ಕುಂದಾಪುರಕ್ಕೆ ಪ್ರಾಗೈತಿಹಾಸಿಕ ಹಿನ್ನೆಲೆ: ಡಾ.ಜಗದೀಶ್ ಶೆಟ್ಟಿ

ಕುಂದಾಪುರ, ಫೆ.23: ಸಂಪದ್ಭರಿತ ಕುಂದಾಪುರಕ್ಕೆ ಪ್ರಾಗೈತಿಹಾಸಿಕ ಹಿನ್ನೆಲೆ ಇದೆ. ನೂತನ ಶಿಲಾಯುಗದ ಕೊಡಲಿ ಎಂಬುದು ಕುಂದಾಪುರದ ಗಡಿ ಪ್ರದೇಶವಾದ ಕೋಟತಟ್ಟು ಎಂಬಲ್ಲಿ ದೊರಕಿರುವುದು ಇದಕ್ಕೆ ಉತ್ತಮ ಉದಾಹರಣೆ ಎಂದು ಉಡುಪಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ.ಜಗದೀಶ್ ಶೆಟ್ಟಿ ಹೇಳಿದ್ದಾರೆ.
ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಬೆಂಗಳೂರು ಮತ್ತು ಧಾರವಾಡ ವಲಯ, ಮಂಗಳೂರು ವಿಶ್ವವಿದ್ಯಾಲಯ ಇತಿಹಾಸ ಅಧ್ಯಾಪಕರ ಸಂಘ ಮತ್ತು ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನ ಕಾಲೇಜಿನ ಐಕ್ಯೂಎಸಿ ಇವುಗಳ ಸಹಯೋಗದಲ್ಲಿ ಮೂರು ದಿನಗಳ ಕರ್ನಾಟಕ ಇತಿಹಾಸ ಪರಿಷತ್ತು 35ನೇ ವಾರ್ಷಿಕ ಮಹಾ ಅಧಿವೇಶನದಲ್ಲಿ ರವಿವಾರ ನಡೆದ ’ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸ ಮತ್ತು ಸಂಸ್ಕೃತಿ’ ಕುರಿತ ಸಿಂಪೋಜಿಯಂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡುತಿದ್ದರು.
ಇನ್ನೂ ಆ ಕಾಲದಿಂದಲೂ ಕೋಟಿಲಿಂಗೇಶ್ವರ ದೇವಸ್ಥಾನ ಪ್ರಮುಖ ದೇವಸ್ಥಾನವಾಗಿತ್ತು. ಅಲ್ಲದೆ ಕುಂದಾಪುರ ಗಾವಳಿ, ಬೇಳೂರು, ಬಸ್ರೂರು, ಹಟ್ಟಿಯಂಗಡಿ, ಬುದ್ದನಜಡ್ಡು, ಬಸ್ರೂರು ಮತ್ತು ಹಟ್ಟಿಯಂಗಡಿ ಅರಸು ಕಾಲದ ವ್ಯಾಪಾರ ಆಡಳಿತ ವ್ಯವಸ್ಥೆಗಳ ಬಗ್ಗೆ ದಾಖಲೆಗಳಿವೆ ಎಂದರು.
ವರಾಂಗ, ಬಾರಕೂರು, ಬಸ್ರೂರು ಶಾಸನಗಳು ಕುಂದಾಪುರ ಪ್ರಾಗೈತಿಹಾಸಿಕ ದಾಖಲೆಗಳಲ್ಲಿ ದೊರಕುತ್ತವೆ. ಇಲ್ಲಿನ ಬಸ್ರೂರು ಆಡಳಿತ ಕೇಂದ್ರವಾಗಿದ್ದು ಸುವ್ಯವಸ್ಥಿತ ಆಡಳಿತವು ವಿಜಯನಗರದಿಂದಲೂ ಸಾಮ್ರಾಜ್ಯದ ಕಾಲದಿಂದಲೂ ಪ್ರಸಿದ್ಧಿ ಪಡೆದಿದೆ ಎಂಬುದರ ಕುರಿತು ದಾಖಲೆಗಳು ದೊರಕುತ್ತವೆ ಎಂದು ಅವರು ಹೇಳಿದರು.
ಕಾರ್ಯಕ್ರಮವನ್ನು ಕರ್ನಾಟಕ ಇತಿಹಾಸ ಪರಿಷತ್ತಿನ ಜಂಟಿ ಕಾರ್ಯದರ್ಶಿ ಡಾ.ವಾಸುದೇವ ಬಡಿಗೇರ ಹಂಪಿ ಉದ್ಘಾಟಿಸಿ ದರು. ಈ ಸಂದರ್ಭದಲ್ಲಿ ’ಕೊರಗರು - ಸಮಕಾಲೀನ ಸ್ಪಂದನ’ ಎಂಬ ವಿಷಯದ ಕುರಿತು ಹಂಪಿಯ ಕನ್ನಡ ವಿಶ್ವವಿದ್ಯಾಲ ಯದ ಬುಡಕಟ್ಟು ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ಗಂಗಾಧರ ದೈವಜ್ಞ, ಕೊರಗು ಸಮುದಾಯದ ಸ್ಥಿತ್ಯಂತರಗಳ ಬಗ್ಗೆ ಮಾತನಾಡಿದರು. ’ಇತಿಹಾಸ ಕ್ಷೇತ್ರದ ಬಹುಮುಖಿ ಸಾಧಕ- ಡಾ.ಪಾದೂರು ಗುರುರಾಜ್ ಭಟ್ಟ’ ಎಂಬ ವಿಷಯದ ಕುರಿತು ಡಾ.ಪುಂಡಿಕಾಯ್ ಗಣಪಯ್ಯ ಭಟ್ ಮಾತನಾಡಿದರು.
’ಪ್ರಾಚೀನ ಹಾಗೂ ಮಧ್ಯಯುಗದ ತುಳುನಾಡಿನ ಪ್ರಭುತ್ವ ಮತ್ತು ಧರ್ಮ’ ಎಂಬ ವಿಷಯದ ಕುರಿತು ಅಜ್ಜರಕಾಡು ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಹ ಪ್ರಾಧ್ಯಾಪಕ ಡಾ.ರಾಮದಾಸ ಪ್ರಭು ಮಾತನಾಡಿದರು.’ಕುಂದಗನ್ನಡ ಭಾಷೆಯ ಸಾಮಾಜಿಕ ಮತ್ತು ಚಾರಿತ್ರಿಕ ಆಯಾಮ’ ಎಂಬ ವಿಷಯದ ಕುರಿತು ಪ್ರದೀಪ್ ಕೆಂಚನೂರು ಮಾತನಾಡಿದರು. ಇಂಗ್ಲಿಷ್ ವಿಭಾಗದ ಉಪನ್ಯಾಸಕಿ ಶೃತಿ ಕಾಶಿ ಕಾರ್ಯಕ್ರಮ ನಿರೂಪಿಸಿದರು.







