ಯಾವುದೇ ಧರ್ಮ ಯಾರಿಗೂ ತೊಂದರೆ ಕೊಡಲು ಹೇಳಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್

ಕಾಪು: ಮಾ.2: ನಾವೆಲ್ಲರೂ ಮಾನವೀಯತೆಗೆ ತಲೆಭಾಗಬೇಕು. ಮಾನವ ಧರ್ಮವನ್ನು ಉಳಿಸಿಕೊಳ್ಳಬೇಕು. ಯಾವುದೇ ಧರ್ಮ ಯಾರಿಗೂ ತೊಂದರೆ ಕೊಡಲು ಹೇಳಲ್ಲ. ಆದುದರಿಂದ ನಾವು ಆ ದಾರಿಯಲ್ಲಿ ಬದುಕಬೇಕು ಎಂದು ರಾಜ್ಯ ಉಪಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಕಾಪು ಹೊಸಮಾರಿಗುಡಿ ದೇವಸ್ಥಾನದ ಪ್ರತಿಷ್ಠಾ ಬ್ರಹ್ಮ ಕಲಶೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ಭಕ್ತ ಹಾಗೂ ಭಗವಂತನಿಗೆ ವ್ಯವಹಾರ ನಡೆಯುವ ಸ್ಥಳ ದೇವಸ್ಥಾನ. ಮನುಷ್ಯನಿಗೆ ಕಷ್ಟಗಳು ಬಂದಾಗ, ದುಃಖ ಉಂಟಾದಾಗ ದೂರ ಮಾಡುವವಳು ದುರ್ಗಾ ದೇವಿ. ಧರ್ಮ ಯಾವುದಾದರೂ ತತ್ವವೊಂದೇ, ನಾಮ ನೂರಾದರೂ ದೈವವೊಂದೇ, ಪೂಜೆ ಯಾವುದಾದರೂ ಭಕ್ತಿಯೊಂದೇ, ಕರ್ಮ ಹಲವಾದರೂ ನಿಷ್ಠೆಯೊಂದೇ, ದೇವನೊಬ್ಬ ನಾಮ ಹಲವು ಎಂದರು.
ಮನುಷ್ಯ ಹುಟ್ಟಿದ ಮೇಲೆ ಒಂದು ದಿನ ಸಾಯಲೇ ಬೇಕು. ನಮ್ಮ ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ, ಜನನ ಉಚಿತ, ಮರಣ ಖಚಿತ. ಇದರ ನಡುವೆ ಸಾಧನೆ ಮಾಡುವುದು ಮುಖ್ಯವಾಗುತ್ತದೆ. ದೇವರು ವರ, ಶಾಪ ಎರಡೂ ಕೊಡುವುದಿಲ್ಲ. ಆದರೆ ಅವಕಾಶವನ್ನು ಕೊಡುತ್ತಾನೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ಅವರನ್ನು ಕಾಪು ಕ್ಷೇತ್ರದ ವತಿಯಿಂದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಸನ್ಮಾನಿಸಿ ದರು. ಕಾಪು ಮಾರಿಯಮ್ಮನ ಮೂರ್ತಿ, ಪ್ರಸಾದ ನೀಡಿ ಗೌರವಿಸಲಾಯಿತು. ಇದಕ್ಕೂ ಮುನ್ನ ದೇವರ ದರ್ಶನ ಪಡೆದ ಅವರು, ತನ್ನ ಪತ್ನಿ ಹೆಸರಿನಲ್ಲಿ 9,99,999 ರೂ. ಮೊತ್ತದ ಸ್ವರ್ಣ ಲೇಪಿತ ರಜತ ಬ್ರಹ್ಮ ಕಲಶವನ್ನು ಸಮರ್ಪಿಸಿದರು.
