ಬೆಂಗಳೂರಿನಲ್ಲಿ ಮಾತುಕತೆಗೆ ಬಾರದ ಆಹ್ವಾನ: ಸಚಿವರ ಮನವಿಯ ಬಳಿಕವೂ ಮುಂದುವರಿದ ರೈತ ಸಂಘದ ಧರಣಿ
ಬ್ರಹ್ಮಾವರ| ಸಕ್ಕರೆ ಕಾರ್ಖಾನೆ ಭ್ರಷ್ಟಾಚಾರದ ವಿರುದ್ಧ ರೈತರ ಪ್ರತಿಭಟನೆ

ಬ್ರಹ್ಮಾವರ, ಮಾ.7: ಬ್ರಹ್ಮಾವರದ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಸಕ್ಕರೆ ಕಾರ್ಖಾನೆಯ ಗುಜರಿ ಮಾರಾಟದಲ್ಲಿ ನಡೆದಿರುವ 14 ಕೋಟಿ ರೂ.ಗಳಿಗೂ ಅಧಿಕ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಸರಕಾರದ ಪರವಾಗಿ ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಸಚಿವ ಶಿವಾನಂದ ಎಸ್.ಪಾಟೀಲ್ ಬುಧವಾರ ರಾಜ್ಯ ವಿಧಾನಪರಿಷತ್‌ನಲ್ಲಿ ನೀಡಿದ ಉತ್ತರ ಹಾಗೂ ಧರಣಿಯನ್ನು ಕೈಬಿಡುವಂತೆ ಮಾಡಿಕೊಂಡ ಮನವಿಯ ಹೊರತಾಗಿಯೂ ಉಡುಪಿ ಜಿಲ್ಲಾ ರೈತ ಸಂಘದ ನೇತೃತ್ವದಲ್ಲಿ ಕಳೆದ 14 ದಿನಗಳಿಂದ ನಡೆಸುತ್ತಿರುವ ಅಹೋರಾತ್ರಿ ಧರಣಿ ರೈತರು ಮುಂದುವರಿಸಿದ್ದಾರೆ.
‘ನೋಡಿ ರೈತರ ಈ ಕಾರ್ಖಾನೆಯಲ್ಲಿ ನಡೆದಿರುವ ಭಾರೀ ಭ್ರಷ್ಟಾಚಾರ ಹಾಗೂ ತನಿಖೆಯಲ್ಲಿ ಆಗುತ್ತಿರುವ ಅನಗತ್ಯ ವಿಳಂಬಕ್ಕೆ ಸಂಬಂಧಿಸಿದಂತೆ ದೊಡ್ಡ ಬೇಡಿಕೆಗಳನ್ನೆನ್ನೂ ನಾವು ಮುಂದಿಟ್ಟಿಲ್ಲ. ಈಗಾಗಲೇ ಯಾರು ತಪ್ಪಿತಸ್ಥರೆಂದು ಸಾಬೀತಾಗಿದೆಯೂ ಅವರ ವಿರುದ್ಧ ಮೊಕದ್ದಮೆ ಹೂಡಲು ಸರಕಾರ ಅನುಮತಿ ನೀಡಿದ ತಕ್ಷಣ ನಮ್ಮ ಧರಣಿಯನ್ನು ಕೊನೆಗೊಳಿಸುತ್ತೇವೆ.’ ಎಂದು ಧರಣಿಯ ನೇತೃತ್ವ ವಹಿಸಿರುವ ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಹಾಗೂ ವಿಧಾನಪರಿಷತ್‌ನ ಮಾಜಿ ಸಭಾಪತಿ ಪ್ರತಾಪ್‌ಚಂದ್ರ ಶೆಟ್ಟಿ ‘ವಾರ್ತಾಭಾರತಿ’ಗೆ ತಿಳಿಸಿದರು.
ಇಬ್ಬರು ಸರಕಾರಿ ನೌಕರರು ಸೇರಿದಂತೆ ಹಗರಣದಲ್ಲಿ ಆರೋಪ ಎದುರಿ ಸುತ್ತಿರುವವರ ವಿರುದ್ಧ ಚಾರ್ಜ್ ಶೀಟ್ ಹಾಕಲು ಸರಕಾರ ಅನುಮತಿ ನೀಡಲಿ. ಹಗರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾದವರ ವಿರುದ್ಧ ಕೇಸು ಮಾಡಲು ಬಿಡಿ. ರೈತರ ಈ ಬೇಡಿಕೆಯಲ್ಲಿ ಯಾವುದೇ ತಪ್ಪಿಲ್ಲ ಅಲ್ವಾ.’ ಎಂದವರು ಪ್ರಶ್ನಿಸಿದರು.
ಆಹ್ವಾನ ಬಂದಿಲ್ಲ: ಕಳೆದ ಡಿಕೆಶಿ ಅವರು ಧರಣಿ ಸ್ಥಳಕ್ಕೆ ಭೇಟಿ ನೀಡಿದಾಗ ಮಾ.8ರಂದು ರೈತ ಸಂಘದ ನಿಯೋಗವೊಂದು ಬೆಂಗಳೂರಿಗೆ ಬರಲು ಹಾಗೂ ಅಲ್ಲಿ ಸಚಿವರನ್ನು ಭೇಟಿ ಮಾಡಿಸುವ ಕುರಿತಂತೆ ನೀಡಿ ರುವ ಆಹ್ವಾನದ ಕುರಿತು ಪ್ರಶ್ನಿಸಿದಾಗ, ನಮಗೆ ಸರಕಾರದಿಂದ ಇದುವರೆಗೆ ಯಾವುದೇ ಆಹ್ವಾನ ಬಂದಿಲ್ಲ. ಆಹ್ವಾನ ಬಂದರೆ ಖಂಡಿತ ನಿಯೋಗವೊಂದು ಬೆಂಗಳೂರಿಗೆ ತೆರಳಿ ಸಚಿವರ ಮುಂದೆ ನಮ್ಮ ಬೇಡಿಕೆ ಹಾಗೂ ಇತರ ವಿಷಯಗಳನ್ನು ಮಂಡಿಸುತ್ತೇವೆ ಎಂದರು.
