ಎಂಜಿಎಂ ಕಾಲೇಜು:ಯಕ್ಷಗಾನ ಸರ್ಟಿಫಿಕೇಟ್ ಕೋರ್ಸ್ ಪ್ರಾರಂಭ

ಉಡುಪಿ, ಫೆ.27: ವಿದ್ಯಾರ್ಥಿಗಳು ಉತ್ತಮ ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಪರಿಣಿತಿ ಪಡೆದರೆ ಭವಿಷ್ಯದಲ್ಲಿ ಒಳ್ಳೆಯ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯ. ಕರಾವಳಿಯ ಯಕ್ಷಗಾನ ವ್ಯಕ್ತಿಯ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿದೆ ಮತ್ತು ಕಲಿಕೆಯ ಕ್ಷಮತೆಯು ಹೆಚ್ಚಿಸುತ್ತದೆ. ಹೀಗಾಗಿ ಎಂಜಿಎಂ ಕಾಲೆಜಿನಲ್ಲಿ ಕಳೆದ ಕೆಲವು ವರ್ಷಗಳಿಂದ ಸರ್ಟಿಫಿಕೇಟ್ ಕೋರ್ಸ್ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳು ಇದರ ಸದುಯೋಗ ಪಡೆದುಕೊಳ್ಳಬೇಕು ಎಂದು ಎಂಜಿಎಂ ಕಾಲೇಜಿನ ಪ್ರಾಚಾರ್ಯ ಪ್ರೊ ಲಕ್ಷ್ಮಿ ನಾರಾಯಣ ಕಾರಂತ ತಿಳಿಸಿದ್ದಾರೆ.
ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಯಕ್ಷಗಾನ ಮತ್ತು ನಾಟಕ ಸಂಘ ಹಾಗು ಯಕ್ಷಗಾನ ಕೇಂದ್ರ ಇಂದ್ರಾಳಿ ಜಂಟಿಯಾಗಿ ನಡೆಸುವ ಪ್ರಸಕ್ತ ಸಾಲಿನ ಯಕ್ಷಗಾನ ಸರ್ಟಿಫಿಕೆಟ್ ಕೋರ್ಸ್‌ನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಯಕ್ಷಗಾನ ಕೇಂದ್ರದ ಮೂಲಕ ಮಾಹೆ ವಿಶ್ವವಿದ್ಯಾನಿಲಯ ಯಕ್ಷಗಾನ ಸರ್ಟಿಫಿಕೇಟ್ ಕೋರ್ಸ್‌ಗೆ ಸಿದ್ಧಪಡಿಸುತ್ತಿದೆ. ಪ್ರಾಯೋಗಿಕವಾಗಿ ಎಂಜಿಎಂ ಕಾಲೇಜು ಕೋರ್ಸ್ ಆರಂಭಿಸುವುದರ ಮೂಲಕ ಮುನ್ನುಡಿ ಇಟ್ಟಿರುವುದು ಶ್ಲಾಘನೀಯ ಎಂದು ಯಕ್ಷಗಾನ ಕೇಂದ್ರದ ಆಡಳಿತಾಧಿಕಾರಿ ಡಾ. ಜಗದೀಶ ಶೆಟ್ಟಿ ಹೇಳಿದರು.
ಕಾಲೇಜಿನ ಐಕ್ಯೂಎಸಿ ಸಂಯೋಜಕಿ ಪ್ರೊ ಶೈಲಜಾ, ಕನ್ನಡ ವಿಭಾಗ ಮುಖ್ಯಸ್ಥ ಡಾ. ವಸಂತ್ ಕುಮಾರ್ ಪುತ್ತಿ, ಯಕ್ಷ ಗುರುಗಳಾದ ಕೃಷ್ಣಮೂರ್ತಿ ಭಟ್, ಬಸವ ಮುಂಡಡಿ ಉಪಸ್ಥಿತರಿದ್ದರು.
ಯಕ್ಷಗಾನ ಮತ್ತು ನಾಟಕ ಸಂಘದ ಸಂಚಾಲಕ ಪ್ರೊ ರಾಘವೇಂದ್ರ ತುಂಗ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿ ದರು. ಕಾರ್ಯದರ್ಶಿ ವೈಭವಿ ಕಾರ್ಯಕ್ರಮ ನಿರೂಪಿಸಿ, ಸಾತ್ವಿಕ್ ವಂದಿಸಿದರು.







