ಗಾಂಧಿಭವನ ಹಸ್ತಾಂತರಿಸಿದರೆ ಉಗ್ರ ಹೋರಾಟ: ಜಯನ್ ಮಲ್ಪೆ

ಉಡುಪಿ, ಮಾ.6: ದಲಿತರ ಮೀಸಲು ಹಣದಿಂದ ನಿರ್ಮಾಣಗೊಂಡಿದ್ದ ಉಡುಪಿ ನಗರಸಭಾ ವ್ಯಾಪ್ತಿಯಲ್ಲಿರುವ ಬನ್ನಂಜೆಯ ಗಾಂಧಿಭವನವನ್ನು ಬೇರೆಯವರಿಗೆ ಹಸ್ತಾಂರಿಸಿದರೆ ಉಗ್ರಹೋರಾಟ ನಡೆಸುವುದಾಗಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯಸಮಿತಿ ಸದಸ್ಯ ಜಯನ್ ಮಲ್ಪೆ ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ.
90 ವರ್ಷಗಳಿಂದ ಲಕ್ಷ್ಮೀನಾರಾಯಣ ಭಜನಾ ಮಂಡಳಿಯಾಗಿದ್ದ ಈ ಜಾಗದಲ್ಲಿ ಆಗಿನ ಪುರಸಭೆ ಅಧ್ಯಕ್ಷರಾಗಿದ್ದ ಡಾ.ವಿ.ಎಸ್.ಆಚಾರ್ಯ ಮತ್ತು ರೊನಾಲ್ಡ್ ಪ್ರವೀಣ್‌ಕುಮಾರ್ ಅವರು ದಲಿತರ ಸಭೆ-ಸಮಾರಂಭ, ಸಾಂಸ್ಕೃತಿಕ ಹಾಗೂ ದಾರ್ಮಿಕ ಕಾರ್ಯಕ್ರಮಕ್ಕೆ ಮೀಸಲು ನಿಧಿಯನ್ನು ಬಳಸಿಕೊಂಡು 1985ರಲ್ಲಿ ಗಾಂಧಿಭವನವನ್ನು ನಿರ್ಮಿಸಿದ್ದರು.
ಈ ಗಾಂಧಿಭವನದಲ್ಲಿ ದಲಿತ ಸಂಘರ್ಷ ಸಮಿತಿ ಕಳೆದ ಸುಮಾರು 40 ವರ್ಷಗಳಿಂದ ದಲಿತರ ಕುಂದು ಕೊರತೆ ಸಭೆ ನಡೆಸಿಕೊಂಡು ಬರುತ್ತಿತ್ತು. ಜೊತೆಗೆ ಲಕ್ಷ್ಮೀನಾರಾಯಣ ಭಜನಾ ಮಂಡಳಿ ಹಾಗೂ ಉಡುಪಿ ತಾಲೂಕಿನ ದಲಿತರ ಸಾಂಸ್ಕೃತಿಕ, ತರಬೇತಿ, ಮದುವೆ, ಸಭೆ-ಸಮಾರಂಭಗಳೂ ಇಲ್ಲಿ ನಡೆಯುತಿದ್ದವು ಎಂದವರು ನೆನಪಿಸಿದ್ದಾರೆ.
ಕಾಲಕ್ರಮೇಣ ಉಡುಪಿ ನಗರಸಭೆ ಗಾಂಧಿಭವನ ಕಟ್ಟಡದ ನಿರ್ವಹಣೆಗೆ ಹಣ ನೀಡದೆ ಇರುವುದರಿಂದ ಕಟ್ಟಡ ಶಿಥಿಲಗೊಂಡಿದ್ದು, ಸದ್ಯ ಪಾಳುಬಿದ್ದ ಸ್ಥಿತಿಯಲ್ಲಿದೆ ಎಂದು ಜಯನ್ ಮಲ್ಪೆ ಹೇಳಿದ್ದಾರೆ.
