ಸಾಂಸ್ಕೃತಿಕ ನೆಲೆಕಟ್ಟಿನಲ್ಲಿ ಸಂವಿಧಾನ ತಿಳಿಸುವ ಪ್ರಯತ್ನ ಅಗತ್ಯ: ನ್ಯಾ.ನಾಗಮೋಹನ್‌ದಾಸ್
ಸಂವಿಧಾನ ಓದು ಅಧ್ಯಯನ ಶಿಬಿರ ಸಮಾರೋಪ

ಉಡುಪಿ : ಗ್ರಾಮ, ಅರಣ್ಯ, ಬೆಟ್ಟಗುಡ್ಡಗಳಲ್ಲಿರುವ ಅನಕ್ಷರಸ್ಥ ಜನರಿಗೂ ಸಂವಿಧಾನವನ್ನು ತಲುಪಿಸ ಬೇಕಾಗಿದೆ. ಅದು ಕೇವಲ ಪುಸ್ತಕ, ಭಾಷಣದಿಂದ ಮಾತ್ರ ಸಾಧ್ಯ ಇಲ್ಲ. ತಾಳಮದ್ದಲೆ, ಯಕ್ಷಗಾನದಂತಹ ಎಲ್ಲ ರೀತಿಯ ಕಲಾಪ್ರಕಾರಗಳ ಮೂಲಕ ಸಂವಿಧಾನವನ್ನು ಜನರಿಗೆ ಸಾಂಸ್ಕೃತಿಕ ನೆಲೆಕಟ್ಟಿನಲ್ಲಿ ತಿಳಿ ಸುವ ಪ್ರಯತ್ನ ಮಾಡಬೇಕಾಗಿದೆ ಎಂದು ಕರ್ನಾಟಕ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್‌ದಾಸ್ ಹೇಳಿದ್ದಾರೆ.
ಸಂವಿಧಾನ ಓದು ಅಭಿಯಾನ- ಕರ್ನಾಟಕ, ವಿಮಾ ನೌಕರರ ಸಂಘ ಉಡುಪಿ ವಿಭಾಗ ಹಾಗೂ ಉಡುಪಿ ಜಿಲ್ಲೆಯ ಸಮಾನ ಮನಸ್ಕ ಸಂಘಟನೆಗಳ ವತಿಯಿಂದ ಉಡುಪಿಯ ಎಲ್‌ಐಸಿ ಎಂಪ್ಲಾಯೀಸ್ ಕೋ ಆರಪೇಟಿವ್ ಸೊಸೈಟಿ ಹಾಲ್‌ನಲ್ಲಿ ರವಿವಾರ ನಡೆದ ಉಡುಪಿ ಜಿಲ್ಲಾ ಮಟ್ಟದ ಸಂವಿಧಾನ ಓದು ಅಧ್ಯಯನ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಸಂವಿಧಾನದ ಕುರಿತು ನಮ್ಮ ತಿಳುವಳಿಕೆಯನ್ನು ಇನ್ನಷ್ಟು ಹೆಚ್ಚು ಮಾಡಬೇಕು. ಇಂತಹ ಕಾರ್ಯಕ್ರಮ ಗಳನ್ನು ಹೆಚ್ಚು ಹೆಚ್ಚು ಹಮ್ಮಿಕೊಳ್ಳಲು ಮುಂದಾಗಬೇಕು. ಕೇವಲ ಜಿಲ್ಲಾ ಮಟ್ಟದಲ್ಲಿ ಮಾತ್ರವಲ್ಲ ತಾಲೂಕು ಗ್ರಾಮ ಮಟ್ಟದಲ್ಲೂ ನಡೆಸಿ ಈ ವಿಚಾರನನ್ನು ಗ್ರಾಮೀಣ ಜನತೆಯತ್ತವೂ ತೆಗೆದುಕೊಂಡು ಹೋಗ ಬೇಕಾ ಗಿದೆ. ಪುಸ್ತಕ ಓದುದರಿಂದ ವಿದ್ಯಾವಂತರು ಮಾತ್ರ ವಿಚಾರ ತಿಳಿದು ಕೊಳ್ಳಬಹುದು. ಆದರೆ ಗ್ರಾಮೀಣ ಪ್ರದೇಶದ ಅನರಕ್ಷರಸ್ಥ ಜನರಿಗೆ ಸಂವಿಧಾನ ವನ್ನು ತಿಳಿಸಿಕೊಡುವ ಕಾರ್ಯ ಮಾಡಬೇಕು ಎಂದರು.
