ಮಂಗಳೂರು ವಿವಿ ಪುರುಷ, ಮಹಿಳಾ ವಾಲಿಬಾಲ್: ಉಜಿರೆ ಎಸ್‌ಡಿಎಂ ಕಾಲೇಜು ತಂಡಗಳಿಗೆ ಅವಳಿ ಪ್ರಶಸ್ತಿ

ಶಿರ್ವ, ಫೆ.25: ಸ್ಥಳೀಯ ಮೂಲ್ಕಿ ಸುಂದರರಾಮ್ ಶೆಟ್ಟಿ ಕಾಲೇಜು, ಬ್ಯಾಂಕ್ ಆಫ್ ಬರೋಡ ಹಾಗೂ ಮುಂಬೈ ಹಳೆ ವಿದ್ಯಾರ್ಥಿ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಮೈದಾನದಲ್ಲಿ ನಡೆದ 44ನೇ ಮೂಲ್ಕಿ ಸುಂದರರಾಮ್ ಶೆಟ್ಟಿ ಸ್ಮಾರಕ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ ಕಾಲೇಜು ಪುರುಷರ ಹಾಗೂ ಮಹಿಳೆಯರ ವಾಲಿಬಾಲ್ ಟೂರ್ನಿಯಲ್ಲಿ ಉಜಿರೆಯ ಎಸ್‌ಡಿಎಂ ಕಾಲೇಜು ತಂಡಗಳು ಎರಡೂ ವಿಭಾಗಗಳ ಪ್ರಶಸ್ತಿಗಳನ್ನು ಗೆದ್ದುಕೊಂಡವು.
ಪುರುಷರ ವಿಭಾಗದಲ್ಲಿ ಎಸ್‌ಡಿಎಂ ಕಾಲೇಜು ಉಜಿರೆ ಚಾಂಪಿಯನ್ ಆಗಿ ಮೂಡಿ ಬಂದರೆ, ನಿಟ್ಟೆಯ ಡಾ.ಎನ್.ಎಸ್.ಎ.ಎಂ. ಕಾಲೇಜು ರನ್ನರ್ ಅಪ್ ಪ್ರಶಸ್ತಿ ಪಡೆಯಿತು. ಮಹಿಳೆಯರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಉಜಿರೆ ಎಸ್‌ಡಿಎಂ ಕಾಲೇಜು ಪಡೆದರೆ, ಆತಿಥೇಯ ಶಿರ್ವದ ಮೂಲ್ಕಿ ಸುಂದರ ರಾಮ್ ಶೆಟ್ಟಿ ಕಾಲೇಜು ದ್ವಿತೀಯ ಸ್ಥಾನದೊಂದಿಗೆ ರನ್ನರ್ ಅಪ್ ಆಗಿ ಮೂಡಿಬಂತು.
ಮಂಗಳೂರು ವಿವಿಗೆ ಸೇರಿದ 18 ಕಾಲೇಜುಗಳ ವಾಲಿಬಾಲ್ ತಂಡಗಳು ಈ ಟೂರ್ನಿಯಲ್ಲಿ ಭಾಗವಹಿಸಿದ್ದವು. ಪಂದ್ಯಾಟವನ್ನು ಬ್ಯಾಂಕ್ ಆಫ್ ಬರೋಡದ ಉಡುಪಿ ಪ್ರಾದೇಶಿಕ ಕಚೇರಿಯ ಸಹ ಪ್ರಾದೇಶಿಕ ಪ್ರಬಂಧಕ ಪಿ.ವಿದ್ಯಾಧರ ಶೆಟ್ಟಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಶಿರ್ವ ವಿದ್ಯಾವರ್ಧಕ ಸಂಘದ ಆಡಳಿತಾಧಿಕಾರಿ ಪ್ರೊ.ವೈ.ಭಾಸ್ಕರ ಶೆಟ್ಟಿ ವಹಿಸಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಮಿಥುನ್ ಚಕ್ರವರ್ತಿ ಅತಿಥಿಗಳನ್ನು ಸ್ವಾಗತಿಸಿದರು. ಕಾಲೇಜಿನ ಉಪನ್ಯಾಸಕಿ ಡಾ.ಸೋನಾ ಹೆಚ್.ಸಿ. ಅತಿಥಿ ಗಳನ್ನು ಪರಿಚಯಿಸಿದರು. ಕ್ರೀಡಾ ಸಲಹೆಗಾರರಾದ ಸೌಮ್ಯಕುಮಾರಿ ವಂದಿಸಿ ವಾಣಿಜ್ಯ ವಿಭಾಗದ ಉಪನ್ಯಾಸಕಿ ಹೇಮಲತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಉಡುಪಿಯ ನ್ಯಾಯವಾದಿ ಉಮೇಶ್ ಕಳತ್ತೂರು ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು.







