ಮಹಿಳೆಯ ಸಾಧನೆಯನ್ನು ಪ್ರಶ್ನಿಸುವ ಮನೋಭಾವದಿಂದ ಹೊರಬನ್ನಿ: ಡಿಸಿ ವಿದ್ಯಾಕುಮಾರಿ

ಉಡುಪಿ, ಮಾ.9: ಲಿಂಗ ತಾರತಮ್ಯ ಎಲ್ಲಾ ಕ್ಷೇತ್ರಗಳಲ್ಲಿಯೂ ಸರ್ವೇ ಸಾಮಾನ್ಯವಾಗಿದೆ. ಇದನ್ನು ಹೋಗಲಾಡಿಸುವುದರೊಂದಿಗೆ ಮಹಿಳೆಯರಿಗೆ ಗೌರವಾಯುತವಾದ ಸಮಾನ ಅವಕಾಶ ದೊರಕು ವಂತಾಗಬೇಕು. ಸಮಾಜ ಹಾಗೂ ಕುಟುಂಬದವರು ಮಹಿಳೆಯರ ಸಾಧನೆಯನ್ನು ಪ್ರಶ್ನಿಸುವ ಮನೋಭಾವದಿಂದ ಹೊರಗೆ ಬರಬೇಕು. ಅದನ್ನು ಮನಹ ಪೂರ್ವಕವಾಗಿ ಒಪ್ಪುವಂತಹ ಮನೋಸ್ಥಿತಿ ಬೆಳೆಸಿಕೊಳ್ಳಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಡಾ.ಕೆವಿದ್ಯಾಕುಮಾರಿ ಹೇಳಿದ್ದಾರೆ.
ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಹಾಗೂ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ, ಜಿಲ್ಲಾ ಹಾಗೂ ತಾಲೂಕು ಸ್ತಿಥ ಶಕ್ತಿ ಒಕ್ಕೂಟ ಹಾಗೂ ಪರ್ಯಾಯ ಪುತ್ತಿಗೆ ಮಠಗಳ ಸಂಯುಕ್ತ ಆಶ್ರಯದಲ್ಲಿ ಶನಿವಾರ ಉಡುಪಿ ರಾಜಾಂಗಣದದಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಹೆಣ್ಣು ಮಕ್ಕಳಿಗೆ ಶಿಕ್ಷಣ ಪಡೆಯಲು ಪ್ರೋತ್ಸಾಹ ನೀಡುವುದರೊಂದಿಗೆ ಸಮಾಜದಲ್ಲಿ ಉನ್ನತ ಸ್ಥಾನವನ್ನು ಪಡೆಯಲು ಪೂರಕ ವಾತಾವರಣವನ್ನು ಕಲ್ಪಿಸಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕು. ಪುರುಷರು ಹಾಗೂ ಮಹಿಳೆಯರು ಸಮಾಜದಲ್ಲಿ ಸಮಾನತೆಯ ನೆಲೆಯಲ್ಲಿ ಮುಂದೆ ಸಾಗಬೇಕು. ಮಹಿಳೆಯರು ಯಶಸ್ಸು ಸಾಧಿಸಲು ಸಮಾಜದಲ್ಲಿ ಸುರಕ್ಷಿತ ಸ್ಥಳವನ್ನು ಸೃಷ್ಟಿಸಬೇಕು ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ಮಾತನಾಡಿ, ಮಹಿಳೆಯರು ಒಂದೇ ಕ್ಷೇತ್ರಕ್ಕೆ ಸೀಮಿತರಾಗಿರದೆ, ಆರ್ಥಿಕ, ರಾಜಕೀಯ, ತಂತ್ರಜ್ಞಾನ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ತನ್ನದೇ ಆದ ಚಾಪನ್ನು ಮೂಡಿಸಿದ್ದಾರೆ. ನಮ್ಮಿಂದ ಯಾವುದೇ ಕೆಲಸ ಮಾಡಲು ಅಸಾಧ್ಯ ಎಂದು ಭಾವಿಸಿ, ಸುಮ್ಮನೆ ಕುಳಿತರೆ ಜೀವನದಲ್ಲಿ ಮುಂದೆ ಸಾಗಲು ಆಗುವುದಿಲ್ಲ. ನಮ್ಮ ಜೀವನ ಮಟ್ಟವನ್ನು ಸುಧಾರಿಸುವ ಕುರಿತು ಪ್ರಗತಿ ಚಿಂತನೆ ಮಾಡಿದಾಗ ಯಶಸ್ಸು ನಮ್ಮದಾಗುತ್ತದೆ ಎಂದು ತಿಳಿಸಿದರು.
ನಗರಾಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕಿ ನಿರ್ದೇಶಕಿ ಪೂರ್ಣಿಮಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣ ಅಧಿಕಾರಿ ಅನುರಾಧ ಹಾದಿಮನೆ ಮತ್ತಿತರರು ಉಪಸ್ಥಿತರಿದ್ದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಶ್ಯಾಮಲಾ ಸಿ.ಕೆ ಪ್ರಾಸ್ತ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ದೀಪ ಹಾಗೂ ಶಾರದಾ ಕಾರ್ಯಕ್ರಮ ನಿರೂಪಿಸಿದರು. ವಸಂತಿ ಕೊರಡ್ಕರ್ ವಂದಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಉಡುಪಿ ವೈಕುಂಠ ಬಾಳಿಗಾ ಕಾನೂನು ಮಹಾ ವಿದ್ಯಾಲಯದ ನಿರ್ದೇಶಕಿ ನಿರ್ಮಲಾ ಕುಮಾರಿ, ಮಹಿಳೆಯರಿಗೆ ಕಾನೂನು ಅರಿವು ಹಾಗೂ ಉದ್ಯಮಿ ದಿವ್ಯಾ ರಾಣಿ ಆಧುನಿಕ ಮಹಿಳೆ ಆತ್ಮ ವಿಶ್ವಾಸದಿಂದ ಪ್ರಗತಿಯತ್ತ ವಿಷಯದ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮಕ್ಕೂ ಮುನ್ನ ಮಹಿಳೆಯರು ಉತ್ಪಾದಿಸಿದ ವಸ್ತುಗಳ ವಸ್ತು ಪ್ರದರ್ಶನವನ್ನು ಸ್ವಾಮೀಜಿ ಉದ್ಘಾಟಿಸಿದರು. ಮಹಿಳೆಯರಿಂದ ಮನೋರಂಜನ ಕಾರ್ಯಕ್ರಮ ನಡೆಯಿತು.







