ನಟ ನವೀನ್ ಪಡೀಲ್‌ಗೆ ವಿಶ್ವಪ್ರಭಾ ಪುರಸ್ಕಾರ ಪ್ರದಾನ

ಉಡುಪಿ, ಫೆ.23: ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ವತಿಯಿಂದ ಬೆಂಗಳೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಪ್ರಭಾವತಿ ಶೆಣೈ ಮತ್ತು ಉಡುಪಿ ವಿಶ್ವನಾಥ್ ಶೆಣೈ ಪ್ರಾಯೋಜಿತ ವಿಶ್ವಪ್ರಭಾ ಪುರಸ್ಕಾರವನ್ನು ತುಳು ನಾಟಕ ಹಾಗೂ ಚಲಚಿತ್ರ ಕಲಾವಿದ ನವೀನ್ ಪಡೀಲ್ ಅವರಿಗೆ ರವಿವಾರ ಉಡುಪಿ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಪ್ರದಾನ ಮಾಡಲಾಯಿತು.
ಮುಖ್ಯ ಅತಿಥಿಯಾಗಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ತುಳು ಹಾಸ್ಯ ನಾಟಕಗಳಿಂದ ನಮ್ಮಲ್ಲಿನ ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಉಡುಪಿಯ ಪ್ರೇಕ್ಷಕರನ್ನು ನಗಿಸುವುದು ದೊಡ್ಡ ಸವಾಲಿನ ಕಾರ್ಯ. ಅದನ್ನು ಮಾಡಲು ನವೀನ್ ಪಡೀಲ್‌ನಂತಹ ಕಲಾವಿದರಿಗೆ ಮಾತ್ರ ಸಾಧ್ಯ ಎಂದು ಹೇಳಿದರು.
ತುಳು ನಾಟಕ ನಿರ್ದೇಶಕ ವಿಜಯ ಕುಮಾರ್ ಕೊಡಿಯಾಲ್‌ಬೈಲ್, ಉಡುಪಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಪೂರ್ಣಿಮಾ ಮಾತನಾಡಿದರು. ಸಾಹಿತಿ ಶಶಿರಾಜ್ ಕಾವೂರು ಅಭಿನಂದನಾ ಮಾತುಗಳನ್ನಾಡಿದರು.
ಪ್ರತಿಷ್ಠಾನದ ಗೌರವಾಧ್ಯಕ್ಷ ಉಡುಪಿ ವಿಶ್ವನಾಥ ಶೆಣೈ, ಶಶಿಪ್ರಭಾ ಶೆಣೈ, ಅಧ್ಯಕ್ಷ ಪ್ರೊ.ಶಂಕರ್, ಉಪಾಧ್ಯಕ್ಷ ಮಧು ಸೂದನ್ ಹೇರೂರು ಉಪಸ್ಥಿತರಿದ್ದರು. ಸಂಚಾಲಕ ರವಿರಾಜ್ ಎಚ್.ಪಿ. ಸ್ವಾಗತಿಸಿದರು. ವಿಶ್ವಪ್ರಭಾ ಪುರಸ್ಕಾರ ಸಮಿತಿಯ ಸಂಚಾಲಕ ಮರವಂತೆ ನಾಗರಾಜ್ ಹೆಬ್ಬಾರ್ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಶಿಲ್ಪಾ ಜೋಶಿ ಕಾರ್ಯಕ್ರಮ ನಿರೂಪಿಸಿದರು.







