ರೋಗಿಗಳಿಗೆ ನಗುಮುಖದ ಸೇವೆಯಿಂದ ಆತ್ಮವಿಶ್ವಾಸ ತುಂಬಲು ಸಾಧ್ಯ: ಡಾ.ವೈಶಾಲಿ ಶ್ರೀಜಿತ್
ಅಲೈಡ್ ಹೆಲ್ತ್ -ಪ್ಯಾರಾಮೆಡಿಕಲ್ ಸಾಯನ್ಸ್‌ನ ಸಮ್ಮೇಳನ ಉದ್ಘಾಟನೆ

ಉಡುಪಿ, ಮಾ.1: ಪ್ಯಾರಾಮೆಡಿಕಲ್ ವಿದ್ಯಾರ್ಥಿಗಳು ರೋಗಿಗಳಿಗೆ ಮಾನವೀಯ ಸೇವೆಯನ್ನು ಒದಗಿಸಬೇಕು. ವಿವಿಧ ಕಾಯಿಲೆಗಳೊಂದಿಗೆ ನೋವು ಹೊತ್ತುಕೊಂಡು ಬರುವ ರೋಗಿಗಳಿಗೆ ನಗುಮುಖದ ಸೇವೆ ನೀಡಬೇಕು. ಆ ಮೂಲಕ ಅವರಲ್ಲಿ ಆತ್ಮವಿಶ್ವಾಸವನ್ನು ತುಂಬಬೇಕು ಎಂದು ರಾಜೀವ ಗಾಂಧಿ ವಿಶ್ವವಿದ್ಯಾನಿಲಯ ಹೆಲ್ತ್ ಸಾಯನ್ಸ್‌ನ ಸೆನೆಟ್ ಸದಸ್ಯೆ ಹಾಗೂ ಮಂಗಳೂರು ಎಂ.ವಿ.ಶೆಟ್ಟಿ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸಾಯನ್ಸ್‌ನ ಉಪಪ್ರಾಂಶುಪಾಲೆ ಪ್ರೊ.ಡಾ.ವೈಶಾಲಿ ಶ್ರೀಜಿತ್ ಹೇಳಿದ್ದಾರೆ.
ಉಡುಪಿ ಲೋಂಬಾರ್ಡ್ ಸಮೂಹ ಸಂಸ್ಥೆಗಳ ವತಿಯಿಂದ ಸಂಸ್ಥೆಯ ಎಲ್‌ಎಂಎಚ್ ಕ್ಯಾಂಪಸ್‌ನ ಸಭಾಂಗಣದಲ್ಲಿ ಶನಿವಾರ ಆಯೋಜಿಸಲಾದ ಅಲೈಡ್ ಹೆಲ್ತ್ ಮತ್ತು ಪ್ಯಾರಾಮೆಡಿಕಲ್ ಸಾಯನ್ಸ್‌ನ ದೈವಾರ್ಷಿಕ ಪ್ರಾದೇಶಿಕ ಸಮ್ಮೇಳನ ‘ರ್ಯಾಪ್ಕಾನ್-2025’ವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಅಧ್ಯಕ್ಷತೆಯನ್ನು ವಹಿಸಿದ್ದ ಲೋಂಬಾರ್ಡ್ ಸಮೂಹ ಸಂಸ್ಥೆಗಳ ನಿರ್ದೇಶಕ ಡಾ.ಸುಶೀಲ್ ಜತ್ತನ್ನ ಮಾತನಾಡಿ, ವಿದ್ಯಾರ್ಥಿಗಳು ತಮ್ಮಲ್ಲಿರುವ ಜ್ಞಾನವನ್ನು ಪರಸ್ಪರ ಹಂಚಿಕೊಳ್ಳಬೇಕು. ಆ ಮೂಲಕ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಜೀವನದಲ್ಲಿ ಎದುರಾಗುವ ಎಲ್ಲಾ ಸವಾಲುಗಳನ್ನು ಎದುರಿಸಿ ಜಯಿಸಬೇಕು ಎಂದು ತಿಳಿಸಿದರು.
