ಆನ್‌ಲೈನ್‌ನಲ್ಲಿ ಲಕ್ಷಾಂತರ ರೂ.ವಂಚನೆ: ದೂರು ದಾಖಲು

ಉಡುಪಿ, ಮಾ.6: ಇನ್‌ಸ್ಟಾಗ್ರಾಮ್ ಮೂಲಕ ಪರಿಚಿತನಾದ ವ್ಯಕ್ತಿಯೊಬ್ಬ ಬಣ್ಣದ ಮಾತುಗಳ ಮೂಲಕ ಮಣಿಪಾಲದ ವ್ಯಕ್ತಿಯೊಬ್ಬರಿಂದ ಆನ್‌ಲೈನ್ ಮೂಲಕ 2,80,000ರೂ. ಹಣವನ್ನು ವರ್ಗಾವಣೆ ಮಾಡಿಸಿ ಕೊಂಡು ವಂಚಿಸಿದ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಣಿಪಾಲ ಕೆಎಂಸಿಯ ಉದ್ಯೋಗಿ ಮಧುಕಿರಣ್ (40) ಅಪರಿಚಿತನಿಂದ ವಂಚನೆಗೊಳಗಾದ ವ್ಯಕ್ತಿ. ಕಳೆದ ಡಿಸೆಂಬರ್‌ನಲ್ಲಿ ಅವರ ಇನ್‌ಸ್ಟಾಗ್ರಾಮ್ ಖಾತೆಗೆ ರೆಟಾ ವಾಟ್ ಎಂಬ ಖಾತೆ ಹೊಂದಿದ್ದ ಅಪರಿಚಿತ ನಿಂದ ಮೆಸೇಜ್ ಬಂದಿದ್ದು, ಚಾಟ್ ಮೂಲಕ ಪರಿಚಿತರಾಗಿ ಆತನಿಗೆ ತನ್ನ ವಿಳಾಸವನ್ನು ನೀಡಿದ್ದರು.
ಇದಾದ ಸ್ವಲ್ಪ ದಿನಗಳ ನಂತರ ಮತ್ತೊಬ್ಬ ವ್ಯಕ್ತಿಯಿಂದ ಮೊಬೈಲ್‌ಗೆ ಕರೆ ಬಂದಿದ್ದು, ನಿಮ್ಮ ಹೆಸರಿನಲ್ಲಿ ಪಾರ್ಸೆಲ್ ಇದ್ದು, ಪಡೆಯಲು ಕಸ್ಟಮ್ ಹಾಗೂ ಸೆಕ್ಯೂರಿಟಿ ಚಾರ್ಜ್ ಎಂದು 1,30,000ರೂ.ನೀಡುವಂತೆ ತಿಳಿಸಲಾಗಿತ್ತು. ಮಧುಕಿರಣ್ ತನ್ನ ಎಸ್‌ಬಿಐ, ಕೆನರಾ ಬ್ಯಾಂಕ್ ಖಾತೆಯಿಂದ ಹಣ ವನ್ನು ಗೂಗಲ್ ಪೇ ಮೂಲಕ ಕಳುಹಿಸಿದ್ದರು.
ಒಂದು ದಿನದ ಬಳಿಕ ಮತ್ತೆ ನಿಮ್ಮ ಫೌಂಡ್ ಕರೆನ್ಸಿಯನ್ನು ರೂಪಾಯಿಗೆ ಬದಲಾಯಿಸಲು 1,50,000ರೂ. ಪಾವತಿಸುವಂತೆ ತಿಳಿಸಿದ್ದು, ಅದಕ್ಕೂ ಅವರು ಎರಡು ಚೆಕ್‌ಗಳ ಮೂಲಕ ರೋಹಿತ್ ಕುಮಾರ್ ರೆಂಗಾ ಎಂಬವರ ಅಕೌಂಟ್‌ಗೆ ಹಣವನ್ನು ಕಳುಹಿಸಿದ್ದರು. ಇದರ ಬಳಿಕ ಮತ್ತೊಮ್ಮೆ 60ಸಾವಿರಕ್ಕೆ ಬೇಡಿಕೆ ಬಂದಾಗ ಅವರಿಗೆ ತಾನು ಮೋಸ ಹೋಗಿರುವುದು ಗೊತ್ತಾಗಿ ಠಾಣೆಗೆ ಬಂದು ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.