ಮುಖ್ಯ ಅತಿಥಿಯಾಗಿ ಉದ್ಯಮಿ ಪ್ರಸಾದ್‌ರಾಜ್ ಕಾಂಚನ್ ಮಾತನಾಡಿ, ಧರ್ಮ ಎಂಬುದು ನಮ್ಮ ವೈಯ ಕ್ತಿಕ. ರಾಜಕೀಯ, ಆಡಳಿತದಲ್ಲಿ ಧರ್ಮ ವನ್ನು ಬಿಟ್ಟು ನಾವು ಸಮಾನವಾಗಿ ನಡೆದುಕೊಳ್ಳಬೇಕು. ಸಂವಿಧಾನದ ಪ್ರಕಾರ ಈ ದೇಶವನ್ನು ಮುನ್ನಡೆಸದಿದ್ದರೆ ಆರ್ಥಿಕ ಅಸಮಾನತೆ ಸೃಷ್ಠಿಯಾಗುತ್ತದೆ. ಬಡವರು ಬಡವರಾಗಿಯೇ ಉಳಿದು, ಶ್ರೀಮಂತರು ಇನ್ನಷ್ಟು ಶ್ರೀಮಂತರಾಗುತ್ತಾರೆ. ಆದುದರಿಂದ ನಾವು ಸಂವಿಧಾನ ಬದ್ಧವಾಗಿ ನಡೆದುಕೊಳ್ಳುವ ಮೂಲಕ ಭಾರತವನ್ನು ಇಡೀ ಜಗತ್ತಿನಲ್ಲಿಯೇ ಬಲಿಷ್ಠ ರಾಷ್ಟ್ರವನ್ನಾಗಿ ನಿರ್ಮಾಣ ಮಾಡ ಬೇಕು ಎಂದು ಹೇಳಿದರು.
ವಿಮಾ ನೌಕರರ ಸಂಘದ ಹಿರಿಯ ಮುಖಂಡ ಪಿ.ವಿಶ್ವನಾಥ ರೈ ಮಾತನಾಡಿ, ಇಂದು ನಮ್ಮ ದೇಶದ ಸಂವಿಧಾನವನ್ನು ಬದಲಾಯಿಸುವ ಪ್ರಯತ್ನಗಳು ನಡೆಯುತ್ತಿದೆ. ಅದಕ್ಕಾಗಿ ಒಂದು ವರ್ಗ ಅದಕ್ಕೆ ಬೇಕಾದ ತಯಾರಿಗಳನ್ನು ನಡೆಸುತ್ತಿದೆ. ಈ ದೇಶದ ಜನರ ಬಗ್ಗೆ ಚಿಂತನೆ ಉಳ್ಳವರು ಭಾರತವನ್ನು ಸಂವಿಧಾನದ ಅಡಿಯಲ್ಲಿಯೇ ಉಳಿಸಿಕೊಂಡು ಮುನ್ನಡೆಸಿಕೊಂಡು ಹೋಗ ಬೇಕು. ಆ ನಿಟ್ಟಿನಲ್ಲಿ ಹೋರಾಟ ಮಾಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಿಬಿರದ ಭಾಗವಹಿಸಿದವರಿಗೆ ಪ್ರಮಾಣ ಪತ್ರವನ್ನು ನೀಡಲಾಯಿತು. ಉದ್ಯಮಿ ಯಾಸೀನ್ ಮಲ್ಪೆ, ಉಡುಪಿ ವಿಮಾ ನೌಕರರ ಸಂಘದ ಅಧ್ಯಕ್ಷ ಪ್ರಭಾಕರ ಬಿ.ಕುಂದರ್, ಸಿಐಟಿಯು ಮುಖಂಡ ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.
ಉಡುಪಿ ದಲಿತ ಹಕ್ಕುಗಳ ಸಮಿತಿಯ ಸಂಚಾಲಕ ಸಂಜೀವ ಬಳ್ಕೂರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಉಡುಪಿ ವಿಮಾ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ವಿಶ್ವನಾಥ್ ವಂದಿಸಿ ದರು. ಇದಕ್ಕೂ ಮುನ್ನಾ ನಡೆದ ಗೋಷ್ಠಿಯಲ್ಲಿ ಸಂವಿಧಾನ ಮತ್ತು ಸಾಮಾಜಿಕ ನ್ಯಾಯ ಕುರಿತು ಬಿ.ರಾಜಶೇಖರಮೂರ್ತಿ ಹಾಗೂ ಸಂವಿಧಾನ ಮತ್ತು ಜಾತ್ಯತೀತತೆ ಕುರಿತು ಆರ್.ರಾಮಕೃಷ್ಣ ಮಾತನಾಡಿದರು.







