ನಗರಸಭಾ ವ್ಯಾಪ್ತಿಯಲ್ಲಿ ವಿದ್ಯಾರ್ಥಿಗಳಿಂದ ಸ್ವಚ್ಛತಾ ಅಭಿಯಾನ

ಉಡುಪಿ: ಯಕ್ಷಗಾನ ಕಲಾರಂಗದ ಪ್ರಥಮ ಪಿಯುಸಿ ವಿದ್ಯಾಪೋಷಕ್ ವಿದ್ಯಾರ್ಥಿಗಳಿಗಾಗಿ ನಡೆದ ಸನಿವಾಸ ಶಿಬಿರದ ಅಂಗವಾಗಿ ಉಡುಪಿ ನಗರಸಭೆ ಸಹಕಾರದೊಂದಿಗೆ ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ವಿದ್ಯಾರ್ಥಿಗಳಿಂದ ಸ್ವಚ್ಛತಾ ಅಭಿಯಾನವನ್ನು ಆಯೋಜಿಸಲಾಗಿತ್ತು.
ನಿಟ್ಟೂರಿನ ಆಭರಣ ಮೋಟಾರ್ಸ್ ಎದುರಿನ ರಾಷ್ಟ್ರೀಯ ಹೆದ್ದಾರಿಯ ಅಕ್ಕಪಕ್ಕದಲ್ಲಿ ಈ ಮಹಾ ಅಭಿಯಾನಕ್ಕೆ ಉಡುಪಿಯ ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ ಚಾಲನೆ ನೀಡಿ ಮಾತನಾಡಿ, ಸ್ವಚ್ಛತೆಯ ಪ್ರಾಮುಖ್ಯತೆ ಕುರಿತು ವಿದ್ಯಾರ್ಥಿಗಳಿಗೆ ಕಿಮಾತು ಹೇಳಿದರು.
ಸಮಾಜಕ್ಕೆ ಪರಿಸರ ಸ್ವಚ್ಛತೆಯ ಜಾಗೃತಿ ಮತ್ತು ವಿದ್ಯಾರ್ಥಿಗಳಿಗೆ ತ್ಯಾಜ್ಯ ವಿಲೇವಾರಿ ಕುರಿತು ಸ್ಪಷ್ಟ ತಿಳುವಳಿಕೆಯೊಂದಿಗೆ ಪ್ರಾತ್ಯಕ್ಷಿಕೆಯ ಪ್ರಾಯೋಗಿಕ ಅನುಭವ ನೀಡುವುದು ಈ ಮಹಾಭಿಯಾನದ ಉದ್ದೇಶವಾಗಿತ್ತು. ನಿಟ್ಟೂರಿ ನಿಂದ ಮೂರು ಕಿ.ಮೀ. ದೂರದ ಉದ್ಯಾವರದ ಬಲೈಪಾದೆವರೆಗೆ ರಸ್ತೆಯ ಇಕ್ಕೆಲಗಳಲ್ಲಿರುವ ತ್ಯಾಜ್ಯ ವಸ್ತುವನ್ನು ವಿಲೇವಾರಿ ಮಾಡಲಾಯಿತು. ಈ ಅಭಿಯಾನದ ಮೂಲಕ ೨೦೦ ಚೀಲಕ್ಕೂ ಹೆಚ್ಚು ತ್ಯಾಜ್ಯವನ್ನು ಸಂಗ್ರಹಿಸಲಾಯಿತು.
ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ನೇತೃತ್ವದಲ್ಲಿ ಕಾರ್ಯದರ್ಶಿ ಮುರಳಿ ಕಡೆಕಾರ್ ಕಾರ್ಯಕ್ರಮವನ್ನು ಸಂಯೋಜಿಸಿದ್ದರು. ೨೩೦ ಶಿಬಿರಾರ್ಥಿಗಳು ಸೇರಿದಂತೆ ಸುಮಾರು ೨೫೦ ಮಂದಿ ವಿದ್ಯಾರ್ಥಿಗಳು ಇದರಲ್ಲಿ ಭಾಗವಸಿದ್ದರು. ನಗರಸಭೆಯ ಸ್ವಚ್ಛತಾ ಕರ್ಮಚಾರಿಗಳು ಇವರೊಂದಿಗೆ ಕೈಜೋಡಿಸಿದರು.
ಈ ಸಂದರ್ಭದಲ್ಲಿ ನಗರಸಭೆಯ ಪರಿಸರ ಅಭಿಯಂತರರಾದ ಸ್ನೇಹಾ, ಆರೋಗ್ಯ ನಿರೀಕ್ಷಕ ಹರೀಶ್ ಬಿಲ್ಲವ ಮತ್ತು ಪ್ರಕಾಶ್ ಪ್ರಭು, ನಗರಸಭಾ ಸದಸ್ಯ ಬಾಲಕೃಷ್ಣ ಶೆಟ್ಟಿ, ಗಾಂಧಿ ಆಸ್ಪತ್ರೆಯ ವರಿಷ್ಠರಾದ ಡಾ. ಹರಿಶ್ಚಂದ್ರ, ಕಲಾರಂಗದ ಕಾರ್ಯಕರ್ತರು ಉಪಸ್ಥಿತರಿದ್ದರು.