ಭಾರತದಲ್ಲಿ ಆರೋಗ್ಯ ಮತ್ತು ರಕ್ಷಣೆ ಒಂದು ವೃತ್ತಿಯಾಗಿ ಬೆಳೆಯುತ್ತಿದೆ. ಆದುದರಿಂದ ಆರೋಗ್ಯ ಕ್ಷೇತ್ರದಲ್ಲಿ ವಿದ್ಯಾರ್ಥಿ ಗಳಿಗೆ ವಿಫುಲ ಅವಕಾಶಗಳಿವೆ. ಪರೀಕ್ಷೆಗಳು ಕೇವಲ ಮೆಟ್ಟಿಲುಗಳು ಮಾತ್ರ. ಜೀವನದಲ್ಲಿ ಕಲಿಯುವುದು ಬಹಳಷ್ಟಿವೆ. ಜೀವನ ಕೌಶಲ್ಯಗಳು ಅತೀ ಮುಖ್ಯವಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಉಡುಪಿ ನಿರಾಮಯ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸಾಯನ್ಸ್‌ನ ಪ್ರಾಂಶುಪಾಲ ಪ್ರೊ.ಶಿವಶಂಕರ ಪೈ, ಕೋಟ ಅಶ್ರಿತ್ ಟ್ರಸ್ಟ್‌ನ ನಿರ್ದೇಶಕ ಡಾ.ವಿದ್ಯಾಧರ್ ಶೆಟ್ಟಿ, ಉಡುಪಿ ನೇತ್ರಜ್ಯೋತಿ ಪ್ಯಾರಾಮೆಡಿಕಲ್ ಮತ್ತು ಅಲೈಡ್ ಹೆಲ್ತ್ ಸಾಯನ್ಸ್‌ನ ಸಿಇಓ ಡಾ.ಗೌರಿ ಪ್ರಭು ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಮಂಗಳೂರು ಫಾದರ್ ಮುಲ್ಲರ್ಸ್ ವೈದ್ಯಕೀಯ ಕಾಲೇಜಿನ ಜೀವ ರಸಾಯನ ಶಾಸ್ತ್ರದ ವಿಭಾಗದ ಪ್ರಾಧ್ಯಾಪಕ ಡಾ.ಶಿವಶಂಕರ, ಉಡುಪಿ ಸಿಟಿ ಆಸ್ಪತ್ರೆಯ ಡಾ.ಇಂದಿರಾ ಶಾನುಭಾಗ್, ಆದರ್ಶ ಅಲೈಡ್ ಹೆಲ್ತ್ ಸಾಯನ್ಸ್‌ನ ಪ್ರಾಂಶುಪಾಲ ಪ್ರೊ.ರವಿಕುಮಾರ್ ಟಿ.ಎನ್., ಲೊಂಬಾರ್ಡ್ ಸಮೂಹ ಸಂಸ್ಥೆಗಳ ಸ್ವರಾಜ್ ಶೆಟ್ಟಿ ಭಾಗವಹಿಸಿದ್ದರು.
ಆರೋಗ್ಯ ರಕ್ಷಣೆಯಲ್ಲಿ ಸುರಕ್ಷತೆ ಎಂಬ ವಿಷಯದ ಕುರಿತ ಪೋಸ್ಟರ್ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾ ಯಿತು. ವೇದಿಕೆಯಲ್ಲಿ ಲೋಂಬಾರ್ಡ್ ಕಾಲೇಜು ಆಫ್ ನರ್ಸಿಂಗ್‌ನ ಪ್ರಾಂಶುಪಾಲೆ ಸುಜತಾ ಕರ್ಕಡ, ಸ್ಕೂಲ್ ಆಫ್ ನರ್ಸಿಂಗ್‌ನ ಪ್ರಾಂಶುಪಾಲೆ ವೀಣಾ ಮಿನೇಜಸ್, ಚರ್ಚಿನ ಚಾಪ್ಲಿನ್ ರೇಚರ್ ಡಿಸಿಲ್ವ, ಲೋಂಬಾರ್ಡ್ ಸಂಸ್ಥೆಯ ಆಡಳಿತಾಧಿಕಾರಿ ಡಿಲಿಮಾ ಪ್ರಭಾವತಿ ಉಪಸ್ಥಿತರಿದ್ದರು.
ಲೋಂಬಾರ್ಡ್ ಹಾಸ್ಪಿಟಲ್ ಮತ್ತು ಪ್ಯಾರಾಮೆಡಿಕಲ್ ಕಾಲೇಜಿನ ಉಪ ಪ್ರಾಂಶುಪಾಲ ಡಾ.ಬಿ.ಎನ್.ಪೆರಲಾಯ ಸ್ವಾಗತಿಸಿದರು. ಲೋಂಬಾರ್ಡ್ ಪ್ಯಾರಾ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲೆ ಡಾ.ರೋಸನ್ ಪಾಯಸ್ ವಂದಿಸಿದರು. ಸಮ್ಮೇಳನದ ಸಂಘಟನಾ ಕಾರ್ಯದರ್ಶಿಗಳಾದ ಉಪನ್ಯಾಸಕಿ ಮೇಧಾ ಪಡಿಂಚರೆತ್ ಮತ್ತು ಸ್ಟೆಫ್ನಿ ಇವಾನ್ ಕಾರ್ಯಕ್ರಮ ನಿರೂಪಿಸಿದರು. ರಾಜ್ಯದ ವಿವಿಧ ಕಾಲೇಜುಗಳ ಪ್ಯಾರಾ ಮೆಡಿಕಲ್ ಮತ್ತು ಅಲೈಡ್ ಹೆಲ್ತ್ ಸಾಯನ್ಸ್‌ನ ಅಧ್ಯಾಪಕರುಗಳು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.