ಇದೀಗ ದಲಿತರ ಮೀಸಲು ಹಣದಿಂದ ನಿರ್ಮಿಸಿರುವ ಮತ್ತು ಹಲವು ದಶಕಗಳಿಂದ ದಲಿತರಿಗಾಗಿ ಮೀಸಲಾಗಿರಿಸಿದ್ದ ಈ ಗಾಂಧಿಭವನವನ್ನು ಜಿಲ್ಲಾಧಿಕಾರಿಗಳು ಉಡುಪಿಯ ಸಂಜೀವನಿ ಜೀವನೋಪಾಯ ಪ್ರಚಾರ ಮತ್ತು ಮಾರ್ಕೆಟಿಂಗ್ ಸೊಸೈಟಿ, ಮಹಿಳಾ ಸ್ವಸಹಾಯ ಸಂಘಕ್ಕೆ ಹಾಗೂ ಹಿರಿಯ ನಾಗರಿಕ ಸಮಾಲೋಚನೆ ಘಟಕದ ಬಳಕೆಗಾಗಿ ಜಿಲ್ಲಾ ಪಂಚಾಯತ್‌ಗೆ ಹಸ್ತಾಂತರಿಸುವಂತೆ ಸೂಚಿಸಿದ್ದಾರೆ.
ಉಡುಪಿ ನಗರಸಭಾ ವ್ಯಾಪ್ತಿಯ ಮೂಡನಿಡಂಬೂರು ಗ್ರಾಮದಲ್ಲಿರುವ ಗಾಂಧಿ ಭವನ ಕಟ್ಟಡ ಪ್ರಸ್ತುತ ಖಾಲಿ ಇದ್ದು, ಕಟ್ಟಡದಲ್ಲಿ ಮುಂದಿನ ದಿನಗಳಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ನಡೆಯುವ ಸಂಭವ ವಿರುವ ಹಿನ್ನೆಲೆಯಲ್ಲಿ ಈ ಕಟ್ಟಡವನ್ನು ಜಿಪಂನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಬಳಕೆಗೆ ಹಸ್ತಾಂತರಿಸುವಂತೆ ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.
ಈ ಕಟ್ಟಡವನ್ನು ಜಿಲ್ಲಾ ಪಂಚಾಯತ್ ವತಿಯಿಂದ ದುರಸ್ತಿಗೊಳಿಸಿ ಉಡುಪಿ ಸಂಜೀವನಿ ಜೀವನೋ ಪಾಯ ಪ್ರಚಾರ ಹಾಗೂ ಮಾರ್ಕೆಂಟಿಂಗ್ ಸೊಸೈಟಿ ಮಹಿಳಾ ಸ್ವಸಹಾಯ ಸಂಘಕ್ಕೆ ಕ್ಯಾಂಟೀನ್ ನಡೆ ಸಲು ಹಾಗೂ ಹಿರಿಯ ನಾಗರಿಕ ಸಮಾಲೋಚನಾ ಘಟಕಕ್ಕೆ (ಪೊಲೀಸ್ ಇಲಾಖೆ) ನೀಡಬಹುದು ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿಯವರ ಈ ಆದೇಶ ಜಿಲ್ಲೆಯ ದಲಿತ ಸಮುದಾಯಕ್ಕೆ ಮಾಡಿದ ಮಹಾದ್ರೋಹ ಎಂದಿರುವ ಜಯನ್ ಮಲ್ಪೆ, ತಕ್ಷಣ ಈ ಆದೇಶವನ್ನು ಹಿಂದಕ್ಕೆ ಪಡೆಯದಿದ್ದಲ್ಲಿ ಉಗ್ರಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.
ದಲಿತರ ಅಭಿವೃದ್ಧಿಗೆ ಪೂರಕವಾಗಿ ಕಾರ್ಯನಿರ್ವಹಿಸಬೇಕಾದ ಜಿಲ್ಲಾಧಿಕಾರಿ ಕಳೆದ 90 ವರ್ಷಗಳಿಂದ ದಲಿತರ ದಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅನುಕೂಲವಾಗಿದ್ದ ಈ ಗಾಂಧಿಭವನ ವನ್ನು ಅನ್ಯರಿಗೆ ಹಸ್ತಾಂತರಿಸುವ ಮುನ್ನ ಸೌಜನ್ಯಕ್ಕೂ ದಲಿತರನ್ನು ವಿಶ್ವಾಸಕ್ಕೆ ಪಡೆಯದೆ ಏಕಾಏಕಿ ಗಾಂಧಿಭವನವನ್ನು ಹಸ್ತಾಂತರಿಸುವ ನಿರ್ಧಾರ ತೆಗೆದುಕೊಂಡು ಆದೇಶಿಸಿರುವುದು ದಲಿತ ಸಮಾಜಕ್ಕೆ ಮಾಡಿರು ಅನ್ಯಾಯ ಎಂದು ಜಯನ್ ಮಲ್ಪೆ ತಿಳಿಸಿದ್ದಾರೆ.







