೆ. ಇದರಿಂದ ಈ ಪಠ್ಯಗಳು ಜೀವಂತವಾಗಿರಲು ಸಾಧ್ಯ. ನಡುಗನ್ನಡದ ಕಾವ್ಯಗಳು ಜನರಿಗೆ ಮುಟ್ಟಿಸುವಲ್ಲಿ ಗಮಕವು ಪ್ರಧಾನ ಪಾತ್ರವನ್ನು ವಹಿಸಿದೆ. ಕನ್ನಡ ಕಾವ್ಯಗಳು ಓದುವ, ಕೇಳುವ ಕುಣಿಯುವ ಕಾವ್ಯಗಳು ಜನಪರಂಪರೆಯಲ್ಲಿ ಜೀವಂತವಾಗಿ ಚಲಿಸುತ್ತಿವೆ ಎಂದರು.
ಕನ್ನಡ ಕಾವ್ಯಗಳು ತಮ್ಮ ಬೆಳವಣಿಗೆಯ ಎಲ್ಲ ಹಂತಗಳಲ್ಲೂ ಕನ್ನಡ ಜನಸಂಸ್ಕೃತಿಯೊಂದಿಗೆ ಸಂಬಂಧ ಸಾಧಿಸುತ್ತಲೇ ಬಂದಿದೆ. ಹಾಗಾಗಿ ಇಂದಿನವರೆಗೂ ಅವು ಉಳಿದುಕೊಂಡು ಬಂದಿವೆ. ಇದನ್ನು ಹೊಸದಾಗಿ ಅರ್ಥ ಮಾಡಿಕೊಳ್ಳುತ್ತ ಕನ್ನಡ ಕಾವ್ಯ ಪರಂಪರೆಯ ಘನತೆಯನ್ನು ಎತ್ತಿ ಹಿಡಿಯ ಬೇಕಾಗಿದೆ ಎಂದು ಅವರು ಹೇಳಿದರು.
ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆ್ಯಂಡ್ ಸಾಯನ್ಸಸ್‌ನ ನಿರ್ದೇಶಕ ಡಾ.ವರದೇಶ ಹಿರೇಗಂಗೆ, ಕೇಂದ್ರದ ಭಾಷಾ ವಿಭಾಗದ ಮುಖ್ಯಸ್ಥ ರಾಹುಲ್ ಕುಟ್ಟಿ ಉಪಸ್ಥಿತರಿದ್ದರು. ಪೃಥ್ವಿರಾಜ್ ಕವತ್ತಾರ್ ಸ್ವಾಗತಿಸಿ, ಪ್ರಾಸ್ತಾವಿಕ ವಾಗಿ ಮಾತನಾಡಿದರು. ಅಭಿಲಾಷ ಹಂದೆ ಕಾರ್ಯ ಕ್ರಮ ನಿರೂಪಿಸಿದರು.