‘ನಾನು ಯಾವ ದೇವಸ್ಥಾನಕ್ಕೆ ಹೋದರೂ ಸಂಚಲನವಾಗುತ್ತದೆ’: ಡಿಕೆಶಿ
ಉಡುಪಿ: ನಾನು ಕುಂಭಮೇಳಕ್ಕೆ ಹೋಗಿದ್ದೇನೆ. ಅಲ್ಲಿನ ನೀರಿಗೆ ಜಾತಿ, ಧರ್ಮ ಪಾರ್ಟಿ ಎಂಬುದು ಇಲ್ಲ. ಟಿ.ನರಸೀಪುರದ ಕುಂಭಮೇಳ ದಲ್ಲೂ ನಾನು ಭಾಗಿಯಾಗಿದ್ದೇನೆ. ಕುಂಭಮೇಳದಲ್ಲಿ ಭಾಗಿ ಆದರೆ ತಪ್ಪೇನಿದೆ. ನನ್ನ ಧಾರ್ಮಿಕ ವಿಚಾರದಲ್ಲಿ ಯಾರು ಯಾವ ಲೆಕ್ಕಚಾರ ಬೇಕಾದರೂ ಹಾಕಿಕೊಳ್ಳಲಿ, ಅದರ ಅವಶ್ಯಕತೆ ನನಗೆ ಇಲ್ಲ ಎಂದು ರಾಜ್ಯ ಉಪ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಕಾಪುವಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಯಾವ ದೇವಸ್ಥಾನಕ್ಕೆ ಹೋದರೂ, ಯಾವ ಧಾರ್ಮಿಕ ವಿಚಾರ ಮಾತನಾಡಿದರು ಸಂಚಲನವಾಗುತ್ತದೆ. ಯೇಸುವಿನ ಶಿಲಾಮೂರ್ತಿಗೆ ನಾನು ಪ್ರೋತ್ಸಾಹ ಕೊಟ್ಟಿದ್ದೇನೆ ಎಂಬ ಕಾರಣಕ್ಕೆ ಇದೇ ಜಿಲ್ಲೆಯವರೇ ನನ್ನನ್ನು ಏಸು ಕುಮಾರ ಎಂದು ಕರೆದಿದ್ದರು ಎಂದರು.
ಒಬ್ಬ ಸಂಸದ ಮುಸ್ಲಿಮರ ಎದೆ ಸೀಳಿದರೆ ಮೂರು ಅಕ್ಷರ ಇಲ್ಲ ಎಂದಿದ್ದರು. ಅವರೆಲ್ಲ ನಮ್ಮ ಸಹೋದರರು, ಅವರಿಲ್ಲದೆ ಬದುಕಲು ಆಗಲ್ಲ ಎಂದು ನಾನು ಹೇಳಿದ್ದೆ. ಅದಕ್ಕೆ ನನ್ನನ್ನು ಇನ್ನೊಂದು ಹೆಸರಲ್ಲಿ ಕರೆದರು. ನನಗೆ ಶಿವನ ಮಗ ಶಿವಕುಮಾರ ಎಂದು ತಂದೆ ಹೆಸರಿಟ್ಟರು. ಶಿವನ ದೇವಸ್ಥಾನಕ್ಕೆ ಹೋದರೆ ಅಲ್ಲೂ ಏನೋ ಒಂದು ಕರೆಯುತ್ತಾರೆ ಎಂದು ಅವರು ತಿಳಿಸಿದರು.
ಡಿಕೆಶಿ ಹಿಂದುತ್ವ ನಿಲುವನ್ನು ಶ್ಲಾಘಿಸಿರುವ ಯಶ್ಪಾಲ್ ಸುವರ್ಣ, ಸ್ವಾಗತ ಕೋರಿರುವ ಸುನಿಲ್ ಕುಮಾರ್ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅವರಿಗೆ ಒಳ್ಳೆಯದಾಗಲಿ, ರಾಜ್ಯಕ್ಕೆ ಒಳ್ಳೆಯದಾಗಲಿ. ಮೊದಲು ಅವರ ಮನೆಯನ್ನು ಸರಿ ಮಾಡಿಕೊಳ್ಳಲಿ ಎಂದು ಹೇಳಿದರು.
ಬೆಳಗಾವಿ ಗಡಿಯಲ್ಲಿ ಮಹಾರಾಷ್ಟ್ರದಿಂದ ಪ್ರತ್ಯೇಕ ಇಬ್ಬರು ಗಡಿ ಉಸ್ತುವಾರಿ ಸಚಿವರ ನೇಮಕ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಡಿಕೆಶಿ, ನಮ್ಮಲ್ಲೂ ಗಡಿಯಲ್ಲಿ ಉಸ್ತುವಾರಿ ಸಚಿವರಿದ್ದಾರೆ.ಎಲ್ಲಾ ಗಡಿಯಲ್ಲಿರುವ ಮಂತ್ರಿಗಳೇ ಎಲ್ಲಾ ಕೆಲಸ ನಿಭಾಯಿಸುತ್ತಾರೆ ಎಂದು ತಿಳಿಸಿದರು.







