ಕೊಲಿಜಿಯಂ ಬದಲು ನಿಯಮ ರೂಪಿಸಿ ನ್ಯಾಯಧೀಶರ ಆಯ್ಕೆ ಅಗತ್ಯ: ನ್ಯಾ.ನಾಗ್ಮೋಹನ್‌ದಾಸ್

ಉಡುಪಿ : ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ, ನ್ಯಾಯಾಧೀಶರೇ ಮಾಡಿಕೊಂಡಿರುವ ಕೊಲಿಜಿಯಂ ವ್ಯವಸ್ಥೆ ಸರಿ ಇಲ್ಲ. ಈ ವ್ಯವಸ್ಥೆಯ ಬದಲು ಸಂವಿಧಾನಬದ್ದವಾಗಿ ಕೆಲವೊಂದು ನಿಯಮಗಳನ್ನು ರೂಪಿಸಿ, ದಲಿತರು, ಮಹಿಳೆಯರು, ಅಲ್ಪಸಂಖ್ಯಾತರಿಗೂ ಪ್ರಾತಿನಿಧ್ಯ ದೊರಕುವಂತೆ ನ್ಯಾಯಧೀಶರ ಆಯ್ಕೆ ಪ್ರಕ್ರಿಯೆ ನಡೆಯಬೇಕು ಎಂದು ಕರ್ನಾಟಕ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ದಾಸ್ ಅಭಿಪ್ರಾಯ ಪಟ್ಟಿದ್ದಾರೆ.
ಉಡುಪಿಯಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2022ರಿಂದ 25ರವರೆಗೆ ಸುಪ್ರೀಂಕೋರ್ಟ್‌ಗೆ ಆಯ್ಕೆಯಾದ 18 ನ್ಯಾಯಮೂರ್ತಿಗಳಲ್ಲಿ ಒಬ್ಬರೇ ಒಬ್ಬರು ಮಹಿಳೆಯರಿಲ್ಲ. ಈ ವ್ಯವಸ್ಥೆ ಬದಲಾಗಬೇಕು. ಸಾಮರ್ಥ್ಯ ಇಲ್ಲದೇ ಮಹಿಳೆಯರು ನ್ಯಾಯಮೂರ್ತಿಯಾಗಿ ಆಯ್ಕೆಯಾಗದೇ ಇರುವುದಲ್ಲ. ಅವರನ್ನು ಆಯ್ಕೆ ಮಾಡುವ ಮನಸ್ಥಿತಿ ಇಲ್ಲದೇ ಈ ರೀತಿ ಆಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೊಲಿಜಿಯಂ ವ್ಯವಸ್ಥೆಯಿಂದ ಸದ್ಬಳಕೆ ಹಾಗು ದುರ್ಬಳಕೆ ಆಗಿದೆ. ಆದರೆ ನ್ಯಾಯಧೀಶರ ಶಿಫಾರಸ್ಸಿನ ಮೇಲೆ ಇತರ ಹೈಕೋರ್ಟ್ ಹಾಗು ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಧೀಶರನ್ನು ಆಯ್ಕೆ ಮಾಡುವುದು ಎಷ್ಟು ಸರಿ. ಈ ವ್ಯವಸ್ಥೆಯಿಂದ ಜಿಲ್ಲಾ ನ್ಯಾಯಾಲಯಗಳಲ್ಲಿ ನ್ಯಾಯಧೀಶರಾಗಿರುವ ಪ್ರತಿಭಾವಂತರು ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟಿನಲ್ಲಿ ನ್ಯಾಯಾಧೀಶ ರಾಗುವ ಅವಕಾಶದಿಂದ ವಂಚಿತರಾ ಗುತ್ತಿದ್ದಾರೆ ಎಂದರು.
ಸಂವಿಧಾನ ಬದಲಾಯಿಸಲು ಅವಕಾಶವಿಲ್ಲ, ತಿದ್ದುಪಡಿ ಮಾಡಬಹುದು. ಇದರ ಬಗ್ಗೆ ಕೇಶವನಂದ ಭಾರತಿ ಹಾಗೂ ಕೇರಳ ಸರಕಾರದ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಉಲ್ಲೇಖಿಸಿದೆ. ಕರಾವಳಿ ಜಿಲ್ಲೆಯಲ್ಲಿ ಕೋಮು ವಾದಿ ಶಕ್ತಿಗಳ ಪ್ರಭಾವ ಹೆಚ್ಚಿದೆ. ಇದು ಆರೋಗ್ಯಕರವಾದ ಪ್ರಭಾವ ಅಲ್ಲ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಸಂವಿಧಾನವನ್ನು ಜನರಿಗೆ ತಲುಪಿಸುವ ಕಾರ್ಯ ಮಾಡಬೇಕು ಎಂದು ಅವರು ತಿಳಿಸಿದರು.
ಯುವಪೀಳಿಗೆ ಸೇರಿದಂತೆ ಸಾರ್ವಜನಿಕರಿಗೆ ಸಂವಿಧಾನದ ಮೌಲ್ಯಗಳನ್ನು ತಲುಪಿಸುವ ನಿಟ್ಟಿನಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ಸಂವಿಧಾನ ಓದು ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ. ಕಾಲೇಜು ವಿದ್ಯಾರ್ಥಿಗಳು, ಸಮಾಜ ಮುಖಿ ಸಂಘಟನೆಗಳೊಂದಿಗೆ ಸೇರಿಕೊಂಡು ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಸಿಐಟಿಯು ಮುಖಂಡ ಬಾಲಕೃಷ್ಣ ಶೆಟ್ಟಿ, ಉಡುಪಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನಾರಾಯಣ ಸ್ವಾಮಿ ಎಂ. ಉಪಸ್ಥಿತರಿದ್ದರು.







