ಮನೆಯ ಮಾಡಿನಿಂದ ಬಿದ್ದು ವ್ಯಕ್ತಿ ಮೃತ್ಯು

ಶಂಕರನಾರಾಯಣ, ಫೆ.27: ಕುಡಿದ ಮತ್ತಿನಲ್ಲಿ ಮನೆಯವರೊಂದಿಗೆ ಟಿವಿ ನೋಡುವ ವಿಚಾರದಲ್ಲಿ ಮಂಗಳವಾರ ಸಂಜೆ ಜಗಳವಾಡಿದ ಬೆಳ್ವೆ ಗ್ರಾಮದ ವಾಸು (59) ಎಂಬವರು ಟಿವಿಯ ಕೇಬಲ್ ಕಿತ್ತು ಹಾಕಲು ರಾತ್ರಿ 9ಗಂಟೆಗೆ ಮನೆಯ ಮಾಡನ್ನು ಹತ್ತಿ ಹಂಚು ತೆಗೆಯುವಾಗ ಆಯತಪ್ಪಿ ಬಿದ್ದು ತಲೆಗಾದ ಗಂಭೀರ ಗಾಯದಿಂದ ಮೃತಪಟ್ಟಿದ್ದಾರೆ.
ಟಿವಿ ನೋಡುವ ವಿಷಯದಲ್ಲಿ ಮನೆಯವರಿಗೆ ಬಯ್ದ ಅವರು ಟಿವಿ ನೋಡುವುದನ್ನು ನಿಲ್ಲಿಸುವುದಕ್ಕಾಗಿ 9ಗಂಟೆಗೆ ಮನೆಯ ಮಾಡು ಹತ್ತಿದ್ದರು. ಬಿದ್ದ ಅವರನ್ನು ವಿಚಾರಿಸಿದಾಗ ತನಗೆ ಯಾವುದೇ ವೈದ್ಯಕೀಯ ಚಿಕಿತ್ಸೆ ಅಗತ್ಯವಿಲ್ಲ ಎಂದು ಹೇಳಿ ಮಲಗಿದ್ದು, ಬುಧವಾರ ಮುಂಜಾನೆ ವಿಪರೀತ ತಲೆನೋವೆಂದು ಹೇಳಿದ್ದರು. ತಕ್ಷಣ ಅವರನ್ನು ಹೆಬ್ರಿ ಸರಕಾರಿ ಆಸ್ಪತ್ರೆಗೆ ಕರೆದೊಯ್ದು ಪರೀಕ್ಷಿಸಿದಾಗ ಅದಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು.
ಈ ಬಗ್ಗೆ ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





