ಮಹಿಳಾ ಸಬಲೀಕರಣದ ಬಗ್ಗೆ ಚಿಂತನೆ ಅಗತ್ಯ: ಸೌಜನ್ಯ ಹೆಗ್ಡೆ

ಕುಂದಾಪುರ, ಮಾ.5: ಕೋಡಿ ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಮಾನವ ಹಕ್ಕು ಸಂಘದ ವತಿಯಿಂದ ಜೆ.ಸಿ.ಐ ಕುಂದಾಪುರದ ಸಹಯೋಗದಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳೆ -ಕಾನೂನು ಮತ್ತು ಮಾನಸಿಕ ಒತ್ತಡ ಕುರಿತ ಕಾರ್ಯಕ್ರಮವನ್ನು ಕಾಲೇಜಿನಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಜೆಸಿಐ ಭಾರತದ ರಾಷ್ಟ್ರೀಯ ಪೂರ್ವ ಕಾನೂನು ಸಲಹೆಗಾರರಾದ ಸೌಜನ್ಯ ಹೆಗ್ಡೆ ಮಾತನಾಡಿ, ಮಹಿಳೆ ಮತ್ತು ಪುರುಷರು ಸಮಾಜದ ಕಣ್ಣುಗಳು. ಸಾಮಾಜಿಕ ಅಭಿವೃದ್ಧಿಯಲ್ಲಿ ಇಬ್ಬರ ತೊಡಗಿಸಿ ಕೊಳ್ಳುವಿಕೆ ಬಹುಮುಖ್ಯ ವಾಗಿರುತ್ತದೆ. ಆದರೇ ಹಲವು ಕಾರಣಗಳಿಂದ ಮಹಿಳೆ ಸಮಾಜದ ಮುಖ್ಯ ವಾಹಿನಿಗೆ ಬರಲು ಸಾಧ್ಯವಾಗಿಲ್ಲ. ಈ ಕಾರಣದಿಂದ ಮಹಿಳಾ ಸಬಲೀಕರಣದ ಬಗ್ಗೆ ನಾವು ಚಿಂತಿಸಬೇಕಾಗಿದೆ ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಯಾಗಿ ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ಪ್ರಮೋದ್ ಹಂದೆ ಮಾತನಾಡಿ, ಮನುಷ್ಯನು ತನ್ನಲ್ಲಿ ಋಣಾತ್ಮಕ ವಿಚಾರವನ್ನು ಬೆಳೆಸಿ ಕೊಳ್ಳದೆ, ಧನಾತ್ಮಕ ವಿಚಾರವನ್ನು ಬೆಳೆಸಿಕೊಳ್ಳಬೇಕು. ಪ್ರತಿಯೊಬ್ಬರು ತಾಳ್ಮೆಯಿಂದ ಯೋಚಿಸಿ ನಿರ್ಧಾರವನ್ನು ಕೈಗೊಳ್ಳಬೇಕೇ ಹೊರತು ದುಡುಕಿ ತಪ್ಪು ನಿರ್ಧಾರವನ್ನು ತೆಗೆದುಕೊಳ್ಳಬಾರದು ಎಂದರು.
ಕುಂದಾಪುರದ ಜೆ.ಸಿ.ಐ ಸ್ಥಾಪಕ ಅಧ್ಯಕ್ಷ ಹುಸೇನ್ ಹೈಕಾಡಿ, ಜೆ.ಸಿ.ಐ ಕುಂದಾಪುರ ಅಧ್ಯಕ್ಷ ಯೂಸುಫ್ ಹಲೀಮ್, ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಶಬೀನಾ ಎಚ್. ಮಾತನಾಡಿದರು. ಅಧ್ಯಕ್ಷತೆಯನ್ನು ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಹಾಜಿ ಕೆ.ಎಂ.ಅಬ್ದುಲ್ ರೆಹಮಾನ್ ವಹಿಸಿದ್ದರು.
ಕುಂದಾಪುರದ ಮಹಿಳಾ ಜೆ.ಸಿ ಅಧ್ಯಕ್ಷೆ ಶೈಲಾ ಲೂವಿಸ್, ಕುಂದಾಪುರದ ಮಹಿಳಾ ಜೆ.ಸಿ.ಐ ಮಹಿಳಾ ಸಹ-ಸಂಯೋಜಕಿ ಪ್ರೇಮ, ಕುಂದಾಪುರದ ಜೆ.ಸಿ.ಐನ ಕಾರ್ಯದರ್ಶಿ ಕಿರಣ್ ದೇವಾಡಿಗ ಹಾಗೂ ರಾಷ್ಟೀಯ ಸೇವಾ ಯೋಜನೆಯ ಸಂಯೋಜಕಿ ನೂತನ್ ಎಸ್. ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕಿ ಸುಮನ ಕಾರ್ಯಕ್ರಮ ನಿರೂಪಿಸಿದರು.