ಹಗರಣದಲ್ಲಿ ಮೂವರು ಸರಕಾರಿ ಅಧಿಕಾರಿಗಳ ಪಾತ್ರವಿರುವ ಬಗ್ಗೆ ನಮಗೆ ಮಾಹಿತಿಗಳಿವೆ. ಇವರಲ್ಲಿ ಪ್ರವೀಣ್ ಬಿ.ನಾಯಕ್ ಹೆಸರು ಮಾತ್ರ ಇದ್ದು, ಎಫ್‌ಐಆರ್‌ನಲ್ಲಿದ್ದ ಮತ್ತೊಬ್ಬ ಸಹಕಾರ ಇಲಾಖೆ ಅಧಿಕಾರಿ ಲಕ್ಷ್ಮೀ ನಾರಾಯಣ ಅವರ ಹೆಸರನ್ನು ಕೈಬಿಟ್ಟಿರುವ ಮಾಹಿತಿ ಇದೆ. ಈ ಬಗ್ಗೆ ಸ್ಪಷ್ಟೀಕರಣ ಕೇಳುತ್ತೇವೆ ಎಂದು ಪ್ರತಾಪ್‌ಚಂದ್ರ ಶೆಟ್ಟಿ ಹೇಳಿದರು.
ಇಲಾಖೆಯು ಅವ್ಯವಹಾರ ಆರೋಪಗಳ ತನಿಖೆ ನಡೆಸಲು ನಿವೃತ್ತ ಜಿಲ್ಲಾ ನ್ಯಾಯಾಧೀಶ ರಾಮಕೃಷ್ಣ ಹೊಳ್ಳರನ್ನು ವಿಚಾರಣಾಧಿಕಾರಿಯಾಗಿ ನೇಮಿಸಿ 30 ದಿನಗಳಲ್ಲಿ ವಿಚಾರಣೆ ಮುಗಿಸುವ ಆದೇಶ ಹೊರ ಡಿಸಿ ನಾಲ್ಕು ತಿಂಗಳಾದರೂ ಇನ್ನೂ ವಿಚಾರಣೆ ನಡೆಯದ ಬಗ್ಗೆ ಪ್ರಶ್ನಿಸಿದಾಗ, ಹೊಳ್ಳ ಮಂಗಳೂರಿನಲ್ಲಿ ಒಂದು ಸುತ್ತಿನ ಬೈಠಕ್ ನಡೆಸಿದ್ದು, ಇದೇ ತಿಂಗಳ ಮೂರನೇ ವಾರದಲ್ಲಿ ವಿಚಾರಣೆ ನಡೆಯುವ ಬಗ್ಗೆ ಮಾಹಿತಿ ಇದೆ. ಹೊಳ್ಳ ಸಮಿತಿಯ ಮುಂದೆ ರೈತ ಸಂಘ ಹಾಜರಾಗಲಿದೆ ಎಂದು ಪ್ರತಾಪ್‌ಚಂದ್ರ ಶೆಟ್ಟಿ ನುಡಿದರು.
ನಮ್ಮ ಬೇಡಿಕೆಗಳಿಗೆ ಸಂಬಂಧಿಸಿದಂತೆ ಸ್ಪಷ್ಟವಾದ ಫಲಿತಾಂಶ ಸಿಗುವವರೆಗೆ ನಮ್ಮ ಶಾಂತಿಯುತ ಧರಣಿ ಇಲ್ಲಿ ಮುಂದುವರಿಯಲಿದೆ ಎಂದು ಅವರು ತಿಳಿಸಿದರು.
ಕೋಟ ವಲಯ ನೇತೃತ್ವ: ಈ ನಡುವೆ ರೈತರ ಸಂಘದ ಕೋಟ ವಲಯದ ದಿನೇಶ್ ಹೆಗ್ಡೆ ಹಾಗೂ ಶಂಕರ್ ಕುಂದರ್ ನೇತೃತ್ವದಲ್ಲಿ ಇಂದಿನ ಧರಣಿ ಸತ್ಯಾಗ್ರಹ ನಡೆಯಿತು. ಕೋಟ ವಲಯದ ಗೋಪಾಲ ಬಂಗೇರ, ತಿಮ್ಮ ಪೂಜಾರಿ, ಕೃಷ್ಣ ಕಾಂಚನ್ ಅಲ್ಲದೇ ಪ್ರತಾಪ್‌ಚಂದ್ರ ಶೆಟ್ಟಿ, ಹರಿಪ್ರಸಾದ್ ಶೆಟ್ಟಿ, ಅಶೋಕ್ ಶೆಟ್ಟಿ ಚೋರಾಡಿ, ಬಿ.ಭುಜಂಗ ಶೆಟ್ಟಿ ಮುಂತಾದವರು ಇಂದಿನ ಅಹೋರಾತ್ರಿ ಧರಣಿಯಲ್ಲಿ ಪಾಲ್ಗೊಂಡರು.







