ಬ್ಯಾಂಕ್ ಸಿಬ್ಬಂದಿ ಕೊರತೆಯಿಂದ ಒತ್ತಡದಲ್ಲಿ ಕಾರ್ಯನಿರ್ವಹಣೆ: ಸುಪ್ರಿಯಾ
ಬ್ಯಾಂಕ್ ಯೂನಿಯನ್‌ಗಳ ಒಕ್ಕೂಟದ ನೇತೃತ್ವದಲ್ಲಿ ಧರಣಿ

ಉಡುಪಿ, ಮಾ.8: ಬ್ಯಾಂಕ್‌ಗಳಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ಒತ್ತಡದಲ್ಲಿ ಕಾರ್ಯನಿರ್ವಹಿಸುವ ಸ್ಥಿತಿ ನಿರ್ಮಾಣಗೊಂಡಿದ್ದು, ಅನಾರೋಗ್ಯ, ಮಾನಸಿಕ ಒತ್ತಡ ಹೆಚ್ಚುತ್ತಿದೆ. ಹೀಗಾಗಿ ಬ್ಯಾಂಕ್‌ಗಳಲ್ಲಿ ಸಮರ್ಪಕ ನೇಮಕಾತಿ, ವಾರದಲ್ಲಿ 5 ದಿನಗಳ ಬ್ಯಾಂಕಿಂಗ್ ಸೌಲಭ್ಯ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸು ವಂತೆ ಆಗ್ರಹಿಸಿ ಬ್ಯಾಂಕ್ ಯೂನಿಯನ್‌ಗಳ ಒಕ್ಕೂಟದ ನೇತೃತ್ವದಲ್ಲಿ ಶುಕ್ರವಾರ ಉಡುಪಿ ಕೆನರಾ ಬ್ಯಾಂಕ್ ಕೋರ್ಟ್ ರೋಡ್ ಶಾಖೆಯ ಮುಂಭಾಗ ಧರಣಿ ನಡೆಸಲಾಯಿತು.
ತಾತ್ಕಾಲಿಕ ನೌಕರರನ್ನು ಕೂಡಲೇ ಖಾಯಂಗೊಳಿಸಿ ಹೊರಗುತ್ತಿಗೆಯನ್ನು ನಿಲ್ಲಿಸಬೇಕು. ಸಿಬ್ಬಂದಿ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕು. ನೌಕರರ ಕಲ್ಯಾಣ ಸೇವೆಗಳ ಮೇಲಿನ ತೆರಿಗೆಯನ್ನು ನಿಲ್ಲಿಸಬೇಕು. ಐಡಿಬಿಐ ಬ್ಯಾಂಕ್‌ನಲ್ಲಿ ಶೇ. 51 ಸರಕಾರಿ ಈಕ್ವಿಟಿಯನ್ನು ಮುಂದುವರಿಸಬೇಕು. ಬ್ಯಾಂಕ್‌ಗಳಲ್ಲಿ ನೌಕರ ರಿಗೆ ಆಗುವ ಅನ್ಯಾಯವನ್ನು ನಿಲ್ಲಿಸಬೇಕೆಂದು ಒತ್ತಾಯಿಸಲಾಯಿತು.
ಯುಎಫ್‌ಬಿಯು ಉಡುಪಿ ಜಿಲ್ಲಾ ಸಂಚಾಲಕ ನಾಗೇಶ್ ನಾಯಕ್ ಮಾತನಾಡಿ, ಬ್ಯಾಂಕ್ ನೌಕರರದ್ದು ನ್ಯಾಯಯುತ ಬೇಡಿಕೆ. ಈ ಬೇಡಿಕೆ ಈಡೇರಿಕೆಗಾಗಿ ಮಾ.24, 25ರಂದು ದೇಶದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಚೀಫ್ ಲೇಬರ್ ಕಮಿಷನರ್ ಮಾ.18ರಂದು ಸಭೆ ಕರೆದಿದ್ದು, ನಮಗೆ ಅವರ ಮೇಲೆ ವಿಶ್ವಾಸವಿಲ್ಲ. ಇದಕ್ಕೂ ಮೊದಲು ಸಭೆ ಕರೆದಿದ್ದು, ಸ್ಪಂದನೆ ಇಲ್ಲವಾಗಿದೆ. ಈ ನಿಟ್ಟಿನಲ್ಲಿ ಮಾ.11ರಂದು ಎಲ್ಲಾ ಬ್ಯಾಂಕ್‌ಗಳ ಪ್ರಾದೇಶಿಕ ಕಚೇರಿಯ ಮುಂಭಾಗ ಪ್ರತಿಭಟನೆ ನಡೆಸಬೇಕು. ಬ್ಯಾಂಕ್ ನೌಕರರ ನ್ಯಾಯಯುತ ಬೇಡಿಕೆಗೆ ಸ್ಪಂದನೆ ಸಿಗುವ ತನಕವೂ ಹೋರಾಟದಿಂದ ಹಿಂದೆ ಸರಿಯಬಾರದೆಂದರು.
ಎನ್‌ಸಿಬಿಇ ಮುಖಂಡರಾದ ಸುಪ್ರಿಯಾ ಮಾತನಾಡಿ, ಕಳೆದ 10 ವರ್ಷಗಳಲ್ಲಿ 2 ಲಕ್ಷಕ್ಕೂ ಅಧಿಕ ಬ್ಯಾಂಕ್ ಸಿಬ್ಬಂದಿ ವೃತ್ತಿಯಿಂದ ನಿವೃತ್ತಿ ಯಾಗಿದ್ದು, ಈ ಸ್ಥಾನಕ್ಕೆ ಸೂಕ್ತ ನೇಮಕಾತಿಯಾಗಿಲ್ಲ. 1 ಲಕ್ಷಕ್ಕೂ ಅಧಿಕ ಕ್ಲಾರಿಕಲ್ ಸಿಬ್ಬಂದಿ ಹುದ್ದೆ ಖಾಲಿ ಇದೆ. ಸದ್ಯದ ಸ್ಥಿತಿಯಲ್ಲಿ ಒಬ್ಬರು 2-3 ಹುದ್ದೆಯ ಜವಾಬ್ದಾರಿ ಯನ್ನು ನಿಭಾಯಿಸುವಂತಾಗಿದೆ. ಸಿಬ್ಬಂದಿ ಕೊರತೆ ನಮ್ಮ ಮಾನಸಿಕ ಒತ್ತಡ, ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂದು ದೂರಿದರು.
ಎಐಬಿಇಎ ಮುಖಂಡರಾದ ರಮೇಶ್, ಐಬೋಕ್‌ನ ಸೂರಜ್ ಉಪ್ಪೂರು, ಎಐಬಿಒಎ ರವಿಶಂಕರ್, ಬಿಪಾ ಮುಖಂಡ ಪಿ.ಕೆ. ಜಾ, ಎನ್‌ಒಬಿಯ ಶ್ಯಾಮಲಾ ಪ್ರಭು, ವಿಶಾಲ್ ಸಿಂಗ್, ಮರಿಯಾ ಮಾಥಯಸ್ ಉಪಸ್ಥಿತರಿದ್ದರು. ಮನೋಜ್ ವಂದಿಸಿದರು.







